Homeರಾಜ್ಯದ್ವಿತೀಯ ಪಿಯುಸಿ ಫಲಿತಾಂಶ ಶೇ.92.25ಕ್ಕೆ ಏರಿಕೆ

ದ್ವಿತೀಯ ಪಿಯುಸಿ ಫಲಿತಾಂಶ ಶೇ.92.25ಕ್ಕೆ ಏರಿಕೆ

Second PUC result rises to 92.25%

ಬೆಂಗಳೂರು,ಮೇ21- ದ್ವಿತೀಯ ಪಿಯುಸಿ ಪರೀಕ್ಷೆ -2ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಪ್ರಕಟಿಸಿದೆ. ರಾಜ್ಯದ ಎರಡೂ ಪರೀಕ್ಷೆಗಳ ಒಟ್ಟು ಕ್ರೋಢೀಕೃತ ಫಲಿತಾಂಶವು ಶೇ.92.25ಕ್ಕೆ ಏರಿಕೆಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್‌‍.ಮಧುಬಂಗಾರಪ್ಪ ತಿಳಿಸಿದ್ದಾರೆ.

ಫಲಿತಾಂಶ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದ್ವಿತೀಯ ಪರೀಕ್ಷೆ-1ರಲ್ಲಿ ಶೇ.86.52ರಷ್ಟು ಫಲಿತಾಂಶ ಬಂದಿತ್ತು. ಕಳೆದ ವರ್ಷದ ಶೇ.85.19 ಫಲಿತಾಂಶಕ್ಕೆ ಹೋಲಿಸಿದರೆ ಇದು ಶೇ.7.06ರಷ್ಟು ಮಹತ್ವದ ಏರಿಕೆಯಾಗಿದೆ. ಇದು ಕರ್ನಾಟಕದ ಇತಿಹಾಸದಲ್ಲೇ ದೊಡ್ಡ ಸಾಧನೆಯಾಗಿದೆ ಎಂದು ಬಣ್ಣಿಸಿದ್ದಾರೆ.

ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ -1ರಲ್ಲೇ ರಾಜ್ಯವು ಸಾರ್ವಕಾಲಿಕ ದಾಖಲೆಯ ಫಲಿತಾಂಶ ಸಾಧಿಸಿದ್ದು,ಇದೀಗ ಪರೀಕ್ಷೆ 2ರ ನಂತರ ಈ ದಾಖಲೆಯನ್ನು ಮತ್ತೊಮೆ ಸುಧಾರಿಸಿ ಹೊಸ ಇತಿಹಾಸ ನಿರ್ಮಿಸಿರುವುದು ನಮಗೆ ಹೆಮೆಯ ವಿಷಯವಾಗಿದೆ ಎಂದಿದ್ದಾರೆ.

ದೇಶದಲ್ಲೇ ಈ ಎರಡು ಪರೀಕ್ಷೆಯ ವಿಧಾನವನ್ನು ಕರ್ನಾಟಕ ಸರ್ಕಾರ ಮೊದಲ ಬಾರಿಗೆ ಜಾರಿಗೆ ತಂದಿದೆ. ಇದರಿಂದ ತಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಬಯಸಿದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಪರೀಕ್ಷೆ 2ರಲ್ಲಿ ಅಂಥ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.
ಎರಡೂ ಪರೀಕ್ಷೆಗಳಲ್ಲಿ ಯಾವುದರಲ್ಲಿ ಗರಿಷ್ಠ ಅಂಕ ಪಡೆದಿರುತ್ತಾರೋ ಅದನ್ನು ಪರಿಗಣಿಸುವುದರಿಂದ ಕೇವಲ ಒಟ್ಟಾರೆ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಸಂಖ್ಯೆಯಷ್ಟೇ ಹೆಚ್ಚುವುದಲ್ಲ. ಅವರು ಉತ್ತೀರ್ಣಗೊಂಡಿರುವ ಅಂಕಗಳಲ್ಲೂ ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.

ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲೂ ಗಮನಾರ್ಹ ಸಾಧನೆ ದಾಖಲಾಗಿದೆ. ಕಲಾ ವಿಭಾಗದ ಫಲಿತಾಂಶ ಕಳೆದ ವರ್ಷದ ಶೇ.69.47ರಿಂದ ಶೇ.83.31ಕ್ಕೆ, ವಾಣಿಜ್ಯ ವಿಭಾಗದ ಫಲಿತಾಂಶ ಶೇ.87.83ರಿಂದ ಶೇ.92.84ಕ್ಕೆ ಹಾಗೂ ವಿಜ್ಞಾನ ವಿಭಾಗದ ಫಲಿತಾಂಶ ಶೇ.91.88ರಿಂದ ಶೇ.96.01ಕ್ಕೆ ಏರಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಬಾರಿ ವಿಶೇಷ ಸಾಧನೆ ಮಾಡಿದ್ದು, ಶೇ.92.77ರಷ್ಟು ಗ್ರಾಮಾಂತರ ಪ್ರದೇಶದ ಫಲಿತಾಂಶ ದಾಖಲಾಗಿದೆ. ನಗರ ಪ್ರದೇಶದ ಫಲಿತಾಂಶ ಶೇ.92.01ರಷ್ಟಾಗಿದೆ.

ಕಳೆದ ವರ್ಷ ಗ್ರಾಮೀಣ ಭಾಗದ ಫಲಿತಾಂಶ ಶೇ.84.94ರಷ್ಟು ಬಂದಿತ್ತು. ಈ ಬಾರಿ ಗ್ರಾಮೀಣ ವಿದ್ಯಾರ್ಥಿಗಳ ಫಲಿತಾಂಶದಲ್ಲೂ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ.ಸರ್ಕಾರಿ ಪದವಿಪೂರ್ವ ಕಾಲೇಜುಗಳ ಫಲಿತಾಂಶವು ಸುಧಾರಿಸಿರುವುದು ಸಂತೋಷ ತಂದಿದೆ. ಕಳೆದ ವರ್ಷ ಶೇ.73.04ರಷ್ಟಿದ್ದ ಕ್ರೋಢೀಕೃತ ಫಲಿತಾಂಶವು ಈ ಬಾರಿ ಶೇ.87.03ಕ್ಕೆ ಏರಿಕೆಯಾಗಿದ್ದು, ಸುಮಾರು ಶೇ.13.99ರಷ್ಟು ಸುಧಾರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಾಜದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳ ಫಲಿತಾಂಶದಲ್ಲೂ ಸುಧಾರಣೆ ಕಂಡುಬಂದಿದೆ. ಇಲಾಖೆಯು ಕೈಗೊಂಡ ಹಲವು ಯೋಜಿತ ಕ್ರಮಗಳಿಂದಾಗಿ ಈ ಸುಧಾರಣೆ ಸಾಧ್ಯವಾಗಿದೆ ಎಂದು ಮಧುಬಂಗಾರಪ್ಪ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ-2ನ್ನು ಏ.30ರಿಂದ ಮೇ 13ರವರೆಗೆ 253 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. 12 ಮೌಲ್ಯಮಾಪನ ಶಿಬಿರಗಳಲ್ಲಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡಲಾಗಿತ್ತು.

ಪರೀಕ್ಷೆಗೆ 80,535 ವಿದ್ಯಾರ್ಥಿಗಳು ಹಾಜರಾಗಿದ್ದು, 36,746 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.45.65ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪರೀಕ್ಷೆ 1 ಮತ್ತು 2ರ ಕ್ರೋಢೀಕೃತ ಫಲಿತಾಂಶ ಶೇ.92.25ರಷ್ಟಿದೆ.

RELATED ARTICLES

Latest News