ನವದೆಹಲಿ, ಜೂ.8- ದೇಶದಲ್ಲಿ ಬಿಜೆಪಿ ಪ್ರಭಾವವನ್ನು ಎದುರಿಸಲು ಒಗ್ಗಟ್ಟು ಪ್ರದರ್ಶಿಸುವ ಹಾಗೂ ಮುಂದಿನ ಚುನಾವಣೆಗಳಿಗೆ ಕಾರ್ಯತಂತ್ರವನ್ನು ಮರುರೂಪಿಸುವ ಉದ್ದೇಶದಿಂದ ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರು ಇಂದಿಲ್ಲಿ ಮಹತ್ವದ ಸಭೆ ನಡೆಸಿದರು.
ರಾಷ್ಟ್ರ ರಾಜಧಾನಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸೇರಿದಂತೆ ಎಡಪಕ್ಷಗಳ ನಾಯಕರು ಭಾಗವಹಿಸಿದ್ದರು.
ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ, ಸಿಪಿಐ(ಎಂ) ನಾಯಕ ಜಾನ್ ಬ್ರಿಟ್ಟಾಸ್, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹಾಗೂ ಇತರೆ ಸಣ್ಣ ಪಕ್ಷಗಳ ಮುಖಂಡರೂ ಸಭೆಯಲ್ಲಿ ಉಪಸ್ಥಿತರಿದ್ದರು.ಒಟ್ಟು 23 ರಾಜಕೀಯ ಪಕ್ಷಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಮುಂದಿನ ರಾಜ್ಯಗಳ ಚುನಾವಣೆಗಳು ಹಾಗೂ 2029ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ರೂಪಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.
2024ರ ಲೋಕಸಭಾ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಇಂಡಿಯಾ ಮೈತ್ರಿಕೂಟದ ಉನ್ನತ ನಾಯಕರು ಅಧಿಕೃತವಾಗಿ ಒಂದೇ ವೇದಿಕೆಯಲ್ಲಿ ಸೇರಿರುವುದು ಗಮನಾರ್ಹವಾಗಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ 25ಕ್ಕೂ ಹೆಚ್ಚು ಪಕ್ಷಗಳ ಸುಮಾರು 50 ನಾಯಕರು ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸೇರಿದಂತೆ ಚುನಾವಣಾ ಅಕ್ರಮಗಳ ಆರೋಪಗಳು ಚರ್ಚೆಗಳಾಗಿದ್ದವು.
ಆ ಬಳಿಕ ಸಂಸತ್ ಅಧಿವೇಶನಗಳ ಮುನ್ನ ನಡೆಯುವ ಸಮಾಲೋಚನಾ ಸಭೆಗಳಲ್ಲಷ್ಟೇ ಇಂಡಿಯಾ ಮೈತ್ರಿಕೂಟದ ನಾಯಕರು ಭೇಟಿಯಾಗುತ್ತಿದ್ದರು. ಅಲ್ಲಿ ಸಂಸತ್ತಿನ ಒಳಾಂಗಣ ಕಾರ್ಯತಂತ್ರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಒಟ್ಟಾಗಿ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು.
ಇದೇ ವೇಳೆ, ಡಿಎಂಕೆ ಹಾಗೂ ಆಮ್ ಆದಿ ಪಕ್ಷ (ಎಎಪಿ) ಸಭೆಯಿಂದ ದೂರ ಉಳಿದಿವೆ. ಎಎಪಿ ಈಗಾಗಲೇ ಇಂಡಿಯಾ ಮೈತ್ರಿಕೂಟದಿಂದ ಅಂತರ ಕಾಯ್ದುಕೊಂಡಿದ್ದು, ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವು ಡಿಎಂಕೆಯೊಂದಿಗಿನ ಮೈತ್ರಿ ಮುರಿದು ಟಿವಿಕೆ ನೇತೃತ್ವದ ಸರ್ಕಾರದೊಂದಿಗೆ ಕೈಜೋಡಿಸಿದ ಹಿನ್ನೆಲೆಯಲ್ಲಿ ಡಿಎಂಕೆ ಈ ಸಭೆಯನ್ನು ಬಹಿಷ್ಕರಿಸಿದೆ.
ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅನುಭವಿಸಿದ ಚುನಾವಣಾ ಹಿನ್ನಡೆಯೂ ವಿರೋಧ ಪಕ್ಷಗಳನ್ನು ಮತ್ತೆ ಒಂದಾಗುವಂತೆ ಮಾಡಿದೆ. ಬಂಗಾಳದಲ್ಲಿ ತಮ ನಾಯಕರ ಮೇಲೆ ನಡೆಯುತ್ತಿರುವ ದಾಳಿಗಳ ಆರೋಪವನ್ನು ಟಿಎಂಸಿ ಸಭೆಯಲ್ಲಿ ಪ್ರಸ್ತಾಪಿಸಿದೆ.
ಮತ್ತೊಂದೆಡೆ, ಇತ್ತೀಚಿನ ವಿಧಾನಸಭಾ ಚುನಾವಣೆಗಳು ಇಂಡಿಯಾ ಮೈತ್ರಿಕೂಟದೊಳಗಿನ ಭಿನ್ನಾಭಿಪ್ರಾಯಗಳನ್ನೂ ಬಹಿರಂಗಪಡಿಸಿವೆ. ಕೇರಳ ಚುನಾವಣೆಯಲ್ಲಿ ಎಡಪಕ್ಷಗಳು ಬಿಜೆಪಿಯೊಂದಿಗೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿದ್ದವು ಎಂಬ ಕಾಂಗ್ರೆಸ್ ಆರೋಪದ ಕುರಿತು ಸಿಪಿಐ(ಎಂ) ನಾಯಕರು ತಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಮನಾರ್ಹವಾಗಿ, ಎಡಪಕ್ಷಗಳು ಅಧಿಕಾರದಲ್ಲಿದ್ದ ಏಕೈಕ ರಾಜ್ಯವಾದ ಕೇರಳದಲ್ಲೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಎದುರು ಸೋಲು ಅನುಭವಿಸಿವೆ. ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲಯನ್ಸ್ (ಇಂಡಿ)ಮೈತ್ರಿಕೂಟದ ಕೊನೆಯ ಅಧಿಕೃತ ಸಭೆ 2024ರ ಜೂನ್ 1ರಂದು, ಲೋಕಸಭಾ ಚುನಾವಣೆಗೆ ಮುನ್ನ ನವದೆಹಲಿಯಲ್ಲಿ ನಡೆದಿತ್ತು. ಆರಂಭದಲ್ಲಿ ಈ ಮೈತ್ರಿಕೂಟವು 25ಕ್ಕೂ ಹೆಚ್ಚು ರಾಜಕೀಯ ಪಕ್ಷಗಳನ್ನು ಒಳಗೊಂಡಿತ್ತು.
