Friday, May 3, 2024
Homeರಾಜಕೀಯ1.5 ಲಕ್ಷ ಕೋಟಿ ರೂ. ಸಾಲ ಮಾಡಿದ ಪಿಕ್‍ಪಾಕೆಟ್ ಕಾಂಗ್ರೆಸ್ ಸರ್ಕಾರ : ಹೆಚ್‍ಡಿಕೆ ವಾಗ್ದಾಳಿ

1.5 ಲಕ್ಷ ಕೋಟಿ ರೂ. ಸಾಲ ಮಾಡಿದ ಪಿಕ್‍ಪಾಕೆಟ್ ಕಾಂಗ್ರೆಸ್ ಸರ್ಕಾರ : ಹೆಚ್‍ಡಿಕೆ ವಾಗ್ದಾಳಿ

ಮಧುಗಿರಿ, ಏ.20- ಕಾಂಗ್ರೆಸ್ ಸರ್ಕಾರ 1.5 ಲಕ್ಷ ಕೋಟಿ ರೂ. ಸಾಲ ಮಾಡಿದ್ದು ಈ ನಾಡಿನ ಜನರ ಜೇಬಿಂದ ಹಣ ಕಸಿಯುತ್ತಿರುವ ಪಿಕ್ ಪಾಕೆಟ್ ಸರ್ಕಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಪಟ್ಟಣದ ಸಂತೇ ಮೈದಾನದಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಾಡಿನ ತಾಯಂದಿರ ಮಾಂಗಲ್ಯ ಉಳಿಸಲು ಹಿಂದೆ ಸಾರಾಯಿ ಹಾಗೂ ಲಾಟರಿ ನಿಷೇಧ ಮಾಡಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸೈಕಲ್ ಕೊಟ್ಟು ಇಂಗ್ಲೀಷ್ ಪಬ್ಲಿಕ್ ಶಾಲೆ ಕೊಟ್ಟೆ. ಮುಖ್ಯವಾಗಿ ನಾಡಿನ ಅನ್ನದಾತನ ಸಂಪೂರ್ಣ ಸಾಲ ಮನ್ನಾ ಮಾಡಲು ಮುಂದಾದಾಗ ಇದೇ ಸಿದ್ದರಾಮಯ್ಯ ಅಡ್ಡಪಡಿಸಿದರು ಎಂದು ಅಸಮಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರ ಗ್ಯಾರೆಂಟಿಗೆ 1.5 ಲಕ್ಷ ಸಾಲ ಮಾಡದೆ ಕೇಂದ್ರದ ಕಡೆಗೂ ಕೈ ಚಾಚದೆ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ನನ್ನ ಭವಿಷ್ಯದ ಕರ್ನಾಟಕದ ಕನಸು ಹಾಗೆ ಇದೆ. ಇದನ್ನು ಪೂರ್ಣಗೊಳಿಸಲು ಒಬ್ಬನಿಂದ ಸಾಧ್ಯವಿಲ್ಲ. ಹಾಗಾಗಿ ಜಗತ್ತು ಮೆಚ್ಚಿದ ನರೇಂದ್ರಮೋದಿಯವರ ಕೈ ಬಲಪಡಿಸಲು ಬಿಜೆಪಿ ಜೊತೆಗೆ ನಿಂತಿದ್ದೇನೆ ಎಂದರು.

1.5 ಲಕ್ಷ ಕೋಟಿ ಸಾಲಮಾಡಿ ನಿಮಗೆ ಗ್ಯಾರೆಂಟಿ ಕೊಟ್ಟಿದ್ದು ಕೊನೆಗೆ ನೀವೆ ತಲಾ 36 ಸಾವಿರ ಸಾಲ ತೀರಿಸಬೇಕಿದೆ. ಆದರೆ ನನ್ನ ಯೋಜನೆಗಳು ನೀವೆ ಇನ್ನೊಬ್ಬರಿಗೆ ಕೊಡುವಂಥ ಶಕ್ತಿ ತರಲಿದೆ. ಹರ್ಷದ ಆಸೆಗೆ ವರ್ಷದ ಕೂಳು ಕಳೆದುಕೊಳ್ಳಬೇಡಿ. ಈ ಭಾಗದ ರೈತರಿಗೆ ಶಾಶ್ವತ ನೀರಾವರಿಯ ಶಕ್ತಿ ನೀಡುತ್ತೇನೆ. ಯಾವುದಕ್ಕೂ ಹೆದರದೆ ಮೈತ್ರಿ ಅಭ್ಯರ್ಥಿ ಸೋಮಣ್ಣ ಕನಿಷ್ಟ 4 ಲಕ್ಷ ಅಂತರದಲ್ಲಿ ಜಯಗಳಿಸುತ್ತಾರೆ ಎಂದರು.

ಜಿಲ್ಲೆಯ ಕುಂಚಿಟಿಗ ಒಕ್ಕಲಿಗ ಸಮಾಜಕ್ಕೆ ಹಿಂದುಳಿದ ಒಬಿಸಿ ಮೀಸಲಾತಿಯನ್ನು 1 ವರ್ಷದಲ್ಲಿ ಈಡೇರಿಸಲಾಗುವುದು. ಹಿಂದೆ ನಾಯಕ ಸಮಾಜವನ್ನು ಕೂಡ ಎಸ್ಟಿಗೆ ಸೇರಿಸಿದ್ದ ದೇವೇಗೌಡರು ಈ ಸಮಾಜಕ್ಕೂ ಮೀಸಲಾತಿ ಕೊಡಿಸಲಿದ್ದಾರೆ. ಈ ಬಾರಿ ಎಲ್ಲರೂ ಕ್ರಮ ಸಂಖ್ಯೆ 3 ಕಮಲದ ಗುರುತಿಗೆ ಮತ ಹಾಕಿ ಎಂದರು.

ಸಿದ್ದರಾಮಯ್ಯನದ್ದು ಡೋಂಗಿ ದಲಿತ ಪ್ರೀತಿ ಎಂದು ಜರಿದ ಕುಮಾರಸ್ವಾಮಿ, 2013 ರಲ್ಲಿ ಪರಮೇಶ್ವರ್ ಸೋಲಿಸಿ ಮಲ್ಲಿಕಾರ್ಜುನ ಖರ್ಗೆಯನ್ನು ರಾಜ್ಯದಿಂದ ಓಡಿಸಲು ಇದೇ ಸಿದ್ದು ಹಠ ಕಾರಣ. ಇದನ್ನು ದಲಿತ ಸಮಾಜ ಅರ್ಥ ಮಾಡಿಕೊಳ್ಳಿ ಎಂದರು. ಕುರುಬ ಸಮಾಜದ ಭಾಸ್ಕರಪ್ಪನವರನ್ನು ಲೋಕಸಭೆಗೆ ಕಳಿಸಿ ಕುರುಬರಿಗೆ ರಾಜಕೀಯ ಶಕ್ತಿ ತುಂಬಿದ್ದು ಇದೇ ದೇವೇಗೌಡರು ಎಂದರು.

ಕ್ಷೇತ್ರದಲ್ಲಿ ರೌಡಿ ರಾಜಕೀಯ:
ಡಿಸಿಸಿ ಬ್ಯಾಂಕನ್ನು ಅಪ್ಪನ ಮನೆ ಆಸ್ತಿ ಮಾಡಿಕೊಂಡಿದ್ದು, ಜೈ ಅಂದವರಿಗೆ ಮಾತ್ರ ಸಾಲ ಕೊಡಲಾಗುತ್ತಿದೆ. ಹೆದರಿಸಿ ವೋಟು ಹಾಕಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಅಂತಿಮ ತೆರೆ ಬೀಳುವ ದಿನ ದೂರವಿಲ್ಲ ಎಂದು ಹೇಳಿದರು.

ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ರಾಜ್ಯಕ್ಕೆ ಕುಮಾರಸ್ವಾಮಿ ಹಾಗೂ ದೇಶಕ್ಕೆ ನರೇಂದ್ರ ಮೋದಿಯ ಕೊಡುಗೆ ಅಪಾರ. ಇದು ದೇಶದ ಚುನಾವಣೆಯಾಗಿದ್ದು ನನ್ನ ಕ್ರಮಸಂಖ್ಯೆ 3. ಊರಿಗೆಲ್ಲ ನೀರು, ರಸ್ತೆಗೆ ಟಾರು, ಜನರಿಗೆಲ್ಲ ಸೂರು ಎಂಬ ಧ್ಯೇಯವಾಕ್ಯವನ್ನು ಅಕ್ಷರಶಃ ಸಾಕಾರಗೊಳಿಸಲು ಹೆಚ್ಚಿನ ಬಹುಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ, ಮಾಜಿ ಶಾಸಕ ಸುಧಾಕರ್‍ಲಾಲ್, ವಿಧಾನಪರಿಷತ್ ಸದಸ್ಯರಾದ ಚಿದಾನಂದ ಎಂ.ಗೌಡ, ತಿಪ್ಪೇಸ್ವಾಮಿ, ಮುಖಂಡರಾದ ಎಲ್.ಸಿ.ನಾಗರಾಜು, ಅನಿಲ್‍ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ, ಜೆಡಿಎಸ್‍ನ ಆರ್.ಸಿ.ಆಂಜಿನಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷರಾದ ಬಸವರಾಜು, ಬಿಜೆಪಿ ಅಧ್ಯಕ್ಷ ನಾಗೇಂದ್ರ, ಹಾಗೂ ಸಹಸ್ರಾರು ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

RELATED ARTICLES

Latest News