Saturday, July 27, 2024
Homeಜಿಲ್ಲಾ ಸುದ್ದಿಗಳುಮೈಸೂರು : ರಾಯಭಾರಿ ಕಚೇರಿಗಳ ಸ್ಫೋಟಕ್ಕೆ ಸ್ಕೆಚ್ ಹಾಕಿದ್ದ ಶಂಕಿತ ಅರೆಸ್ಟ್

ಮೈಸೂರು : ರಾಯಭಾರಿ ಕಚೇರಿಗಳ ಸ್ಫೋಟಕ್ಕೆ ಸ್ಕೆಚ್ ಹಾಕಿದ್ದ ಶಂಕಿತ ಅರೆಸ್ಟ್

ಮೈಸೂರು, ಮೇ 16-ಭಯೋತ್ಪಾದನ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಆರೋಪದಡಿ ಮೈಸೂರಿನಲ್ಲಿ ವ್ಯಕ್ತಿಯೊಬ್ಬನನ್ನು ಎನ್ಐಎ ಬಂಧಿಸಿದೆ. ನಗರದ ರಾಜೀವ್ ನಗರದಲ್ಲಿದ್ದ ನೂರುದ್ದೀನ್ ಅಲಿಯಾಸ್ ರಫಿ ಬಂಧಿತ ಆರೋಪಿ.

ದಾಳಿ ವೇಳೆ ಮನೆಯಲ್ಲಿದ್ದ ಆತನ ಮೊಬೈಲ್ ಫೋನ್ , ಪೆನ್ಡ್ರೈವ್ ಸೇರಿದಂತೆ ಇನ್ನೂ ಕೆಲ ವಸ್ತುಗಳನ್ನು ಎನ್ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 2014ರಲ್ಲಿ ಬೆಂಗಳೂರಿನ ಇಸ್ರೀಲ್ ಹಾಗೂ ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿಗಳ ಮೇಲೆ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪ ಈತನ ಮೇಲಿದೆ.

ಶ್ರೀಲಂಕಾ ಪ್ರಜೆ ಮೊಹಮದ್ ಸರ್ಕೀ ಹುಸೇನ್ ಹಾಗೂ ಕೊಲಂಬೋದಲ್ಲಿರುವ ಪಾಕಿಸ್ತಾನದ ರಾಜತಾಂತ್ರಿಕ ಕಚೇರಿ ನೌಕರ ಪಾಕಿಸ್ತಾನದ ಪ್ರಜೆ ಅರ್ಮೀ ಜುರ್ಬೇ ಸಿದ್ದಿಖಿಯನ್ನು ಎನ್ಐಎ ಅಧಿಕಾರಿಗಳು 2014ರಲ್ಲಿ ಬಂಧಿಸಿದ್ದರು. ಇವರಿಗೆ ಭಾರತದ ನಕಲಿ ನೋಟು ಪೂರೈಸುವ ಮೂಲಕ ಭಯೋತ್ಪಾದನ ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ನೂರುದ್ದೀನ್ ವಿರುದ್ಧ ಪ್ರಕರಣ ದಾಖಲಾಗಿತ್ತು.

2023ರ ಆಗಸ್ಟ್ನಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ನೂರುದ್ದೀನ್ ಚೆನ್ನೈನ ಎನ್ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನೂರುದ್ದೀನ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಅಲ್ಲದೇ ಆತನ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿತ್ತು. ಖಚಿತ ಮಾಹಿತಿ ಮೇರೆಗೆ ನಿನ್ನೆ ಮೈಸೂರಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಎನ್ಐಎ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

RELATED ARTICLES

Latest News