ಪಾಟ್ನಾ, ಮೇ.11- ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (ಪಿಎ) ಚಂದ್ರನಾಥ್ ರಥ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಬಿಹಾರದ ಬಕ್ಸಾರ್ ಜಿಲ್ಲೆಯಿಂದ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ವಿಶೇಷ ಕಾರ್ಯಪಡೆ ಪೊಲೀಸರು, ಕ್ರಿಮಿನಲ್ ವಿಶಾಲ್ ಶ್ರೀವಾಸ್ತವ ಸೇರಿದಂತೆ ಮೂವರು ಶಂಕಿತರನ್ನು ಬಕ್ಸಾರ್‌ನಿಂದ ಬಂಧಿಸಿ ಪಶ್ಚಿಮ ಬಂಗಾಳಕ್ಕೆ ಕರೆತಂದಿದ್ದಾರೆ ಎಂದು ವರದಿಯಾಗಿದೆ.
ಬಂಧಿತ ವಿಶಾಲ್ ವಿರುದ್ಧ ಕೊಲೆ ಮತ್ತು ದರೋಡೆ ಸೇರಿದಂತೆ 22 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.ಇತರ ಇಬ್ಬರನ್ನು ಮಾಯಾಂಕ್ ಮಿಶ್ರಾ ಮತ್ತು ವಿಕ್ಕಿ ಮೌರ್ಯ ಎಂದು ಗುರುತಿಸಲಾಗಿದೆ. ಆದಾಗ್ಯೂ, ಅವರ ಬಂಧನದ ಬಗ್ಗೆ ಇನ್ನೂ ಅಧಿಕೃತಗೊಳಿಸಿಲ್ಲ.
ಪಶ್ಚಿಮ ಬಂಗಾಳ ಪೊಲೀಸ್ ತಂಡ ಬಕ್ಸಾರ್ ಮೇಲೆ ದಾಳಿ ನಡೆಸಿ, ಕೆಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ ಎಂದು ಬಕ್ಸಾರ್ ಎಸ್ಪಿ ಶುಭಮ್ ಆರ್ಯ ದೃಢಪಡಿಸಿದ್ದಾರೆ. ಕೋಲ್ಕತ್ತಾ ಬಳಿಯ ಬ್ಯಾಲಿಯಲ್ಲಿರುವ ಟೋಲ್ ಬೂತ್‌ನಲ್ಲಿ ದಾಳಿಕೋರರು ಮಾಡಿದ ಯುಪಿಐ ಪಾವತಿಯನ್ನು ಪೊಲೀಸರು ಪತ್ತೆಹಚ್ಚಿದ ನಂತರ ಈ ಬಂಧನಗಳು ನಡೆದಿವೆ.
