Monday, May 4, 2026
Homeರಾಜಕೀಯಅಲ್ಪಸಂಖ್ಯಾತರನ್ನು ಕಡೆಗಣಿಸಿದರೆ ಕಾಂಗ್ರೆಸ್‌‍ಗೆ ಭವಿಷ್ಯವಿಲ್ಲ ಎಂಬುದು ಉಪಚುನಾವಣೆಯಲ್ಲಿ ಸಾಬೀತು

ಅಲ್ಪಸಂಖ್ಯಾತರನ್ನು ಕಡೆಗಣಿಸಿದರೆ ಕಾಂಗ್ರೆಸ್‌‍ಗೆ ಭವಿಷ್ಯವಿಲ್ಲ ಎಂಬುದು ಉಪಚುನಾವಣೆಯಲ್ಲಿ ಸಾಬೀತು

by-elections proved that Congress has no future if it ignores minorities.

ಬೆಂಗಳೂರು, ಮೇ 4- ಕಾಂಗ್ರೆಸ್‌‍ ಪಕ್ಷ ಅಲ್ಪಸಂಖ್ಯಾತರನ್ನು ಕಡೆಗಣಿಸಿದರೆ, ರಾಜಕೀಯ ಭವಿಷ್ಯ ಅತಂತ್ರಗೊಳ್ಳಲಿದೆ ಎಂದು ಮತ್ತೊಮೆ ದಾವಣಗೆರೆಯ ಫಲಿತಾಂಶ ಸಾಬೀತು ಪಡಿಸಿದೆ. ಅಲ್ಪಸಂಖ್ಯಾತರು ಆರಂಭದಿಂದಲೂ ಕಾಂಗ್ರೆಸ್‌‍ನ ಮತ ಬ್ಯಾಂಕ್‌ಗಳಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಪ್ರಬುದ್ಧ ಮಾನಕ್ಕೆ ಬಂದ ಎಐಎಂಐಎಂ ಮತ್ತು ಎಸ್‌‍ಡಿಪಿಐ ಪಕ್ಷಗಳು ಕಾಂಗ್ರೆಸ್‌‍ನ ಮತ ಬುಟ್ಟಿಗೆ ಕೈ ಇಟ್ಟಿವೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶ್ಯಾಮನೂರು ಶಿವಶಂಕರಪ್ಪ ಅವರ ನಿಧನದ ಬಳಿಕ ನಡೆಯಲಿದ್ದ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಬೇಕು ಎಂಬ ಬೇಡಿಕೆ ಇತ್ತು. ಆದರೆ ಹಾಲಿ ಶಾಸಕರು ಮೃತಪಟ್ಟಿದ್ದ ವೇಳೆ ಅವರ ಕುಟುಂಬಕ್ಕೆ ಟಿಕೆಟ್‌ ನೀಡುವುದು ಪಕ್ಷದ ಸಂಪ್ರದಾಯವೆಂಬ ಕಾರಣ ಹೇಳಿ, ಶ್ಯಾಮನೂರು ಶಿವಶಂಕರಪ್ಪ ಅವರ ಕುಟುಂಬದ 3ನೇ ತಲೆಮಾರಿಗೆ ಬಿ ಫಾರಂ ನೀಡಲಾಗಿತ್ತು.

ಸಮರ್ಥ್‌ ಶ್ಯಾಮನೂರು ಮಲ್ಲಿಕಾರ್ಜುನ್‌, ಕಾಂಗ್ರೆಸ್‌‍ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಟಿಕೆಟ್‌ ಸಿಗದ ಕಾರಣಕ್ಕಾಗಿ ಅಲ್ಪ ಸಂಖ್ಯಾತ ಸಮುದಾಯ ಅಸಮಾಧಾನಗೊಂಡಿತ್ತು. ವರಿಷ್ಠ ನಾಯಕರು ನಡೆಸಿದ ಸಂಧಾನ ಸಭೆಗಳ ಭಾಗವಾಗಿ ಕಾಂಗ್ರಸ್‌‍ನ ಬಂಡಾಯ ಅಭ್ಯರ್ಥಿ ಸಾದಿಕ್‌ ಪೈಲ್ವಾನ್‌ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಆದರೆ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿಧಾನಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ಪ್ರಚಾರದಿಂದ ದೂರ ಉಳಿದು ತಮ ಮುನಿಸು ಪ್ರದರ್ಶಿಸಿದರು.

ಚುನಾವಣದ ಫಲಿತಾಂಶದ ಮೇಲೆ ಇದು ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗಿತ್ತು. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್‌‍ಗೆ ಅಲ್ಪಸಂಖ್ಯಾತ ವಿರೋಧಿ ಎಂಬ ಪಟ್ಟ ತಂದುಕೊಟ್ಟಿತ್ತು. ಅಬ್ದುಲ್‌ ಜಬ್ಬಾರ್‌ ಸೇರಿದಂತೆ ಸ್ಥಳೀಯವಾದ 7 ನಾಯಕರನ್ನು ಕಾಂಗ್ರೆಸ್‌‍ನಿಂದ ಅಮಾನತುಗೊಳಿಸಲಾಗಿದೆ.

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಬ್ದುಲ್‌ ನಜೀರ್‌ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಬಹುಶಃ ಕಾಂಗ್ರೆಸ್‌‍ ಪಕ್ಷಕ್ಕೆ ಸೋಲಾಗುವ ನಿರೀಕ್ಷೆಯಿಂದಾಗಿ ಈ ರೀತಿ ಕ್ರಮ ಕೈಗೊಳ್ಳುತ್ತಿರಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅದಕ್ಕೆ ತಕ್ಕ ಹಾಗೆ ಇಂದು ಮತ ಎಣಿಕೆಯ ವೇಳೆ ಆರಂಭದ 7 ಸುತ್ತುಗಳಲ್ಲಿ ಬಿಜೆಪಿಯ ಶ್ರೀನಿವಾಸ ಟಿ.ದಾಸಕರಿಯಪ್ಪ ಮುನ್ನಡೆ ಸಾಧಿಸಿದರು. ಬಿಜೆಪಿ ಪರಿಶಿಷ್ಟ ಪಂಗಡದ ನಾಯಕರನ್ನು ಸಾಮಾನ್ಯ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಮೂಲಕ ಹೊಸ ಪ್ರಯೋಗಮಾಡಿತ್ತು. 8ನೇ ಸುತ್ತಿನ ಬಳಿಕ ಸಮರ್ಥ್‌ ಮಲ್ಲಿಕಾರ್ಜುನ್‌ ಮುನ್ನಡೆ ಸಾಧಿಸಿದರು.

ಅಲ್ಪಸಂಖ್ಯಾತರ ಮತಗಳಿದ್ದ ಬೂತ್‌ಗಳಲ್ಲಿ ಎಣಿಕೆ ಮಾಡಿದ ಬಳಿಕ ಸಮರ್ಥ್‌ಗೆ ಲೀಡಿಂಗ್‌ ಹೆಚ್ಚಾಯಿತು ಎಂದು ಹೇಳಲಾಗಿದೆ. ಈ ನಡುವೆ ಎಸ್‌‍ಡಿಪಿಐನ ಅಫ್ಸರ್‌ ಕೊಡ್ಲುಪೇಟೆ ಸುಮಾರು 15 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದರು. ಕರಾವಳಿಯಿಂದ ಬಂದು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಫ್ಸರ್‌ ಕೊಡ್ಲುಪೇಟೆ ಸ್ಪರ್ಧೆ ಮಾಡಿದ್ದರು. ಒಂದು ವೇಳೆ ಎಸ್‌‍ಡಿಪಿಐನಿಂದ ಸ್ಥಳೀಯ ನಾಯಕರಿಗೆ ಟಿಕೆಟ್‌ ನೀಡಿದ್ದೇ ಆಗಿದ್ದರೆ ಬಹುಶಃ ಕಾಂಗ್ರೆಸ್‌‍ ಗೆಲುವು ಬಹಳಷ್ಟು ಕಷ್ಟವಾಗುತ್ತಿತ್ತು ಎಂದು ಹೇಳಲಾಗಿದೆ.

ಕಾಂಗ್ರೆಸ್‌‍ ಪಕ್ಷ ಅಲ್ಪಸಂಖ್ಯಾತರನ್ನು ಕಾಯ್ದುಕೊಳ್ಳದೇ ಇದ್ದರೆ ಚುನಾವಣೆಗಳಲ್ಲಿ ಸಂಕಷ್ಟ ಎದುರಿಸಬಹುದು ಎಂಬುದಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರ ಉತ್ತಮ ಉದಾಹರಣೆಯಾಗಿದೆ.
ಶ್ಯಾಮನೂರು ಕುಟುಂಬದಲ್ಲಿ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌ ಸಚಿವರಾಗಿದ್ದರೆ, ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್‌ ಸಂಸದೆಯಾಗಿದ್ದಾರೆ. ಮೂರನೇ ತಲೆ ಮಾರು ಸಮರ್ಥ್‌ಗೆ ಟಿಕೆಟ್‌ ನೀಡುವ ಬದಲಾಗಿ ಬೇರೆಯವರಿಗೆ ಅವಕಾಶ ಕಲ್ಪಿಸಬಹುದಿತ್ತು ಎಂಬ ಚರ್ಚೆಗಳು ನಡೆಯುತ್ತಿವೆ.

RELATED ARTICLES

Latest News