ಮುಂಬೈ, ಏ.9- ಸುಮಾರು 15,400 ಟನ್ (ಎಲ್‌ಜಿಪಿ) ಅನಿಲವನ್ನು ಹೊತ್ತ ಭಾರತ ಧ್ವಜದ ಹಡಗು ಯಶಸ್ವಿಯಾಗಿ ಹಾರ್ಮುಜ್ ಕಣಿವೆಯನ್ನು ದಾಟಿ ನವಿ ಮುಂಬೈನ ಬಂದರಿಗೆ ತಲುಪಿದೆ. ಇರಾನ್- ಅಮೆರಿಕಾ ಸಂಘರ್ಷ ನಿಂತ ನಂತರ ಈ ಬೆಳವಣಿಗೆ ಗಮನಾರ್ಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಗ್ರೀನ್ ಆಶಾ ಎಂಬ ಭಾರತ ಧ್ವಜದ ಹಡಗು ಹಾರ್ಮುಜ್ ಕಣಿವೆಯನ್ನು ಯಶಸ್ವಿಯಾಗಿ ದಾಟಿ ಬಂದು ಇಲ್ಲಿನ ಬಂದರಿನಲ್ಲಿ ದ್ರವ ಟರ್ಮಿನಲ್‌ಗೆ ಸುರಕ್ಷಿತವಾಗಿ ನಂಗುರ ಹಾಕಿದೆ.ಯುದ್ಧ ಪ್ರಾರಂಭವಾದ ನಂತರ ಇಲ್ಲಿಗೆ ತಲುಪಿದ ಮೊದಲ ಹಡಗು ಇದಾಗಿದ್ದು, ಇದು 15,400 ಟನ್ ಎಲ್‌ಜಿಪಿ ಅನ್ನು ಸಾಗಿಸಿದೆ ಎಂದು ತಿಳಿಸಲಾಗಿದೆ.
ಹಡಗು, ಅದರ ಸರಕು ಹಾಗೂ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಈ ಆಗಮನವು ಸಂಕೀರ್ಣ ಜಿಯೋಪಾಲಿಟಿಕಲ್ ಪರಿಸ್ಥಿತಿಗಳ ನಡುವೆಯೂ ಸಾಗರ ಸಾರಿಗೆ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿರುವುದನ್ನು ತೋರಿಸುತ್ತದೆ.
ದೇಶಕ್ಕೆ ಅಗತ್ಯವಾದ ಅನಿಲ ಸರಬರಾಜು ನಿರಂತರವಾಗಿರಲು ಇದು ಸಹಕಾರಿಎಂದು ಪ್ರಕಟಣೆ ತಿಳಿಸಿದೆ.ನವಿ ಮುಂಬೈನಲ್ಲಿರುವ ನೆಹರು ಬಂದರು ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದ್ದು, ಕಂಟೈನರ್ ಮತ್ತು ದ್ರವ ಸರಕು ಸಾಗಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಇಂಧನ ಸರಬರಾಜು ಸರಪಳಿಯಲ್ಲಿ ಇದು ಪ್ರಮುಖ ಕೊಂಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
