Sunday, April 12, 2026
Homeರಾಜ್ಯನನಗೆ ಐಪಿಎಲ್‌ ಟಿಕೆಟ್‌ ಬೇಡ : ಮಾಜಿ ಸಚಿವ ಸುರೇಶ್‌ಕುಮಾರ್‌

ನನಗೆ ಐಪಿಎಲ್‌ ಟಿಕೆಟ್‌ ಬೇಡ : ಮಾಜಿ ಸಚಿವ ಸುರೇಶ್‌ಕುಮಾರ್‌

I don't want IPL tickets: Former Minister Suresh Kumar

ಬೆಂಗಳೂರು,ಮಾ.28- ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯ ಟಿಕೆಟ್‌/ಪಾಸ್‌‍ ನನಗೆ ಖಂಡಿತ ಬೇಡ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್‌‍.ಸುರೇಶ್‌ಕುಮಾರ್‌ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಐಪಿ ಸಂಸ್ಕೃತಿಯನ್ನು ಮುಂದುವರೆಸಿದಷ್ಟು, ರಾಜಕಾರಣಿಗಳಾದ ನಾವು ಜನಸಾಮಾನ್ಯರ ದೃಷ್ಟಿಯಲ್ಲಿ ಇನ್ನಷ್ಟು ಕನಿಷ್ಠರಾಗುತ್ತಾ ಹೋಗುತ್ತೇವೆ ಎಂಬುದನ್ನು ನಾವೆಲ್ಲರೂ ಜ್ಞಾಪಕದಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ.

ಮಾಧ್ಯಮಗಳ ಮೂಲಕ ಶಾಸಕರಿಗೆ ಕ್ರಿಕೆಟ್‌ ಪಂದ್ಯಾವಳಿಯ ಟಿಕೆಟ್‌ ಕೊಡುತ್ತಾರೆ ಎಂದು ನಾನು ಏನು ತಿಳಿದುಕೊಂಡಿದ್ದೇನೋ, ಆ ಪಾಸ್‌‍ಗಳನ್ನು ಅಥವಾ ಆ ಟಿಕೆಟ್‌‍ಗಳನ್ನು ನಾನು ಸವಿನಯವಾಗಿ ನಿರಾಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ತಾವು ಸಮಾಜವಾದಿ ಎಂದು ಎಲ್ಲೆಡೆ ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವಿದೆ. ಈ ಸಮಾಜವಾದಿ ಎಂಬ ಸ್ವಯಂ ಘೋಷಿತ ಮುಖ್ಯಮಂತ್ರಿಯ ಆಡಳಿತದಲ್ಲೂ ವಿಐಪಿ ಸಂಸ್ಕೃತಿ ಮುಂದುವರಿಯುತ್ತಿರುವುದು ನಿಜಕ್ಕೂ ಅಚ್ಚರಿ ಹಾಗೂ ದುರಂತ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ಸಮಾಜವಾದಿ ಮುಖ್ಯಮಂತ್ರಿಗಳು ಕಳೆದ ವರ್ಷ ಐಪಿಎಲ್‌ನಲ್ಲಿ ಆರ್‌.ಸಿ.ಬಿ ಗೆದ್ದಾಗ, ವಿಧಾನಸೌಧದ ಮುಂದೆ ನಿರ್ಮಿಸಲಾಗಿದ್ದ ವಿಜಯೋತ್ಸವದ ವೇದಿಕೆಗೆ ತಮ ಮೊಮಗನನ್ನು ಕರೆದುಕೊಂಡು ಹೋಗಿದ್ದ ದೃಶ್ಯವನ್ನು ನಾವೆಲ್ಲರೂ ಕಂಡಿದ್ದೇವೆ.

ಮಾ. 26ರಂದು ವಿಧಾನಸಭೆಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿಗಳು ಉತ್ತರಿಸುತ್ತಿದ್ದರು. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಚಿನ್ನಸ್ವಾಮಿ ಸ್ಟೇಡಿಯಂ, ಐಪಿಎಲ್‌ ಪಂದ್ಯ, ಶಾಸಕರುಗಳಿಗೆ ಟಿಕೆಟ್‌ ಕೊಡುತ್ತಿಲ್ಲ ಹಾಗೂ ಶಾಸಕರಿಗೆ ಮರ್ಯಾದೆ ಸಿಗುತ್ತಿಲ್ಲ ಎಂಬ ಚರ್ಚೆ ಪಕ್ಷಾತೀತವಾಗಿ ಪ್ರಾರಂಭವಾಯಿತು.

ನಾನು ಆಗಲೇ ಮಧ್ಯ ಪ್ರವೇಶಿಸಿ ಮಾತನಾಡಬೇಕೆಂದಿದ್ದೆ. ಆದರೆ ನಡೆಯುತ್ತಿದ್ದ ಆ ವಿಚಿತ್ರ ವಿದ್ಯಮಾನಕ್ಕೆ ಸ್ವತಃ ಸಭಾಧ್ಯಕ್ಷರೇ ದನಿಗೂಡಿಸಿದ್ದು ನನಗೆ ಆಶ್ಚರ್ಯವನ್ನುಂಟುಮಾಡಿ, ನನ್ನನ್ನು ನಾನೇ ನಿಯಂತ್ರಿಸಿಕೊಂಡೆ ಎಂದು ಹೇಳಿದ್ದಾರೆ.

ಸದನ ಮುಗಿದ ಮೇಲೆ ಎಲ್ಲಿ ಹೋದರೂ ಕೇಳಿ ಬರುತ್ತಿರುವ ಪ್ರಶ್ನೆಯೆಂದರೆ, ಸರ್‌, ವಿಧಾನಸಭೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡುತ್ತೀರೋ ಅಥವಾ ನಿಮಗೆ ಬೇಕಾದ ಸೌಲಭ್ಯ, ಸವಲತ್ತು, ಸ್ಥಾನಮಾನ, ಗೌರವಗಳ ಕುರಿತು ಮಾತನಾಡುತ್ತೀರೋ? ಎಂಬುದಾಗಿದೆ.

ಒಂದು ವರ್ಷದ ಹಿಂದೆ ಇದೇ ವಿಧಾನಸಭೆಯಲ್ಲಿ, ಐಪಿಎಲ್‌ ಪಂದ್ಯದಲ್ಲಿ ಆರ್‌.ಸಿ.ಬಿ ಗೆದ್ದಾಗ, ಸರ್ಕಾರದ ಅವಿವೇಕತನದಿಂದ ಅಥವಾ ಅತ್ಯುತ್ಸಾಹದಿಂದ, ಆರ್‌.ಸಿ.ಬಿ ಗೆಲುವನ್ನು ತಮ ರಾಜಕೀಯಕ್ಕೆ ಉಪಯೋಗಿಸಿಕೊಳ್ಳುವ ಹಪಾಹಪಿತನದಿಂದ 11 ಜನ ಮೃತಪಟ್ಟ ಬಗ್ಗೆ ತುಂಬಾ ಚರ್ಚೆ ನಡೆದಿತ್ತು. ಬಹಳಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದರು, ನೋವು ಅನುಭವಿಸಿದ್ದರು ಹಾಗೂ ಆ ನೋವನ್ನು ತೋಡಿಕೊಂಡಿದ್ದರು ಎಂದಿದ್ದಾರೆ.

ಆದರೆ, ಅದೇ ವಿಧಾನಸೌಧದಲ್ಲಿ, ಅದೇ ಐಪಿಎಲ್‌ ಪಂದ್ಯದ ಟಿಕೆಟ್‌ ಬಗ್ಗೆ ಬಹಳ ಆಕ್ರೋಶದಿಂದ ಚರ್ಚೆ ನಡೆಸಿ, ನಮಗೆ ಮರ್ಯಾದೆ ಸಿಗಲೇಬೇಕು ಎಂದು ಹೇಳುತ್ತಿರುವುದು ಜನಸಾಮಾನ್ಯರಲ್ಲಿ ರಾಜಕಾರಣಿಗಳ ಬಗೆಗಿನ ತಿರಸ್ಕಾರವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ. ನಾವೆಲ್ಲರೂ ವೇದಿಕೆಯ ಮೇಲೆ ನಮನ್ನು ಜನಸೇವಕರು ಎಂದು ಕರೆದುಕೊಳ್ಳುತ್ತೇವೆ.

ಇಂತಹ ಹಿನ್ನೆಲೆಯಲ್ಲಿ ಈ ವಿಐಪಿ ಸಂಸ್ಕೃತಿಗೆ ಇಂದು ಪುರಸ್ಕಾರ ಸಿಗುತ್ತಿರುವುದು ಆಶ್ಚರ್ಯವನ್ನುಂಟು ಮಾಡುತ್ತಿದೆ. ನಾನು ಇವತ್ತು ಮಾಧ್ಯಮಗಳ ಮೂಲಕ, ಐಪಿಎಲ್‌ ಪಂದ್ಯಕ್ಕೆ ಪ್ರತಿಯೊಬ್ಬ ಶಾಸಕರಿಗೆ ತಲಾ ಎರಡು ಟಿಕೆಟ್‌ ಹಾಗೂ ಮುಂದಿನ ದಿನಗಳಲ್ಲಿ ಐದು ಟಿಕೆಟ್‌ ಕೊಡುವ ಸುದ್ದಿ ಓದಿ ತಿಳಿದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಇದು ಖಂಡಿತ ಸರಿಯಾದ ನಿರ್ಧಾರವಲ್ಲ. ವಿಧಾನಸಭೆಯಲ್ಲಿ ಈ ಚರ್ಚೆ ನಡೆದ ಕೇವಲ 24 ಗಂಟೆಯಲ್ಲೇ ಸರ್ಕಾರ ಈ ರೀತಿ ಘೋಷಣೆ ಮಾಡಲು ಉತ್ಸುಕತೆ ತೋರಿರುವುದು ನನಗೂ ಆಶ್ಚರ್ಯ ತಂದಿದೆ. ನಮ ಅದೆಷ್ಟೋ ಪ್ರಶ್ನೆಗಳಿಗೆ ವರ್ಷಾನುಗಟ್ಟಲೆ ಫಲಿತಾಂಶ ಸಿಕ್ಕಿರುವುದಿಲ್ಲ. ಆದರೆ, ಶಾಸಕರ ವಿಷಯ ಬಂದ ತಕ್ಷಣ ಇಷ್ಟು ಬೇಗ ಕೆಲಸ ಮಾಡಿಬಿಟ್ಟರು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News