ನವದೆಹಲಿ,ಜು.24- ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ, ಸ್ಪರ್ಧಾತಕ ಪರೀಕ್ಷೆಗಳ ಅಕ್ರಮಗಳಿಗೆ ಹೊಣೆಗಾರಿಕೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಆಗ್ರಹಿಸಿ ನಡೆಸುತ್ತಿದ್ದ 26 ದಿನಗಳ ಸುದೀರ್ಘ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಸಿದ್ಧ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ಕೇಂದ್ರ ಸರ್ಕಾರದ ಭರವಸೆಯ ಮೇರೆಗೆ ಅಂತ್ಯಗೊಳಿಸಿದ್ದಾರೆ.
ಗುರುಗಾವ್‌ನ ಮೆಡಾಂಟಾ ಆಸ್ಪತ್ರೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ಸಚಿವ ಡಾ. ಜಿತೇಂದ್ರ ಸಿಂಗ್ ಅವರು ವಾಂಗ್ಚುಕ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ.ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲು ಸರ್ಕಾರ ಸಮತಿಸಿದೆ.
ಶಾಂತಿಯುತ ಪ್ರತಿಭಟನೆ ಹಾಗೂ ಸಂಸತ್ ಚಲೋದಲ್ಲಿ ಭಾಗವಹಿಸಿದವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಸಕಾರಾತಕ ಪರಿಶೀಲನೆ ನಡೆಸುವುದಾಗಿ ಕೇಂದ್ರ ತಿಳಿಸಿದೆ.ನೀಟ್ ಅಕ್ರಮದಿಂದ ಮನನೊಂದು ಆತಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ವಾಂಗ್ಚುಕ್ ಮನವಿ :
ಉಪವಾಸ ಅಂತ್ಯಗೊಳಿಸಿದ ಬಳಿಕ ಎಕ್‌್ಸನಲ್ಲಿ ಪ್ರತಿಕ್ರಿಯಿಸಿದ ಸೋನಂ ವಾಂಗ್ಚುಕ್, ದೇಶದಲ್ಲಿ ಶಾಂತಿ ಮತ್ತು ಅಹಿಂಸೆಯನ್ನು ಕಾಯ್ದುಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದು, ಶೀಘ್ರದಲ್ಲೇ ವಿಡಿಯೋ ಮೂಲಕ ಪೂರ್ಣ ವಿವರ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಶುಭಹಾರೈಕೆ: ವಾಂಗ್ಚುಕ್ ಅವರ ನಿರ್ಧಾರವನ್ನು ಸ್ವಾಗತಿಸಿದ ಪ್ರಧಾನಿ ಮೋದಿ, ಅವರು ವೈದ್ಯಕೀಯ ಸಲಹೆ ಪಾಲಿಸಿ ಶೀಘ್ರವೇ ಪೂರ್ಣ ಆರೋಗ್ಯ ಮರಳಿ ಪಡೆಯಲಿ ಎಂದು ಆಶಿಸಿದ್ದಾರೆ.ಜೂನ್ 28ರಂದು ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಆರಂಭವಾದ ಪ್ರತಿಭಟನೆಗೆ ಸೋನಂ ವಾಂಗ್ಚುಕ್ ಬೆಂಬಲ ಸೂಚಿಸಿ ಉಪವಾಸ ಆರಂಭಿಸಿದ್ದರು.
ಉಪವಾಸದ ಅವಧಿಯಲ್ಲಿ 11 ಕೆ.ಜಿ. ತೂಕ ಕಳೆದುಕೊಂಡ ಅವರ ಆರೋಗ್ಯ ಕ್ಷೀಣಿಸಿದಾಗ ದೆಹಲಿ ಪೊಲೀಸರು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅವರ ಪತ್ನಿ ಗೀತಾಂಜಲಿ ಅಂಗೋ ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ದೆಹಲಿ ಹೈಕೋರ್ಟ್ ನಿರ್ದೇಶನದಂತೆ ಅವರನ್ನು ಮೆಡಾಂಟಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಸಂಸದರ ಬೆಂಬಲ: ಉಪವಾಸದ ಅವಧಿಯಲ್ಲಿ ವಿವಿಧ ಪಕ್ಷಗಳ 65ಕ್ಕೂ ಹೆಚ್ಚು ಸಂಸದರು ವಾಂಗ್ಚುಕ್ ಅವರನ್ನು ಭೇಟಿಯಾಗಿ/ಪತ್ರ ಬರೆದು ಆರೋಗ್ಯದ ಹಿತದಷ್ಟಿಯಿಂದ ಉಪವಾಸ ಕೈಬಿಡುವಂತೆ ಕೋರಿದ್ದರು.
ಸಿಜೆಪಿ ಪ್ರತಿಭಟನೆ ಮುಂದುವರಿಕೆ :
ಸೋನಂ ವಾಂಗ್ಚುಕ್ ಅವರು ಸತ್ಯಾಗ್ರಹ ಅಂತ್ಯಗೊಳಿಸಿದ್ದರೂ, ಜಂತರ್ ಮಂತರ್‌ನಲ್ಲಿ ತಮ ಶಾಂತಿಯುತ ಹೋರಾಟ ಮುಂದುವರಿಯಲಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭೀಜಿತ್ ದಿಪ್ಕೆ ಸ್ಪಷ್ಟಪಡಿಸಿದ್ದಾರೆ.
ಮುಖ್ಯ ಬೇಡಿಕೆಗಳು:
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ.
ನೀಟ್ ಅಕ್ರಮದಿಂದಾಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ.ಪ್ರತಿಭಟನಾಕಾರರ ಮೇಲಿನ ಎಲ್ಲಾ ಎಫ್‌ಐಆರ್ ರದ್ದುಗೊಳಿಸುವುದು.
ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಹಾಗೂ ಪಾರದರ್ಶಕ ಸುಧಾರಣೆ.ಸೋನಂ ವಾಂಗ್ಚುಕ್ ಅವರ ಸತ್ಯಾಗ್ರಹ ಮುಕ್ತಾಯದೊಂದಿಗೆ ಕೇಂದ್ರ ಸರ್ಕಾರಕ್ಕೆ ತಾತ್ಕಾಲಿಕ ಸಮಾಧಾನ ಸಿಕ್ಕಿದೆಯಾದರೂ, ಸಚಿವರ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿ ಹಾಗೂ ಯುವ ಸಂಘಟನೆಗಳ ಪ್ರತಿಭಟನೆ ದೆಹಲಿಯಲ್ಲಿ ಮುಂದುವರಿದಿದೆ.
