ನವದೆಹಲಿ,ಮೇ 4- ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಮತದಾನೋತ್ತರ ಸಮೀಕ್ಷೆಗಳು ನಿಜವಾಗಿವೆ.ಈ ಹಿಂದೆ ಲೋಕಸಭೆ ಮತ್ತು ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆ ವೇಳೆ ಮತದಾನೋತ್ತರ ಸಮೀಕ್ಷೆಗಳು ಉಲ್ಟಾ ಆಗಿ ಇದರ ನೈಜತೆಯನ್ನೇ ಪ್ರಶ್ನೆ ಮಾಡುವಂತಾಗಿತ್ತು.
ಇತ್ತೀಚೆಗೆ ಮುಗಿದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಮುಗಿದ ಬೆನ್ನಲ್ಲೇ ವಿವಿಧ ಖಾಸಗಿ ಸಂಸ್ಥೆಗಳು ನಡೆಸಿದ್ದ ಮತದಾನೋತ್ತರ ಸಮೀಕ್ಷೆಯಲ್ಲಿ ನುಡಿದಿದ್ದ ಭವಿಷ್ಯ ದಿಟವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಕೋಟೆಯನ್ನು ಕೆಡವಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳಿದ್ದವು.ಹತ್ತು ಸಮೀಕ್ಷೆಗಳ ಪೈಕಿ ಎಂಟು ಸಮೀಕ್ಷೆಗಳು ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಬರಲಿದೆ ಎಂದು ನುಡಿದಿದ್ದ ಭವಿಷ್ಯ ನಿಜವಾಗಿದೆ.
ಸತತ ಮೂರು ಬಾರಿಗೆ ಅಧಿಕಾರ ಹಿಡಿದಿದ್ದ ಟಿಎಂಸಿ ಆಡಳಿತ ವಿರೋಧಿ ಅಲೆಯಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂಬುದು ಮತದಾನದ ನಾಡಿಮಿಡಿತದಿಂದ ಗೊತ್ತಾಗಿತ್ತು.ಇದೀಗ ಪ್ರಕಟಗೊಂಡ ಫಲಿತಾಂಶದಲ್ಲಿ ಎಡಪಕ್ಷ ಮತ್ತು ಟಿಎಂಸಿಯ ಭದ್ರಕೋಟೆಯಾಗಿದ್ದ ಪ.ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿಯುವ ಮೂಲಕ ಇತಿಹಾಸ ಸೃಷ್ಟಿಸಿದರು.
ಬಹುತೇಕ ವಲಸಿಗರು ಮತ್ತು ಕೂಲಿಕಾರ್ಮಿಕರೇ ಇರುವ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂಬುದು ಮತದಾನೋತ್ತರ ಸಮೀಕ್ಷೆಯಿಂದ ಗೊತ್ತಾಗಿತ್ತು.
ಬಹುತೇಕ ಎಲ್ಲಾ ಸಮೀಕ್ಷೆಗಳು ಮುಖ್ಯಮಂತ್ರಿ ಹಿಮಂತ್ ಬಿಶ್ವಾಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದಾರೆ ಎಂದು ಹೇಳಿದ್ದವು. ಅದರಂತೆ ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ಗದ್ದುಗೆ ಹಿಡಿಯಲು ಸಜ್ಜಾಗಿದೆ.
ದೇವರನಾಡು ಕೇರಳದಲ್ಲಿ ಎರಡು ಬಾರಿ ಅಧಿಕಾರ ನಡೆಸಿದ್ದ ಎಲ್‌ಡಿಎಫ್ ಈ ಬಾರಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯನ್ನು ಸಮೀಕ್ಷೆಗಳು ಹೇಳಿದ್ದವು. ಆಡಳಿತ ವಿರೋಧಿ ಅಲೆ ಹಾಗೂ ರಾಜ್ಯದಲ್ಲಿ ಹೆಚ್ಚಿದ್ದ ಭ್ರಷ್ಟಾಚಾರದಿಂದಾಗಿ ಸಿಎಂ ವಿಜಯನ್ ಪಿಣರೈ ನೇತೃತ್ವದ ಎಲ್‌ಡಿಎಫ್ ಅಧಿಕಾರ ಕಳೆದುಕೊಳ್ಳಲಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರಲಿದೆ ಎಂಬ ಭವಿಷ್ಯವನ್ನು ಮತದಾನೋತ್ತರ ಸಮೀಕ್ಷೆ ನುಡಿದಿತ್ತು.
ಒಂದು ಬಾರಿ ಅಧಿಕಾರಕ್ಕೆ ಬಂದ ಅವರು ಪುನಃ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸಂಪ್ರದಾಯಕ್ಕೆ ತಮಿಳುನಾಡಿನಲ್ಲಿ ತಿಲಾಂಜಲಿ ಹಾಡಲಾಗಿದೆ. ಈ ರಾಜ್ಯದಲ್ಲಿ ದ್ರಾವಿಡ ಅಸಿತೆಯ ಮೂಲಕವೇ ಆಡಳಿತ ನಡೆಸುವ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರಲಿದೆ ಎಂಬ ಮತಗಟ್ಟೆ ಸಮೀಕ್ಷೆ ಉಲ್ಟಾ ಹೊಡೆದಿದೆ.
ಬಹುತೇಕ ಸಮೀಕ್ಷೆಗಳು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟ ಪುನಃ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂಬ ಮತಗಟ್ಟೆ ಸಮೀಕ್ಷೆ ಸುಳ್ಳಾಗಿದೆ.ವಿಜಯ್ ನೇತೃತ್ವದ ಟಿವಿಕೆ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನೂ ಬುಡಮೇಲು ಮಾಡಿ ಸರ್ಕಾರ ರಚನೆಯಲ್ಲಿ ಕಿಂಗ್‌ಮೇಕರ್ ಆಗುವತ್ತ ಮುನ್ನುಗ್ಗಿದೆ.
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ನಿರೀಕ್ಷೆಯಂತೆ ಎಐಎನ್‌ಆರ್‌ಸಿ-ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂಬ ಸಮೀಕ್ಷೆಯ ವಾಣಿ ನಿಜವಾಗಿದೆ.
