ಬೆಂಗಳೂರು,ಮಾ.28- ಜನಗಣತಿ-2027 ರ ಅಂಗವಾಗಿ ಸಾರ್ವಜನಿಕರು ಸುರಕ್ಷಿತ ವೆಬ್ ಪೋರ್ಟಲ್ ಮೂಲಕ ಸ್ವಯಂ- ಗಣತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಜನಗಣತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯವು ಏ.16 ರಿಂದ ಆರಂಭವಾಗಲಿದ್ದು, ಇದಕ್ಕೂ ಮುನ್ನ 15 ದಿನಗಳ ಮುಂಚಿತವಾಗಿ ಅಂದರೆ ಏ.1 ರಿಂದ ಏ.15ರವರೆಗೆ ಸ್ವಯಂ ಗಣತಿ ಕಾರ್ಯ ನಡೆಯಲಿದೆ.
ಸಾರ್ವಜನಿಕರು ಸ್ವಯಂ ಗಣತಿ ವೆಬ್ ಪೋರ್ಟಲ್ ಆದ se .census.gov.in ಬಳಸಿಕೊಂಡು ತಮ್ಮ ಕುಟುಂಬದ ಸಾಮಾನ್ಯ ಮಾಹಿತಿಯನ್ನು ಆನ್‌ಲೈನ್ ಮೂಲಕ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ನಿಗದಿತ ಅವಧಿಯೊಳಗೆ ಸ್ವಯಂ ಗಣತಿ ವೆಬ್ ಪೋರ್ಟಲ್ ಲಭ್ಯವಿದ್ದು ಮೊಬೈಲ್, ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಸಾಧನಗಳ ಮೂಲಕ ನಮೂದಿಸಬಹುದು. ಇದರಿಂದ ಸಮಯದ ಉಳಿತಾಯ ಜೊತೆಗೆ ನಿಖರ ಹಾಗೂ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲು ಸಹಕಾರಿ ಆಗಲಿದೆ.
ಮಾಹಿತಿ ಭರ್ತಿಯ ವೇಳೆ, ಕುಟುಂಬಗಳು ತಮ ಸ್ಥಳದ ವಿವರಗಳನ್ನು (ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮ/ಪಟ್ಟಣ/ನಗರ ಇತ್ಯಾದಿ) ಕಡ್ಡಾಯವಾಗಿ ನಮೂದಿಸಬೇಕು. ಸ್ಥಳವನ್ನು ನಿಖರವಾಗಿ ಗುರುತಿಸಲು ಪಿನ್ ಕೋಡ್ ಮತ್ತು ಡಿಜಿಟಲ್ ಮ್ಯಾಪ್ ಮೂಲಕ ಮನೆಯ ಸ್ಥಳವನ್ನು ಗುರುತಿಸುವ ವ್ಯವಸ್ಥೆಯೂ ಇರುತ್ತದೆ.
ಸ್ವಯಂ-ಗಣತಿಗೆ ಸಂಬಂಧಿಸಿದಂತೆ ಪೋರ್ಟಲ್‌ನಲ್ಲಿ ಕೇಳಿರುವ ಕೇಳುವ ಪ್ರಶ್ನೆಗಳಿಗೆ ಮನೆಪಟ್ಟಿ ಕಾರ್ಯಾಚರಣೆ ಮೊಬೈಲ್ ಆಪ್‌ನಲ್ಲಿರುವಂತೆಯೇ ರೂಪಿಸಲಾಗಿದ್ದು, ಕೆಲವು ಮಾಹಿತಿಗಳು ಪೂರ್ವಭರ್ತಿಯಾಗಿರಬಹುದು. ಸಾರ್ವಜನಿಕರಿಗೆ ಸಹಾಯವಾಗುವಂತೆ ಪದೇ ಪದೇ ಕೇಳುವ ಪ್ರಶ್ನೆಗಳು ಮತ್ತು ಮಾರ್ಗಸೂಚಿಗಳನ್ನೂ ಒದಗಿಸಲಾಗುತ್ತದೆ.
ಕುಟುಂಬವು ತಮ ಮಾಹಿತಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ ಅವರಿಗೆ ಒಂದು ವಿಶಿಷ್ಟ ಸ್ವಯಂ-ಗಣತಿ ಐಡಿ ನೀಡಲಾಗುತ್ತದೆ. ಈ ಐಡಿಯನ್ನು ಮತ್ತು ಇಮೇಲ್ ಮೂಲಕ ಕಳುಹಿಸಲಾಗುತ್ತದೆ. ಅದನ್ನು ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಈ ಐಡಿಯನ್ನು ಸಾರ್ವಜನಿಕರು ಹಂಚಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
