ವಾಷಿಂಗ್ಟನ್, ಮಾ.28- ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನಡೆದ ದೂರವಾಣಿ ಮಾತುಕತೆಯಲ್ಲಿ ಉದ್ಯಮಿ ಇಲಾನ್ ಮಸ್ಕ್ ಕೂಡ ಭಾಗವಹಿಸಿದ್ದರು ಎಂದು ನ್ಯೂಯಾರ್ಕ್ ಟೈಮ್ಸೌ ವರದಿ ಮಾಡಿದೆ.
ಇರಾನ್ ಯುದ್ಧದ ಕುರಿತು ಚರ್ಚಿಸಲು ಟ್ರಂಪ್ ಮಂಗಳವಾರ ಮೋದಿ ಅವರಿಗೆ ಕರೆ ಮಾಡಿದ್ದರು. ಫೆಬ್ರವರಿ 28ರಂದು ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾದ ಬಳಿಕ ಇಬ್ಬರು ನಾಯಕರ ನಡುವಿನ ಇದು ಮೊದಲ ಸಂಭಾಷಣೆಯಾಗಿತ್ತು.
ಅಮೆರಿಕ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿಯ ಪ್ರಕಾರ, ಯುದ್ಧ ಪರಿಸ್ಥಿತಿಯ ಸಂದರ್ಭದಲ್ಲಿ ಇಬ್ಬರು ರಾಷ್ಟ್ರಾಧ್ಯಕ್ಷರ ಮಾತುಕತೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಭಾಗವಹಿಸಿರುವುದು ಅಪರೂಪದ ಘಟನೆ ಎಂದು ಹೇಳಲಾಗಿದೆ.
ವೈಟ್ ಹೌಸ್ ಪ್ರತಿಕ್ರಿಯೆ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವೆ ಉತ್ತಮ ಸಂಬಂಧವಿದ್ದು ಮಾತುಕತೆ ಫಲಪ್ರದವಾಗಿತ್ತು ಎಂದು ವೈಟ್ ಹೌಸ್ ವಕ್ತಾರೆ ಕರೋಲೈನ್ ಲೀವಿಟ್ ತಿಳಿಸಿದ್ದಾರೆ. ಈ ವೇಳೆ ಮಸ್ಕ್ ಇದ್ದರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿದೆ.
ಕಳೆದ ವರ್ಷ ಸರ್ಕಾರದ ಹುದ್ದೆಯಿಂದ ಹೊರಬಂದ ಬಳಿಕ ಟ್ರಂಪ್ ಮತ್ತು ಮಸ್ಕ್ ನಡುವೆ ಉಂಟಾದ ಭಿನ್ನಾಭಿಪ್ರಾಯಗಳು ಇತ್ತೀಚೆಗೆ ಸರಿಯಾಗಿರುವ ಸೂಚನೆ ಇದಾಗಬಹುದು ಎಂದು ವಿಶ್ಲೇಷಿಸಲಾಗಿದೆ.
ಮಾತುಕತೆಯ ವೇಳೆ ಹೋರ್ಮುಜ್ ಮಾರ್ಗದ ಅನಿವಾರ್ಯತೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ.ಹಾರ್ಮುಜ್ ಸಮುದ್ರ ಮಾರ್ಗ ಸುರಕ್ಷಿತವಾಗಿ ತೆರೆದಿರಬೇಕು. ಅದು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಆರ್ಥಿಕ ಸಮತೋಲನಕ್ಕೆ ಅತ್ಯಂತ ಅಗತ್ಯ ಎಂದು ಮೋದಿ ಹೇಳಿರುವುದಾಗಿ ತಿಳಿಸಲಾಗಿದೆ.
