ಇಂಫಾಲ,ಮಾ.28- ರಾಜ್ಯದಲ್ಲಿ ಬಾಂಬ್ ಸ್ಫೋಟಗಳು ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಮೇರೆಗೆ ಭದ್ರತಾ ಪಡೆಗಳು ಮಣಿಪುರದಲ್ಲಿ ನಾಲ್ಕು ನಿಷೇಧಿತ ಸಂಘಟನೆಗಳಿಗೆ ಸೇರಿದ ಏಳು ಉಗ್ರಗಾಮಿಗಳನ್ನು ಸೆರೆ ಹಿಡಿದಿವೆ.
ನಿಷೇಧಿತ ಪೀಪಲ್ಸ್ ಲಿಬರೇಷನ್ ಆರ್ಮಿಯ ಸಕ್ರಿಯ ಕಾರ್ಯಕರ್ತನೊಬ್ಬನನ್ನು ತೆಂಗ್‌ನೌಪಾಲ್ ಜಿಲ್ಲೆಯ ಮೋರೆಹ್ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತ-ಮ್ಯಾನಾರ್ ಗಡಿಭಾಗದಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ನಿಷೇಧಿತ ಸಂಘಟನೆಗಳ ಮೂವರು ಇತರ ಸದಸ್ಯರನ್ನು ಇಂಫಾಲ ಈಸ್ಟ್ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರ ಹೇಳಿಕೆಯೊಂದು ತಿಳಿಸಿದೆ. ಮೂರು ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ) ಮತ್ತು ಎರಡು ಸ್ಫೋಟಕಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
