Thursday, April 16, 2026
Homeರಾಷ್ಟ್ರೀಯಲೋಕಸಭೆಯಲ್ಲಿ ಕೋಲಾಹಲ : ಅಶಿಸ್ತಿನ ವರ್ತನೆಗಾಗಿ 8 ಕಾಂಗ್ರೆಸ್ ಸಂಸದರ ಅಮಾನತು

ಲೋಕಸಭೆಯಲ್ಲಿ ಕೋಲಾಹಲ : ಅಶಿಸ್ತಿನ ವರ್ತನೆಗಾಗಿ 8 ಕಾಂಗ್ರೆಸ್ ಸಂಸದರ ಅಮಾನತು

Eight Congress MPs suspended from Lok Sabha for 'unruly' behaviour amid chaos

ನವದೆಹಲಿ, ಫೆ.3- ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಕುರಿತು ವಿಪಕ್ಷಗಳ ಗದ್ದಲದ ನಡುವೆ 2 ಬಾರಿ ಮುಂದೂಡಿದ್ದ ಲೋಕಸಭಾ ಕಲಾಪ ಮಧ್ಯಾಹ್ನ 2 ಗಂಟೆಗೆ ಆರಂಭವಾಗುತ್ತಿದ್ದಂತೆ ಮತ್ತೆ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಕಾಗದಗಳನ್ನು ಹರಿದುಹಾಕಿ ಎರಚಿ ಅಶಿಸ್ತು ತೋರಿದ ಹಿನ್ನೆಲೆಯಲ್ಲಿ 8 ಸಂಸದರನ್ನು ಅಮಾನತುಗೊಳಿಸಲಾಗಿದೆ.

ಲೋಕಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ನಂತರ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಕುರಿತಂತೆ ಸರ್ಕಾರದ ವಿರುದ್ಧ ವ್ಯಾಪಕ ಟೀಕೆಗಳನ್ನು ನಡೆಸಿದ್ದ ವಿಪಕ್ಷ ಸದಸ್ಯರು ಸದನದ ಬಾವಿಗೆ ಇಳಿದು ಘೋಷಣೆಗಳನ್ನು ಕೂಗಿದರು.

ಇದರಿಂದಾಗಿ ಮಧ್ಯಾಹ್ನ 12 ಗಂಟೆಗೆ ಸದನವನ್ನು ಮುಂದೂಡಲಾಯಿತು. ನಂತರ ಪುನಃ 1 ಗಂಟೆಗೆ ಸದನ ಆರಂಭಗೊಳ್ಳುತ್ತಿದ್ದಂತೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿ ಕೆಲ ವಿಪಕ್ಷ ಸಂಸದರು ಕಾಗದಗಳನ್ನು ಹರಿದು ಸ್ಪೀಕರ್‌ ಮುಂಭಾಗ ಎಸೆದು ಅಶಿಸ್ತು ತೋರಿದರು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದುದನ್ನು ಅರಿತು ಸ್ಪೀಕರ್‌ ಸದನವನ್ನು 2 ಗಂಟೆಗೆ ಮುಂದೂಡಿದ್ದರು.

ನಂತರ ವಿಪಕ್ಷ ನಾಯಕ ರಾಹುಲ್‌ಗಾಂಧಿಯವರು ಮಾಜಿ ಸೇನಾ ಮುಖ್ಯಸ್ಥರ ಪುಸ್ತಕದ ವಿಷಯಗಳನ್ನು ಪ್ರಸ್ತಾಪಿಸಲು ಮುಂದಾದಾಗ ಅದಕ್ಕೆ ಅಧಿಕೃತ ಸಹಿ ಬೇಕು ಎಂದು ತಿಳಿಸಿ ಸ್ಪೀಕರ್‌ ಅದನ್ನು ಪರಿಶೀಲಿಸಿ 3 ಗಂಟೆಗೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.

ನಂತರ ರಾಹುಲ್‌ಗಾಂಧಿಯವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಸಮಗ್ರತೆ ವಿರುದ್ಧವಾಗಿ ರಾಜಿ ಮಾಡಿಕೊಂಡಿದ್ದಾರೆ. ಭಾರತದ ಜನರು ಇದನ್ನು ಯೋಚಿಸಬೇಕು. ನರೇಂದ್ರ ಮೋದಿಯವರು ಜನರ ಶ್ರಮ, ರಕ್ತ ಮತ್ತು ಬೆವರನ್ನು ಮಾರಿದ್ದಾರೆ. 4 ತಿಂಗಳಿನಿಂದ ಸ್ಥಗಿತಗೊಂಡಿದ್ದ ವ್ಯಾಪಾರ ಒಪ್ಪಂದ ಒಮೆಲೇ ಮುನ್ನಲೆಗೆ ಬರಲು ಕಾರಣ ಏನು ಎಂದು ಪ್ರಶ್ನಿಸಿದರು.

ಜನರನ್ನು ಮಾತ್ರವಲ್ಲದೆ ದೇಶವನ್ನೂ ಮಾರಾಟ ಮಾಡಲಾಗಿದೆ. ಅದಕ್ಕಾಗಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಇಡೀ ಇತಿಹಾಸದಲ್ಲಿ ಮೊದಲ ಬಾರಿಗೆ ವಿಪಕ್ಷ ನಾಯಕರಿಗೆ ಮಾತನಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದರು.

ಇದಕ್ಕೆ ಆಡಳಿತ ಪಕ್ಷದ ಸದಸ್ಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ ಅಪ್ರಸ್ತುತವಾದ ವಿಷಯಗಳನ್ನು ಪ್ರಸ್ತಾಪಿಸಿ, ಚರ್ಚೆಗೆ ಸರ್ಕಾರ ಸಿದ್ಧವೆಂದರೂ ಕೂಡ ಸದನದ ಗೌರವ ಮತ್ತು ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಈ ವೇಳೆ ಸದನದಲ್ಲಿ ಏರುದನಿಯ ಘೋಷಣೆಗಳಿಂದ ಗದ್ದಲ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಪೀಕರ್‌ ಓಂ ಬಿರ್ಲಾ ಅವರು ಸಂಸದರ ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಈ ನಡುವೆ ಸ್ಪೀಕರ್‌ ಮುಂದೆ ಕಾಗದಗಳನ್ನು ಹರಿದು ಎಸೆದು ಅಶಿಸ್ತು ತೋರಿದ 8 ಸಂಸದರನ್ನು ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಬೇಕು ಎಂದು ಸಂಸದೀಯ ವ್ಯವಹಾರ ಸಚಿವ ಕಿರಣ್‌ ರಿಜಿಜು ಪ್ರಸ್ತಾಪ ಮಂಡಿಸಿದಾಗ ಅದನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ನಂತರ ಸ್ಪೀಕರ್‌ ಕಾಂಗ್ರೆಸ್‌‍ನ ಸಂಸದರಾದ ಅಮರಿಂದರ್‌ ಸಿಂಗ್‌ ರಾಜಾ ವಾರಿಂಗ್‌, ಗುರುದೀಪ್‌ ಸಿಂಗ್‌ ಔಜ್ಲಾ, ಹಿಬಿ ಈಡನ್‌, ಡೀನ್‌ ಕುರಿಯಾಕೋಸ್‌‍, ಪ್ರಶಾಂತ್‌ ಪಡೋಲೆ, ಕಿರಣ್‌ ಕುಮಾರ್‌ ರೆಡ್ಡಿ, ಎಸ್‌‍.ವೆಂಕಟರಾಮನ್‌ ಮತ್ತು ಮಾಣಿಕ್ಕಮ್‌ ಟ್ಯಾಗೋರ್‌ ಅವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಘೋಷಿಸಿದರು.
ನಂತರ ಸದನವನ್ನು ನಾಳೆ 11 ಗಂಟೆಗೆ ಮುಂದೂಡಲಾಯಿತು.

RELATED ARTICLES

Latest News