ಕೋಲ್ಕತ್ತಾ,ಜು.11- ಸಾಮಾಜಿಕ ಜಾಲತಾಣ ದಲ್ಲಿ ವಿವಾದಾತಕ ವಿಷಯವನ್ನು ಪೋಸ್ಟ್ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೊಲೀಸರು ಇಬ್ಬರು ಉಪ ಪೊಲೀಸ್ ಆಯುಕ್ತರನ್ನು (ಡಿಸಿಪಿ) ಅಮಾನತುಗೊಳಿಸಲಾಗಿದೆ. ಇಬ್ಬರು ಅಧಿಕಾರಿಗಳ ಸಾಮಾಜಿಕ ಜಾಲತಾಣ ಚಟುವಟಿಕೆಗಳ ಕುರಿತು ನಡೆಸಿದ ಆಂತರಿಕ ಪರಿಶೀಲನೆಯಲ್ಲಿ ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪೊಲೀಸ್ ಸಿಬ್ಬಂದಿ, ವಿಶೇಷವಾಗಿ ಹಿರಿಯ ಅಧಿಕಾರಿಗಳು, ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರ ದೃಷ್ಟಿಯಲ್ಲಿ ಪೊಲೀಸ್ ಇಲಾಖೆಯ ಪ್ರತಿಷ್ಠೆಗೆ ಧಕ್ಕೆಯಾಗುವಂತಹ ಯಾವುದೇ ವಿಷಯವನ್ನು ನಿಯಮಾನುಸಾರ ಪರಿಶೀಲಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮಾನತುಗೊಂಡ ಅಧಿಕಾರಿಗಳನ್ನು ಉತ್ತರ ವಿಭಾಗ ಡಿಸಿಪಿ ವಿಧಾನ ಸಾಹಾ ಹಾಗೂ ಬಂದರು ವಿಭಾಗ ಡಿಸಿಪಿ ಪಾರ್ಥ ಪ್ರತಿಮ್ ದಾಸ್ ಎಂದು ಗುರುತಿಸಲಾಗಿದೆ.ಮೂಲಗಳ ಪ್ರಕಾರ, 2025ರಲ್ಲಿ ಪೊಲೀಸ್ ಇಲಾಖೆಯ ವಾಟ್ಸ್ಆ್ಯಪ್ ಗುಂಪಿನಲ್ಲಿ ಈ ಇಬ್ಬರು ಅಧಿಕಾರಿಗಳು ಮಾಡಿದ್ದ ಎನ್ನಲಾದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಅಮಾನತು ಕ್ರಮ ಕೈಗೊಳ್ಳಲಾಗಿದೆ.
ಅಮಾನತುಗೊಂಡ ಅಧಿಕಾರಿಗಳಲ್ಲಿ ಒಬ್ಬರು ಆಗಿನ ಪ್ರತಿಪಕ್ಷ ನಾಯಕ ಹಾಗೂ ಈಗಿನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಮಾಡಿದ್ದರೆ, ಮತ್ತೊಬ್ಬ ಅಧಿಕಾರಿ ಆ ಹೇಳಿಕೆಯನ್ನು ಬೆಂಬಲಿಸಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ದೂರುಗಳು ಬಂದ ಬಳಿಕ ಕೋಲ್ಕತ್ತಾ ಪೊಲೀಸರು ತನಿಖೆ ಆರಂಭಿಸಿ, ಬಳಿಕ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ.
ಇಬ್ಬರು ಅಧಿಕಾರಿಗಳ ವಿರುದ್ಧ ಇಲಾಖಾ ಮಟ್ಟದ ಮುಂದಿನ ಶಿಸ್ತು ಕ್ರಮವೂ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದಕ್ಕೂ ಮುನ್ನ ಕೋಲ್ಕತ್ತಾ ಪೊಲೀಸ್ ಆಯುಕ್ತ ಅಜಯ್ ಕುಮಾರ್ ನಂದ್ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡುವಾಗ ಅಥವಾ ಯಾವುದೇ ವಿಷಯವನ್ನು ಪೋಸ್ಟ್ ಮಾಡುವಾಗ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಸಿಬ್ಬಂದಿಯ ಯಾವುದೇ ಅನುಚಿತ ಸಂವಹನವು ಸಮಾಜದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಆನ್ಲೈನ್ ವೇದಿಕೆಗಳನ್ನು ಬಳಸುವಾಗ ಸಂಯಮ ಪಾಲಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
