ನವದೆಹಲಿ,ಆ.20- ಉತ್ತರ ಪ್ರದೇಶದ ಮುಜಫರ್ನಗರದ ತ್ವರಿತ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರವಿಕುಮಾರ್ ದಿವಾಕರ್ ಅವರು ಕಳೆದ ನಾಲ್ಕು ತಿಂಗಳುಗಳಲ್ಲಿ ನೀಡಿದ ಕಠಿಣ ಹಾಗೂ ದಿಟ್ಟ ತೀರ್ಪುಗಳ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ.
ಕೇವಲ 4 ತಿಂಗಳ ಅವಧಿಯಲ್ಲಿ 10 ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಒಟ್ಟು 22 ವ್ಯಕ್ತಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದು ನ್ಯಾಯಾಂಗ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಅವರ ನ್ಯಾಯಾಲಯದಲ್ಲಿದ್ದ ಸುಮಾರು 100 ಕೊಲೆ ಪ್ರಕರಣಗಳನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವೀರೇಂದ್ರ ಕುಮಾರ್ ಸಿಂಗ್ ಅವರ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
ಕಳೆದ 4 ತಿಂಗಳಲ್ಲಿ 10 ಪ್ರಕರಣಗಳಲ್ಲಿ 22 ಜನರಿಗೆ ಮರಣದಂಡನೆ ವಿಧಿಸಲಾಗಿದೆ. ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಒಳಪಡುವ ಸುಮಾರು 100 ಬಾಕಿ ಕೊಲೆ ಪ್ರಕರಣಗಳನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.ನ್ಯಾಯಾಲಯವು ಸರಣಿಯಾಗಿ ಮರಣದಂಡನೆ ವಿಧಿಸುತ್ತಿರುವ ವೇಗ ಮತ್ತು ಕಠಿಣತೆಯ ಬಗ್ಗೆ ಸ್ಥಳೀಯ ವಕೀಲರು ಹಾಗೂ ಕಕ್ಷಿದಾರರಲ್ಲಿ ಆತಂಕ ವ್ಯಕ್ತವಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಮೋದ್ ತ್ಯಾಗಿ ತಿಳಿಸಿದ್ದಾರೆ.
ನ್ಯಾಯಾಧೀಶ ರವಿಕುಮಾರ್ ದಿವಾಕರ್ ಹಿನ್ನೆಲೆ :
46 ವರ್ಷದ ಲಕ್ನೋ ನಿವಾಸಿಯಾಗಿರುವ ರವಿಕುಮಾರ್ ದಿವಾಕರ್ ಅವರು ಬಿಕಾಂ ಮತ್ತು ಎಲ್ಎಲ್ಎಂ ಪದವಿ ಪಡೆದಿದ್ದಾರೆ. 2009ರಲ್ಲಿ ಅಜಂಗಢದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾಗಿ ತಮ ವೃತ್ತಿಜೀವನ ಆರಂಭಿಸಿದ ಅವರು, 2015ರಲ್ಲಿ ಸುಲ್ತಾನಪುರದಲ್ಲಿ ಬಡ್ತಿ ಪಡೆದರು.
ಇವರು ಈ ಹಿಂದೆ 2022ರಲ್ಲಿ ವಾರಾಣಸಿಯ ಜ್ಞಾನವಾಪಿ ಸಂಕೀರ್ಣದ ವೀಡಿಯೊಗ್ರಫಿ ಸಮೀಕ್ಷೆ ನಡೆಸಲು ಆದೇಶ ಹೊರಡಿಸುವ ಮೂಲಕ ದೇಶಾದ್ಯಂತ ವ್ಯಾಪಕ ಸುದ್ದಿಯಲ್ಲಿದ್ದರು. ನವೆಂಬರ್ 2025 ರಿಂದ ಮುಜಫರ್ನಗರದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್್ಸ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಮುಖ ತೀರ್ಪುಗಳ ಪಟ್ಟಿ :
ಆಗಸ್ಟ್ 13 (12 ವರ್ಷ ಹಳೆಯ ಪ್ರಕರಣ): 2014ರ ಶಾಮ್ಲಿ ಜಿಲ್ಲೆಯ ಹಳೆಯ ದ್ವೇಷದ ಕೊಲೆ ಪ್ರಕರಣದಲ್ಲಿ ರಾಮ್ವೀರ್, ರಾಜೀವ್, ರಾಹುಲ್ ಮತ್ತು ಹರೇಂದರ್ ಕುಮಾರ್ ಎಂಬುವವರಿಗೆ ಮರಣದಂಡನೆ ಹಾಗೂ ತಲಾ 1.70 ಲಕ್ಷ ರೂ. ದಂಡ ವಿಧಿಸಲಾಯಿತು.
ಆಗಸ್ಟ್ 12 (1999ರ ಸುಲಿಗೆ ಪ್ರಕರಣ): 27 ವರ್ಷಗಳ ಹಿಂದೆ 5 ಲಕ್ಷ ರೂ. ಸುಲಿಗೆಗಾಗಿ ಮರದ ವ್ಯಾಪಾರಿ ಸಲೀಂ ಅವರನ್ನು ಅಪಹರಿಸಿ ಕತ್ತು ಸೀಳಿ ಕೊಂದ ಶಹನವಾಜ್ ಎಂಬಾತನಿಗೆ ಮರಣದಂಡನೆ ಶಿಕ್ಷೆ ನೀಡಲಾಯಿತು.
ಜುಲೈ 17 (2011ರ ರೈತ ಕೊಲೆ):
ದರೋಡೆ ಯತ್ನವನ್ನು ವಿರೋಧಿಸಿದ ರೈತ ರಾಜ್ ಸಿಂಗ್ ಹತ್ಯೆ ಪ್ರಕರಣದಲ್ಲಿ ನಾಲ್ವರಿಗೆ ಮರಣದಂಡನೆ ವಿಧಿಸಲಾಯಿತು.ಜುಲೈ 6 (2010ರ ರಾಜಬೀರ್ ಸಿಂಗ್ ಕೊಲೆ): ಪಂಚಾಯತ್ ಚುನಾವಣಾ ದ್ವೇಷದ ಹಿನ್ನೆಲೆಯಲ್ಲಿ 60 ವರ್ಷದ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಮಾಜಿ ಗ್ರಾಮ ಮುಖ್ಯಸ್ಥ ಪ್ರಮೋದ್ ಮತ್ತು ಸಹಚರ ಸಹದೇವ್ ಅವರಿಗೆ ಮರಣದಂಡನೆ ನೀಡಲಾಯಿತು.
ಜುಲೈ 2 (ಕರ್ತವ್ಯನಿರತ ಗೃಹರಕ್ಷಕ ದಳದ ಸಿಬ್ಬಂದಿ ಕೊಲೆ): 2020ರಲ್ಲಿ ತಾಯಿಯ ಮೇಲಿನ ಹಲ್ಲೆ ತಡೆಯಲು ಬಂದ ಗಹರಕ್ಷಕ ದಳದ ಸಿಬ್ಬಂದಿ ರತಿರಾಮ್ ಅವರನ್ನು ಚಾಕುವಿನಿಂದ ಇರಿದು ಕೊಂದ ದೀಪಕ್ ಎಂಬಾತನಿಗೆ ಅಪರೂಪದಲ್ಲಿ ಅಪರೂಪದ ಪ್ರಕರಣವೆಂದು ಪರಿಗಣಿಸಿ ಮರಣದಂಡನೆ ವಿಧಿಸಲಾಯಿತು.
ಮೇ 30 (ಜೋಡಿ ಕೊಲೆ ಪ್ರಕರಣ):
2011ರಲ್ಲಿ ಮಹಿಳೆ (ರಾಜೇಶ್ ದೇವಿ) ಮತ್ತು ಆಕೆಯ 6 ವರ್ಷದ ಮಗುವನ್ನು ಇಟ್ಟಿಗೆಯಿಂದ ಹೊಡೆದು ಕೊಂದ ರಾಹಿಸ್ ಎಂಬಾತನಿಗೆ ಮರಣದಂಡನೆ ವಿಧಿಸಲಾಯಿತು.
ಏಪ್ರಿಲ್ 28 ಹಾಗೂ ಏಪ್ರಿಲ್ 6:
2019ರ ಪ್ರತ್ಯೇಕ ಕೊಲೆ ಮತ್ತು ವಕೀಲರ ಅಪಹರಣ-ಕೊಲೆ ಪ್ರಕರಣಗಳಲ್ಲಿ ಮಹಿಳೆ, ಆಕೆಯ ಮೂವರು ಗಂಡು ಮಕ್ಕಳು ಸೇರಿದಂತೆ ಹಲವರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿತ್ತು. ಪ್ರಸ್ತುತ ಈ ಎಲ್ಲಾ ಪ್ರಕರಣಗಳು ಮತ್ತು ನ್ಯಾಯಾಧೀಶರ ಕಠಿಣ ನಿಲುವುಗಳು ಕಾನೂನು ವಲಯದಲ್ಲಿ ಮತ್ತು ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವರ್ಗಾವಣೆಗೊಂಡಿರುವ 100 ಪ್ರಕರಣಗಳ ವಿಚಾರಣೆ ಹೊಸ ನ್ಯಾಯಾಲಯದಲ್ಲಿ ಯಾವ ರೀತಿಯಲ್ಲಿ ಮುಂದುವರಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.
