ಚಂಡೀಗಢ,ಆ.9-2027ರ ಪಂಜಾಬ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತೆ ಕಾಂಗ್ರೆಸ್‌ಗೆ ಮರಳುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಅಮರಿಂದರ್ ಸಿಂಗ್ ಅವರನ್ನು ತಮ ಬಿಜೆಪಿಯಲ್ಲಿನ ನೆಚ್ಚಿನ ರಾಜಕಾರಣಿ ಎಂದು ಉಲ್ಲೇಖಿಸಿರುವುದು ಈ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದೆ. ಆದರೆ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಕಾಂಗ್ರೆಸ್‌ಗೆ ಮರಳುವ ಯಾವುದೇ ಉದ್ದೇಶವಿಲ್ಲ ಎಂದು ಅಮರಿಂದರ್ ಸಿಂಗ್ ಸ್ವತಃ ಸ್ಪಷ್ಟಪಡಿಸಿದ್ದಾರೆ.
ರಾಹುಲ್ ಗಾಂಧಿಯವರ ಹೇಳಿಕೆಯಲ್ಲಿ ವೈಯಕ್ತಿಕ ಗೌರವ ಮತ್ತು ಸ್ನೇಹಪರತೆ ಕಾಣಿಸಿಕೊಂಡರೂ, ಅದನ್ನು ರಾಜಕೀಯ ಪುನರಾಗಮನದ ಸಂಕೇತವೆಂದು ಪರಿಗಣಿಸುವುದು ಸದ್ಯಕ್ಕೆ ಅತಿಶಯೋಕ್ತಿಯಾಗಲಿದೆ. ಅಮರಿಂದರ್ ಸಿಂಗ್ ಅವರು, 2025ರ ಡಿಸೆಂಬರ್‌ನಲ್ಲಿಯೇ ನಾನು ಬಿಜೆಪಿಯನ್ನು ತೊರೆಯುತ್ತಿಲ್ಲ, ಹಿಂದಿರುಗುವುದರಲ್ಲಿ ಅರ್ಥವಿಲ್ಲೞೞ ಎಂಬ ನಿಲುವು ವ್ಯಕ್ತಪಡಿಸಿದ್ದರು.
ಅದಕ್ಕೂ ಮುನ್ನ ಬಿಜೆಪಿಯ ಕಾರ್ಯವೈಖರಿ ಕಠಿಣವಾಗಿದೆ, ಕಾಂಗ್ರೆಸ್‌ನಲ್ಲಿ ನಿರ್ಧಾರಗಳ ಸಂದರ್ಭದಲ್ಲಿ ರಾಜ್ಯದ ನಾಯಕರ ಅಭಿಪ್ರಾಯಗಳಿಗೆ ಹೆಚ್ಚಿನ ಅವಕಾಶವಿತ್ತು ಎಂದು ಹೇಳಿದ್ದರೂ, ಅದನ್ನು ಕಾಂಗ್ರೆಸ್‌ಗೆ ಮರಳುವ ಸೂಚನೆಯಾಗಿ ಅವರು ನೀಡಿರಲಿಲ್ಲ. ಅಮರಿಂದರ್ ಸಿಂಗ್ ಅವರ ಕಾಂಗ್ರೆಸ್‌ನಿಂದ ಹೊರನಡೆದ ರಾಜಕೀಯ ಪಯಣವನ್ನು ಗಮನಿಸದೆ ಇಂದಿನ ಚರ್ಚೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.
2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು ತಂದುಕೊಟ್ಟ ಅಮರಿಂದರ್ ಸಿಂಗ್ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಆದರೆ 2021ರಲ್ಲಿ ಪಕ್ಷದ ಆಂತರಿಕ ಸಂಘರ್ಷ ತೀವ್ರಗೊಂಡಿತು. ನವಜೋತ್ ಸಿಂಗ್ ಸಿಧು ಸೇರಿದಂತೆ ಹಲವು ನಾಯಕರೊಂದಿಗೆ ಭಿನ್ನಾಭಿಪ್ರಾಯಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಅವರು ಕಾಂಗ್ರೆಸ್ ತೊರೆದು ಪಂಜಾಬ್ ಲೋಕ ಕಾಂಗ್ರೆಸ್ ಸ್ಥಾಪಿಸಿದರು.
2022ರ ವಿಧಾನಸಭಾ ಚುನಾವಣೆಯಲ್ಲಿ ಐಅ ನಿರೀಕ್ಷಿತ ರಾಜಕೀಯ ಪ್ರಭಾವ ಮೂಡಿಸಲು ವಿಫಲವಾಯಿತು. ಬಳಿಕ ಸೆಪ್ಟೆಂಬರ್ 2022ರಲ್ಲಿ ಅಮರಿಂದರ್ ಸಿಂಗ್ ತಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ ಬಿಜೆಪಿ ಸೇರಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್‌ನ ದೀರ್ಘಕಾಲದ ರಾಜಕೀಯ ಅನುಭವದ ಬಳಿಕ ದೇಶದ ಹಿತಾಸಕ್ತಿಯನ್ನು ಗಮನಿಸುವ ಪಕ್ಷವಾಗಿ ಬಿಜೆಪಿಯನ್ನು ಆಯ್ಕೆ ಮಾಡುತ್ತಿರುವುದಾಗಿ ಹೇಳಿದ್ದರು.
ಹೀಗಾಗಿ ಕೇವಲ ರಾಹುಲ್ ಗಾಂಧಿಯವರ ಸ್ನೇಹಪರ ಹೇಳಿಕೆಯ ಆಧಾರದ ಮೇಲೆ ಅಮರಿಂದರ್ ಸಿಂಗ್ ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂದು ಹೇಳಲು ಸದ್ಯ ಯಾವುದೇ ದೃಢ ಆಧಾರವಿಲ್ಲ.
ಕಾಂಗ್ರೆಸ್‌ಗೆ ಲಾಭವೇನು?: ರಾಜಕೀಯವಾಗಿ ನೋಡಿದರೆ, ಅಮರಿಂದರ್ ಸಿಂಗ್ ಅವರ ಮರಳುವಿಕೆಯಿಂದ ಕಾಂಗ್ರೆಸ್‌ಗೆ ಕೆಲವು ಸ್ಪಷ್ಟ ಲಾಭಗಳು ಸಿಗಬಹುದೆಂಬ ವಾದವಿದೆ.
ಮೊದಲನೆಯದಾಗಿ, ಅವರು ಪಂಜಾಬ್ ರಾಜಕೀಯದಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ಮುಖ. 2017ರಲ್ಲಿ ಕಾಂಗ್ರೆಸ್‌ಗೆ ಬಹುಮತ ತಂದುಕೊಟ್ಟ ನಾಯಕನಾಗಿ ಅವರ ಹಿಂದಿನ ಚುನಾವಣಾ ಸಾಮರ್ಥ್ಯವನ್ನು ಪಕ್ಷ ಸಂಪೂರ್ಣವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ.
ಎರಡನೆಯದಾಗಿ, ಗ್ರಾಮೀಣ ಹಾಗೂ ನಗರ ಮತದಾರರ ಕೆಲವು ವರ್ಗಗಳಲ್ಲಿ ಅವರ ವೈಯಕ್ತಿಕ ಸಂಪರ್ಕ ಮತ್ತು ಹಳೆಯ ರಾಜಕೀಯ ಜಾಲ ಕಾಂಗ್ರೆಸ್‌ಗೆ ನೆರವಾಗಬಹುದು. ಮೂರನೆಯದಾಗಿ, ಕಾಂಗ್ರೆಸ್‌ನ ಈಗಿನ ನಾಯಕತ್ವದ ನಡುವೆ ಸಮನ್ವಯ ಸಾಧಿಸುವ ಹಿರಿಯ ಸಲಹೆಗಾರ ಅಥವಾ ಮಾರ್ಗದರ್ಶಕನ ಪಾತ್ರವನ್ನು ಅವರು ವಹಿಸಬಹುದೆಂಬ ಅಭಿಪ್ರಾಯವೂ ಇದೆ.
ಆದರೆ ಇದೇ ಅಂಶಗಳು ಮತ್ತೊಂದು ಪ್ರಶ್ನೆಯನ್ನೂ ಹುಟ್ಟುಹಾಕುತ್ತವೆ? ಅಮರಿಂದರ್ ಸಿಂಗ್ ಅವರಿಗೆ ಪಕ್ಷದಲ್ಲಿ ಯಾವ ಸ್ಥಾನ ನೀಡಬೇಕು?
ಅವರಿಗೆ ಮತ್ತೆ ಪ್ರಮುಖ ನಾಯಕತ್ವದ ಜವಾಬ್ದಾರಿ ನೀಡಿದರೆ, ಈಗಾಗಲೇ ಅಸ್ತಿತ್ವದಲ್ಲಿರುವ ಗುಂಪುಗಳ ನಡುವೆ ಹೊಸ ಅಧಿಕಾರದ ಸಮೀಕರಣ ಸೃಷ್ಟಿಯಾಗಬಹುದು. ಕೇವಲ ಹಿರಿಯ ಸಲಹೆಗಾರನ ಪಾತ್ರ ನೀಡಿದರೆ, ಅವರ ರಾಜಕೀಯ ಪ್ರಭಾವವನ್ನು ಕಾಂಗ್ರೆಸ್ ಎಷ್ಟು ಮಟ್ಟಿಗೆ ಬಳಸಿಕೊಳ್ಳಬಹುದು ಎಂಬುದು ಪ್ರಶ್ನೆಯಾಗಲಿದೆ.
ಸಂಘರ್ಷದಲ್ಲಿ ಸಿಲುಕಿರುವ ಕಾಂಗ್ರೆಸ್
2027ರ ಚುನಾವಣೆಗೆ ಮುನ್ನ ಕಾಂಗ್ರೆಸ್ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಅಮರಿಂದರ್ ಸಿಂಗ್ ಅವರ ಅನುಪಸ್ಥಿತಿ ಮಾತ್ರವಲ್ಲ; ಪಕ್ಷದೊಳಗಿನ ನಾಯಕತ್ವದ ಸಂಘರ್ಷವೇ ಪ್ರಮುಖ ಸವಾಲಾಗಿದೆ.
ಪ್ರಸ್ತುತ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಬೆಂಬಲಿಗರ ನಡುವೆ ಭಿನ್ನಾಭಿಪ್ರಾಯಗಳು ಬಹಿರಂಗವಾಗಿವೆ. ಚನ್ನಿ ಪರದ ಹಲವು ನಾಯಕರು ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆ ಆಗಬೇಕೆಂದು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡ ಪರಿಸ್ಥಿತಿಯನ್ನು ನಿರ್ವಹಿಸಲು ಮಧ್ಯಪ್ರವೇಶಿಸಿದೆ.
ವಾರಿಂಗ್ ಅವರು ಚನ್ನಿ ತಮ ಹಿರಿಯ ಸಹೋದ್ಯೋಗಿ, ಪಕ್ಷದ ಪ್ರಮುಖ ನಾಯಕ ಎಂದು ಹೇಳುತ್ತಾ ಭಿನ್ನಾಭಿಪ್ರಾಯಗಳ ವರದಿಗಳನ್ನು ತಳ್ಳಿಹಾಕಲು ಪ್ರಯತ್ನಿಸುತ್ತಿದ್ದಾರೆ. ಆದರೆ ಜುಲೈ 2026ರಲ್ಲಿ ನಡೆದ ಸಭೆಗಳು, ನಾಯಕತ್ವ ಬದಲಾವಣೆಯ ಬೇಡಿಕೆಗಳು ಮತ್ತು ಕಾರ್ಯಕ್ರಮಗಳ ಬಹಿಷ್ಕಾರದಂತಹ ಬೆಳವಣಿಗೆಗಳು ಪಕ್ಷದ ಒಳಗಿನ ಸಮಸ್ಯೆ ಇನ್ನೂ ಸಂಪೂರ್ಣವಾಗಿ ಪರಿಹಾರವಾಗಿಲ್ಲ ಎಂಬುದನ್ನು ತೋರಿಸಿವೆ.
ಈ ಪರಿಸ್ಥಿತಿಯಲ್ಲಿ ಅಮರಿಂದರ್ ಸಿಂಗ್ ಮರಳಿದರೆ, ಅದು ಕಾಂಗ್ರೆಸ್‌ಗೆ ಹೆಚ್ಚುವರಿ ಬಲವಾಗುವುದಕ್ಕಿಂತ ಮತ್ತೊಂದು ಶಕ್ತಿಕೇಂದ್ರವನ್ನು ಸೃಷ್ಟಿಸುವ ಸಾಧ್ಯತೆಯೂ ಇದೆ.
