Thursday, April 16, 2026
Homeರಾಜ್ಯಯೋಗೇಶ್‌ಗೌಡ ಹತ್ಯೆ ಪ್ರಕರಣ : ಏ.15ಕ್ಕೆ ವಿನಯ್‌ ಕುಲಕರ್ಣಿ ಭವಿಷ್ಯ ನಿರ್ಧಾರ

ಯೋಗೇಶ್‌ಗೌಡ ಹತ್ಯೆ ಪ್ರಕರಣ : ಏ.15ಕ್ಕೆ ವಿನಯ್‌ ಕುಲಕರ್ಣಿ ಭವಿಷ್ಯ ನಿರ್ಧಾರ

Yogesh Gowda murder case:

ಬೆಂಗಳೂರು,ಏ.9- ಬಿಜೆಪಿಯ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೇಶ್‌ಗೌಡ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀರ್ಪು ಪ್ರಕಟಿಸುವ ದಿನಾಂಕವನ್ನು ಜನ ಪ್ರತಿನಿಧಿಗಳ ನ್ಯಾಯಾಲಯ ಏ.15ಕ್ಕೆ ಮುಂದೂಡಿದೆ.

ಈ ಮೂಲಕ ರಾಜ್ಯ ರಾಜಕೀಯದಲ್ಲಿ ಅತೀ ಹೆಚ್ಚು ಗಮನ ಸೆಳೆದಿದ್ದ ಪ್ರಕರಣವೊಂದು ಮುಂದಿನ ಆರು ದಿನಗಳಲ್ಲಿ ಇತ್ಯರ್ಥಗೊಳ್ಳುವ ಸಾಧ್ಯತೆ ಇದ್ದು, ಮಾಜಿ ಸಚಿವ ಹಾಗೂ ಶಾಸಕ ವಿನಯ್‌ಕುಲಕರ್ಣಿ ಅವರ ಭವಿಷ್ಯ ಕೂಡ ನಿರ್ಧಾರವಾಗಲಿದೆ.

2016ರ ಜೂನ್‌ 15ರಂದು ಯೋಗೇಶ್‌ಗೌಡ ಅವರನ್ನು ಧಾರವಾಡದ ಸಪ್ತಾಪುರದಲ್ಲಿದ್ದ ಅವರ ಜಿಮ್‌ನಲ್ಲಿ ಮಾರಕ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ವೇಳೆ ಕಣ್ಣಿಗೆ ಕಾರದಪುಡಿ ಹಚ್ಚಿ ದುಷ್ಕರ್ಮಿಗಳು ವಿಕೃತ ಅಟ್ಟಹಾಸ ಮೆರೆದಿದ್ದರು. ಬಳಿಕ ಕೆಲವರು ತಾವೇ ಕೊಲೆ ಮಾಡಿದ್ದಾಗಿ ನ್ಯಾಯಾಲಯಕ್ಕೆ ಶರಣಾಗಿದ್ದರು.

ಆದರೆ ಪ್ರಕರಣವನ್ನು 2019ರಲ್ಲಿ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಆ ಬಳಿಕ ಯೋಗೇಶ್‌ಗೌಡ ಅವರ ಹತ್ಯೆ ಹಿಂದೆ ರಾಜಕೀಯ ಸಂಚು ಇದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಯೋಗೇಶ್‌ಗೌಡ ಅವರ ಹತ್ಯೆಗೆ ನ್ಯಾಯ ಕೊಡಿಸಲು ಅವರ ಪತ್ನಿ ಹೋರಾಟ ಮಾಡಿದ್ದರು. ನಂತರ ಕಾಂಗ್ರೆಸ್‌‍ ಪಕ್ಷಕ್ಕೆ ಸೇರ್ಪಡೆಯಾದರು. ಯೋಗೇಶ್‌ಗೌಡ ಅವರ ಸಹೋದರ ಗುರುನಾಥ ಗೌಡ ನಿರಂತರವಾದ ಸಂಘರ್ಷ ನಡೆಸಿದ್ದರು. ತನಿಖೆ ನಡೆಸಿದ ಸಿಬಿಐ, ಕೊಲೆ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ್‌ ಕುಲಕರ್ಣಿಯವರನ್ನು ಬಂಧಿಸಿ 15ನೇ ಆರೋಪಿಯನ್ನಾಗಿ ಗುರುತಿಸಿತ್ತು.

ಆರಂಭದಲ್ಲಿ ಒಂದಷ್ಟು ದಿನ ಜೈಲಿನಲ್ಲಿದ್ದ ವಿನಯ್‌ ಕುಲಕುರ್ಣಿ ಜಾಮೀನು ಪಡೆದು ಹೊರ ಬಂದಿದ್ದರು. ಆದರೆ ಸಿಬಿಐನ ಆಕ್ಷೇಪಣೆಯಿಂದಾಗಿ ಜಾಮೀನು ರದ್ದುಗೊಂಡು ಜೈಲುಪಾಲಾಗಿದ್ದರು.ಇತ್ತೀಚೆಗೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ವಿನಯ್‌ಕುಲಕರ್ಣಿ ಜಾಮೀನು ಪಡೆದುಕೊಂಡಿದ್ದರು. ಪ್ರಕರಣದಲ್ಲಿ ಪ್ರಮುಖ ಆರೋಪಿ ಬಸವರಾಜ ಶಿವಪ್ಪ ಮುತ್ತಗಿ ಸೇರಿದಂತೆ ಒಟ್ಟು 21 ಮಂದಿಯನ್ನು ಸಿಬಿಐ ಬಂಧಿಸಿದೆ.

ಚಂದ್ರಶೇಖರ ಇಂಡಿ, ಸಂತೋಷ ಸವದತ್ತಿ, ದಿನೇಶ್‌. ಎಂ., ಸುನೀಲ್‌ ಕೆ.ಎಸ್‌‍., ಹರ್ಷಿತಾ, ನಜೀರ್‌ ಅಹಮದ್‌, ಶಹಾನ್‌ವಾಜ್‌, ನೂತನ್‌ ಎಂಬುವವರನ್ನು ಗುರುತಿಸಿತ್ತು. 9ರಿಂದ 14ನೇ ಆರೋಪಿಗಳು ನೇರವಾಗಿ ದಾಳಿ ಮಾಡಿದವರೆಂದು ಗುರುತಿಸಲಾಗಿದ್ದು, 17 ರಿಂದ 21ರ ವರೆಗಿನ ಆರೋಪಿಗಳನ್ನು ಕೊಲೆಯ ಬಳಿಕ ಆಶ್ರಯ ಹಾಗೂ ಸಹಾಯ ಮಾಡಿದ್ದವರೆಂದು ಗುರುತಿಸಲಾಗಿತ್ತು.

ಸ್ಥಳೀಯವಾದ ದ್ವೇಷ, ಜಮೀನಿನ ವಿವಾದ ಕಾರಣ ಎಂದು ಕೊಲೆಯಾದ ಆರಂಭದಲ್ಲಿ ಭಾವಿಸಲಾಗಿತ್ತು. 2017-18ರಲ್ಲಿ ರಾಜ್ಯ ಪೊಲೀಸರು ಪ್ರಕರಣದ ದೋಷಾರೋಪಣಾ ಪಟ್ಟಿ ಕೂಡ ಸಲ್ಲಿಸಿದ್ದರು. ಆದರೆ ಕೊಲೆಯಲ್ಲಿ ಪ್ರಭಾವಿಗಳ ಕೈವಾಡವಿದೆ ಮತ್ತು ರಾಜಕೀಯ ಹಿನ್ನೆಲೆ ಒಳಗೊಂಡಿದೆ ಎಂಬ ಕಾರಣಕ್ಕಾಗಿ 2019ರಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದ್ದು, ಸೆ.24ರಂದು ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡು ಆರಂಭದಲ್ಲಿ 8 ಮಂದಿ ಆರೋಪಿಗಳನ್ನು ಗುರುತಿಸಿತ್ತು.

ಆದರೆ ನಂತರ ತನಿಖೆ ವಿಸ್ತೃತಗೊಂಡಂತೆ ಆರೋಪಿಗಳ ಸಂಖ್ಯೆ ಕೂಡ ಹೆಚ್ಚಾಗಿತ್ತು. ಪ್ರಮುಖವಾಗಿ ಕಾಂಗ್ರೆಸ್‌‍ನ ಮಾಜಿ ಸಚಿವ ವಿನಯ್‌ಕುಲಕರ್ಣಿಯವರಿಗೆ ಕಂಟಕ ಪ್ರಾಯವಾಗಿತ್ತು.

RELATED ARTICLES

Latest News