ನವದೆಹಲಿ, ಮೇ.16- ವಿದೇಶಿ ಪ್ರವಾಸದ ಮೇಲೆ ಹೊಸ ತೆರಿಗೆ ಅಥವಾ ಸೆಸ್ ವಿಧಿಸಲಾಗುವುದು ಎಂಬ ಸುದ್ದಿ ಸುಳ್ಳು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದಿರುವ ಅವರು, ಜನಸಾಮಾನ್ಯರ ಜೀವನ ನಿರ್ವಹಣೆ ಸುಗಮಗೊಳಿಸುವಲ್ಲಿ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
ವಿದೇಶಿ ಪ್ರಯಾಣದ ಮೇಲೆ ತೆರಿಗೆ ವಿಧಿಸುವ ಪ್ರಸ್ತಾವನೆ ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ಮಾಧ್ಯಮವೊಂದರಲ್ಲಿ ವರದಿಯಾಗಿತ್ತು. ಅದಕ್ಕೆ ಎಕ್ಸ್ ನಲ್ಲಿ ಸ್ಪಷ್ಟನೆ ನೀಡಿರುವ ಮೋದಿ ಅವರು, ಈ ವರದಿ ಸಂಪೂರ್ಣ ಸುಳ್ಳು ಎಂದು ಬರೆದುಕೊಂಡಿದ್ದಾರೆ.
ಅಮೆರಿಕ, ಇಸ್ರೇಲ್, ಇರಾನ್ ಯುದ್ಧದಿಂದಾಗಿ ಜಾಗತಿಕವಾಗಿ ಕಚ್ಚಾತೈಲ ಹಾಗೂ ಆಮದು ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕೇಂದ್ರ ಸರ್ಕಾರವು ವಿದೇಶಿ ಪ್ರವಾಸದ ಮೇಲೆ ಒಂದು ವರ್ಷದ ಅವಧಿಗೆ ವಿಶೇಷ ಸೆಸ್ ವಿಧಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿತ್ತು.
ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಯುದ್ಧದ ಸಂದರ್ಭದಲ್ಲಿ ಇಂಧನ ಉಳಿತಾಯ ಮತ್ತು ವಿದೇಶಿ ವಿನಿಮಯ ಮೀಸಲು ರಕ್ಷಿಸಲು ಸಾರ್ವಜನಿಕ ಸಾರಿಗೆ ಬಳಸಿ, ಅನಗತ್ಯ ವಿದೇಶಿ ಪ್ರವಾಸ ಹಾಗೂ ಚಿನ್ನದ ಖರೀದಿಯಿಂದ ದೂರವಿರಿ ಎಂದು ದೇಶದ ಜನತೆಗೆ ಕರೆ ನೀಡಿದ್ದರು. ಇದರ ಬೆನ್ನಲ್ಲೇ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಲೀಟರ್‌ಗೆ 3 ರೂಪಾಯಿಯಷ್ಟು ದುಬಾರಿಯಾಗಿದ್ದು, ತೈಲ ಕಂಪನಿಗಳ ನಷ್ಟದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
