ಬೆಂಗಳೂರು, ಮಾ.2- ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿ ಉತ್ತೀರ್ಣ ವಾಗುವುದು ಕಡ್ಡಾಯವಲ್ಲ ಎಂಬ ಗ್ರೇಡಿಂಗ್ ವ್ಯವಸ್ಥೆ ಜಾರಿಯಾಗಿರುವುದಕ್ಕೆ ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿದೆ. ಬೆಂಗಳೂರು ಸೇರಿದಂತೆ ನಾಡಿನಾದ್ಯಂತ ಕನ್ನಡ ಪರ ಸಂಘಟನೆಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಸಾಹಿತಿಗಳು, ಕನ್ನಡಪರ ಸಂಘಟನೆಗಳು, ಶಿಕ್ಷಣ ತಜ್ಞರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ಮಕ್ಕಳ ಮೇಲೆ ಹಿಂದಿ ಭಾಷಾ ಹೇರಿಕೆಯ ಒತ್ತಡದಿಂದ ವಿಮೋಚನೆ ದೊರೆತಿದೆ ಎಂದು ಶ್ಲಾಘಿಸಿದ್ದಾರೆ.
ಇದೇ ವೇಳೆ ತಮಿಳು ನಾಡು, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲೂ ದ್ವಿಭಾಷಾ ಪದ್ಧತಿಯನ್ನು ಜಾರಿಗೆ ತರಬೇಕು ಎಂಬ ಒತ್ತಡ ಕೇಳಿ ಬರುತ್ತಿದೆ. ಆರಂಭದಿಂದಲೂ ಹಿಂದಿ ಭಾಷಾ ಹೇರಿಕೆಯನ್ನು ದಕ್ಷಿಣ ಭಾರತ ರಾಜ್ಯಗಳು ವಿರೋಧಿಸುತ್ತಲೇ ಬಂದಿವೆ.
ಪ್ರಾದೇಶಿಕ ಭಾಷೆಗಳನ್ನು ಮೂಲೆ ಗುಂಪು ಮಾಡಿ ಹಿಂದು ಜನಜೀವನವನ್ನು ಆಕ್ರಮಿಸಿಕೊಳ್ಳುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿನ ಭಾಷಾ ಮಾಧ್ಯಮದ ಗೊಂದಲ ವಿದ್ಯಾರ್ಥಿಗಳನ್ನು ಹೈರಾಣಾಗಿಸಿತ್ತು. ಮಾತೃಭಾಷೆ ಕನ್ನಡ ಹೃದಯದ ಭಾವನೆ ವ್ಯಕ್ತ ಪಡಿಸಲು ಸಮರ್ಥವಾಗಿದ್ದರೆ, ವ್ಯಾವಹಾರಿಕವಾಗಿ ಇಂಗ್ಲಿಷ್ ಅನಿವಾರ್ಯ ಎಂಬ ಪರಿಸ್ಥಿತಿ ಇದೆ. ಈ ನಡುವೆ ಹಿಂದಿ ಕಲಿಕೆಗೂ ಅವಕಾಶ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹಿಂದಿ ಭಾಷಾ ಪರೀಕ್ಷೆಯಲ್ಲೂ ಶೇ.35ರಷ್ಟು ಅಂಕಗಳಿಸಬೇಕು ಎಂಬ ನಿಯಮ ಇತ್ತು. ಅದಕ್ಕೆ ಸರ್ಕಾರ ಮುಕ್ತಿ ನೀಡಿದೆ.
ಸಹಜವಾಗಿಯೇ ವಿದ್ಯಾರ್ಥಿ ವರ್ಗ ಖುಷಿಯಲ್ಲಿದ್ದರೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಹಿಂದಿ ಕಲಿಕೆಯ ಒತ್ತಡವನ್ನು ತಗ್ಗಿಸುವ ಮೂಲಕ ಕನ್ನಡ ಕಲಿಕೆಗೆ ಆದ್ಯತೆ ನೀಡಿದ್ದಕ್ಕಾಗಿ ಸಂಘಟನೆಗಳು ಸರ್ಕಾರವನ್ನು ಅಭಿನಂದಿಸಿವೆ.ಕನ್ನಡ ಪರ ಸಂಘಟನೆಗಳು ಇಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ಮನೆಯ ಬಳಿ ಹೋಗಿ ಅಭಿನಂದನೆ ಸಲ್ಲಿಸಿ, ಸಂಭ್ರಮ ಆಚರಿಸಿವೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಬಿಜೆಪಿಯವರಿಗೆ ಧೈರ್ಯವಿದ್ದರೆ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಘೋಷಣೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಕ್ಕಳ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ನಮ ಪೂರ್ವಿಕರು ನೆಲ, ಜಲ, ಭಾಷೆಯ ಹಿತರಕ್ಷಣೆಗಾಗಿ ಶ್ರಮಿಸಿದರು. ಗೋಕಾಕ್ ಚಳವಳಿ ಯಾವ ಕಾರಣಕ್ಕೆ ನಡೆದಿತ್ತು ಎಂದು ಗೊತ್ತಿಲ್ಲವೇ ? ಕರ್ನಾಟಕದಲ್ಲಿ ಕನ್ನಡದ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಇರುವುದು ದುರ್ದೈವ ಎಂದು ವಿಷಾದಿಸಿದರು.
ಹಿಂದಿ ಕಲಿಯಬಾರದು ಎಂದು ನಾವು ನಿರ್ಧಾರ ಮಾಡಿಲ್ಲ. ಕನ್ನಡಕ್ಕೆ ಆದ್ಯತೆ ನೀಡಿದ್ದೇವೆ. ದೇಶದಲ್ಲಿ ಸಾವಿರಾರು ಭಾಷೆಗಳಿವೆ. ಮಕ್ಕಳು ಯಾವ ಭಾಷೆಯನ್ನಾದರೂ ಓದಲು ಸ್ವತಂತ್ರರಿದ್ದಾರೆ ಎಂದು ಹೇಳಿದರು.
ಒಂದನೇ ತರಗತಿಯ ಪ್ರವೇಶಕ್ಕಾಗಿ 60 ದಿನಗಳ ವಯೋಮಿತಿ ಸಡಿಲಿಕ್ಕೆ ಮಾಡಲಾಗಿದೆ. ಅದನ್ನು 90 ದಿನಗಳಿಗೆ ಹೆಚ್ಚಿಸಬೇಕು ಎಂದು ಒತ್ತಡ ಹೇರುತ್ತಿರುವುದು ಸರಿಯಲ್ಲ. ಚಿಕ್ಕವಯಸ್ಸಿನಮಕ್ಕಳನ್ನು ಮನೆಯಲ್ಲಿ ಇಟ್ಟುಕೊಂಡು ಮುದ್ದಾಡಲಿ. ಹುಟ್ಟಿದ ತಕ್ಷಣವೇ ಶಾಲೆಗೆ ಸೇರಿಸಬೇಕು ಎಂಬ ಮನೋಭಾವನೆ ಬದಲಾಗಬೇಕು ಎಂದರು.
ಸರ್ಕಾರ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ. ಮುಂದೆ ಕೂಡ ಈ ಬೇಡಿಕೆ ಸಲುವಾಗಿ ಚರ್ಚೆ ಅನಗತ್ಯ. 9 ತಿಂಗಳಿಗೆ ವಯೋಮಿತಿಯನ್ನು ಹೆಚ್ಚಿಸದಿದ್ದರೆ ರಾಜ್ಯದಲ್ಲಿ 75 ಸಾವಿರ ಮಕ್ಕಳಿಗೆ ಅನ್ಯಾಯವಾಗಲಿದೆ ಎಂಬುದು ಆಧಾರ ರಹಿತ. ಚಿಕ್ಕವಯಸ್ಸಿನ ಮಕ್ಕಳ ಸಂಖ್ಯೆಯೇ ಅಷ್ಟಿಲ್ಲ. 75 ಸಾವಿರ ಮಕ್ಕಳಿಗೆ ಅನ್ಯಾಯವಾಗಲಿದೆ ಎಂಬುದೇ ಅವೈಜ್ಞಾನಿಕವಾದ ಮತ್ತು ಖಂಡನೀಯ ವಾದವಾಗಿದೆ ಎಂದರು.
ಬೇಕಾದಂತೆಲ್ಲ ಮನಸೋ ಇಚ್ಛೆ ಕಾನೂನು ಮಾಡಲಾಗುವುದಿಲ್ಲ. ಸರ್ವರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಂಡಿದ್ದೇವೆ. ಈಗ ನನ್ನ ವಿರುದ್ಧ ಟೀಕೆ ಮಾಡುತ್ತಿರುವ ಬಿಜೆಪಿಯವರು 2020ರಲ್ಲಿ ಆಡಳಿತದಲ್ಲಿದ್ದಾಗ ಮಾಡಿದ್ಧ ತೀರ್ಮಾನವನ್ನೇ ನಾವು ಜಾರಿ ಮಾಡುತ್ತಿದ್ದೇವೆ ಎಂದರು.
ಕೇಂದ್ರ ಸರ್ಕಾರ ಕರ್ನಾಟಕದಿಂದ ವ್ಯಾಪಕ ಸಂಪನೂಲಗಳನ್ನು ಸಂಗ್ರಹಿಸುತ್ತಿದೆ. ಆದರೆ ನ್ಯಾಯಯುತವಾದ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.ಹಿಂದಿ ಭಾಷೆಯ ಗ್ರೇಡಿಂಗ್ ಗಾಗಿ ಬಹಳ ದಿನಗಳಿಂದ ಬೇಡಿಕೆ ಇತ್ತು. ಯಾವುದೇ ತೀರ್ಮಾನ ತೆಗೆದುಕೊಂಡಾಗ ಮಕ್ಕಳ ಫಲಿತಾಂಶದ ಮೇಲೆ ಮತ್ತು ಕಲಿಕೆಯ ಮೇಲೆ ಪರಿಣಾಮ ಬೀರಬಾರದು ಎಂಬ ಕಾರಣಕ್ಕಾಗಿ ಅಳೆದು ತೂಗಿ ಅಂತಿಮ ನಿರ್ಧಾರ ತೆಗೆದುಕೊಂಡಿದ್ದೇವೆ. ಸರ್ಕಾರದ ನಿರ್ಧಾರವನ್ನು ಹೋರಾಟಗಾರರು, ಸಾಹಿತಿಗಳು ಸ್ವಾಗತಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು, ಚರ್ಚೆ ನಡೆಸಿದ ಬಳಿಕವೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟ ಪಡಿಸಿದರು.
ಕನ್ನಡಪರ ಸಂಘಟನೆಗಳ ಒತ್ತಡಕ್ಕೆ ಮಣಿದು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಎಸ್.ಸುರೇಶ್ ಕುಮಾರ್ ಟೀಕೆ ಮಾಡಿದ್ದಾರೆ. ಹಾಗಿದ್ದ ಮೇಲೆ ಅವರು ಅಧಿಕಾರದಲ್ಲಿದ್ದಾಗ ಕನ್ನಡ ಭಾಷೆಯನ್ನು ಹಾಳು ಮಾಡಬೇಕು ಎಂದೇ ನಿರ್ಧಾರ ಮಾಡಿದ್ದರೇ? ಎಂದು ಪ್ರಶ್ನಿಸಿದ್ದರು. ಬಿ.ಎಸ್.ಯಡಿಯೂರಪ್ಪ ಅವರಿಗೆ ಇರುವ ಕನ್ನಡ ಅಭಿಮಾನ ಬಿ.ವೈ.ವಿಜಯೇಂದ್ರ ಅವರಿಗೆ ಇಲ್ಲ ಎಂದು ಲೇವಡಿ ಮಾಡಿದರು.
ತಮಿಳುನಾಡಿನಲ್ಲಿ ದ್ವಿಭಾಷಾ ನೀತಿ ಇದೆ. ವಿಜಯೇಂದ್ರ ಅವರು ತಿಳಿವಳಿಕೆ ಇಲ್ಲದೆ ಟೀಕೆ ಮಾಡುತ್ತಿದ್ದಾರೆ. ಅನಗತ್ಯ ಟೀಕೆ ಮಾಡುವ ಬದಲಿಗೆ, ದೆಹಲಿಗೆ ಹೋಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಮೇಲೆ ಒತ್ತಡ ಹೇರಿ ರಾಜ್ಯಕ್ಕೆ ತೆರಿಗೆಯಲ್ಲಿ ಬರಬೇಕಾದ ನ್ಯಾಯಯುತ ಪಾಲನ್ನು ಕೊಡಿಸಲಿ ಎಂದು ಹೇಳಿದರು.
ವಿಜಯೇಂದ್ರ ಅವರು ಕೇಂದ್ರ ಸರ್ಕಾರ ತೆರಿಗೆಯಲ್ಲಿ ನ್ಯಾಯಯುತ ಪಾಲು ಕೊಡಲಿ ಎಂದು ತಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಿ. ನರೇಂದ್ರ ಮೋದಿ ಅವರಿಗೆ ಮೊಬೈಲ್ ಎಂದರೆ ಬಹಳ ಪ್ರೀತಿ , ಅದನ್ನು ನೋಡಿ ಮೋದಿ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿ ನಿರ್ಮಲಾ ಸೀತಾರಾಮನ್ ಅವರ ಬಳಿ ಚರ್ಚೆ ಮಾಡಿದ ಬಳಿಕ, ಈ ಹಿಂದೆ ಕೊಡುತ್ತಿದ್ದ ಅನುದಾನವನ್ನು ಕಡಿತ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಮಕ್ಕಳಿಗೆ ಶೈಕ್ಷಣಿಕವಾಗಿ ಒತ್ತಡವಾಗಬಾರದು ಎಂಬ ಕಾರಣಕ್ಕಾಗಿ ಗ್ರೇಡಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ದ್ವಿಭಾಷಾ ನೀತಿಗೆ ಸಂಬಂಧಪಟ್ಟಂತೆ ಸುದೀರ್ಘ ಚರ್ಚೆ ಆಗಬೇಕು. ಏಕಾಏಕಿ ತೀರ್ಮಾನ ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದರು. ಮಧುಬಂಗಾರಪ್ಪ ಅವರ ಅವಧಿಯಲ್ಲೇ ದ್ವಿಭಾಷಾ ನೀತಿ ಜಾರಿಯಾಗಬಹುದೇ ಎಂದು ಪ್ರಶ್ನಿಸಿದಾಗ, ನಾಳೆ ನನ್ನನ್ನು ಸಚಿವ ಸ್ಥಾನದಿಂದ ತೆಗೆದರೆ ನಾನು ಏನು ಮಾಡಬೇಕು? ಎಂದರು.
ಹಿಂದಿಗೆ ಗ್ರೇಡಿಂಗ್ ವ್ಯವಸ್ಥೆ : ಕನ್ನಡಪರ ಸಂಘಟನೆಗಳಿಂದ ಸಚಿವರಿಗೆ ಅಭಿನಂದನೆ
ಬೆಂಗಳೂರು, ಮಾ.28- ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿಗೆ ಗ್ರೆಡೀಂಗ್ ವ್ಯವಸ್ಥೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ಮನೆಯ ಮುಂದೆ ಸಂಭ್ರಮಾಚರಣೆ ನಡೆಯಿತು.
ಕರವೇ ಅಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರ ನಿಯೋಗ, ಸಚಿವರ ಮನೆಗೆ ಭೇಟಿ ನೀಡಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಕ್ಕಾಗಿ ಸಚಿವರಿಗೆ ಅಭಿನಂದನೆ ಸಲ್ಲಿಸಿದೆ.
ಹಿಂದಿ ಭಾಷೆ ಪರೀಕ್ಷೆಯಲ್ಲಿ ಉತ್ತೀರ್ಣವಾಗಲೇಬೇಕು ಎಂಬ ಬಲವಂತದ ಹೇರಿಕೆಯಿಂದ ಮಕ್ಕಳಿಗೆ ತೊಂದರೆಯಾಗುತ್ತಿತ್ತು. ಭಾಷೆಯ ದಬ್ಬಾಳಿಕೆಯಿಂದಾಗಿ ಲಕ್ಷಾಂತರ ಮಕ್ಕಳ ಭವಿಷ್ಯ ತೊಂದರೆಗೆ ಒಳಗಾಗುವುದನ್ನು ಸರಕಾರದ ಈ ತೀರ್ಮಾನ ತಪ್ಪಿಸಿದೆ. ಶಾಪಗ್ರಸ್ತ ವ್ಯವಸ್ಥೆಯಿಂದ ವಿಮೋಚನೆಯಾಗಿದೆ. ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದಿದ್ದಾರೆ.
ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದನ್ನು ಅರ್ಥಮಾಡಿಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಬಿಜೆಪಿಯ ಆಡಳಿತವೇ ಇದ್ದರೂ ತ್ರಿಭಾಷಾ-ಸೂತ್ರವನ್ನು ಕೈಬಿಟ್ಟಿದ್ದಾರೆ. ನಮಲ್ಲಿ ಬಿಜೆಪಿಯವರು ಗ್ರೇಡಿಂಗ್ ಪದ್ಧತಿಗೆ ವಿರೋಧ ಮಾಡುತ್ತಿರುವುದು ಸರಿಯಲ್ಲ. ರಾಜಕೀಯ ಅಜೆಂಡಕ್ಕಾಗಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ ಎಂದು ಎಚ್ಚರಿಕೆ ನೀಡಿದರು.
