Thursday, April 16, 2026
Homeರಾಜ್ಯ2028ರಲ್ಲೂ ಸಿದ್ದರಾಮಯ್ಯನವರೇ ಸಿಎಂ ಎಂದ ಜಮೀರ್‌ ವಿರುದ್ಧ ಕಾಂಗ್ರೆಸ್‌‍ನಲ್ಲಿ ಅಸಹನೆ

2028ರಲ್ಲೂ ಸಿದ್ದರಾಮಯ್ಯನವರೇ ಸಿಎಂ ಎಂದ ಜಮೀರ್‌ ವಿರುದ್ಧ ಕಾಂಗ್ರೆಸ್‌‍ನಲ್ಲಿ ಅಸಹನೆ

Congress

ಬೆಂಗಳೂರು, ಏ.7- ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಚುನಾವಣಾ ಬಳಿಕವೂ 3ನೇ ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿರುವ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ವಿರುದ್ಧ ಕಾಂಗ್ರೆಸ್‌‍ನಲ್ಲಿ ಅಸಹನೆ ಮಾತುಗಳು ಕೇಳಿ ಬರಲಾರಂಭಿಸಿವೆ.

ಸಚಿವ ಜಮೀರ್‌ ಅವರು ತಮಗೆ ವಹಿಸಿದ ಜವಾಬ್ದಾರಿ ಹೊರತುಪಡಿಸಿ ಉಳಿದೆಲ್ಲಾ ವಿಚಾರಗಳಲ್ಲೂ ಮೂಗು ತೂರಿಸುತ್ತಿದ್ದಾರೆ. ಪದೇಪದೇ ನಾಯಕತ್ವದ ವಿವಾದವನ್ನು ಕೆಣಕುವ ಮೂಲಕ ಹೈಕಮಾಂಡ್‌ ನಾಯಕರಿಗೆ ಸಡ್ಡು ಹೊಡೆಯುತ್ತಿದ್ದಾರೆ. ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಉಪಮುಖ್ಯಮಂತ್ರಿಯವರ ಆಪ್ತ ಬಣ ದೆಹಲಿ ನಾಯಕರ ಮೇಲೆ ಒತ್ತಡ ಹೇರಲು ಮುಂದಾಗಿದೆ.

ವಿಧಾನಸಭೆಯ ಉಪಚುನಾವಣೆ ಮುಗಿದ ಬಳಿಕ ಡಿ.ಕೆ.ಶಿವಕುಮಾರ್‌ ಅವರನ್ನು ಬೆಂಬಲಿಸುವ ಶಾಸಕರ ನಿಯೋಗ ದೆಹಲಿಗೆ ತೆರಳಲಿದ್ದು, ಡಿ.ಕೆ.ಶಿವಕುಮಾರ್‌ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಪ್ರತಿಪಾದಿಸಲಿದೆ. ಒಂದು ವೇಳೆ ನಾಯಕತ್ವ ಬದಲಾವಣೆಯಾಗದೇ ಇದ್ದರೆ ಸಂಪುಟ ಪುನರ್‌ರಚನೆಯಲ್ಲಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರನ್ನು ಕೈ ಬಿಡಬೇಕೆಂಬ ಪ್ರಮುಖ ಬೇಡಿಕೆಯನ್ನು ಮಂಡಿಸಲಿದೆ.

ಜಮೀರ್‌ ಅಹಮದ್‌ ಖಾನ್‌ ಅವರು ಪದೇಪದೇ ಸಿದ್ದರಾಮಯ್ಯ ಅವರ ಪರವಾಗಿ ವಕಾಲತ್ತು ವಹಿಸುತ್ತಿರುವುದು ಕಾಂಗ್ರೆಸ್‌‍ನ ಒಂದು ಬಣಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಈ ಮೊದಲು ತುಮಕೂರಿನ ಕೆ.ಎನ್‌.ರಾಜಣ್ಣ ಇದೇ ರೀತಿ ಪದೇಪದೇ ಹೇಳಿಕೆ ನೀಡುವ ಮೂಲಕ ಗುಂಪುಗಾರಿಕೆಗೆ ಪ್ರಯತ್ನಿಸಿದರು. ಸೂಕ್ತ ಸಮಯ ನೋಡಿ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸುವಲ್ಲಿ ಒಂದು ಬಣ ಯಶಸ್ವಿಯಾಗಿತ್ತು.

ಜಮೀರ್‌ ಅಹಮದ್‌ ಖಾನ್‌ ಜನತಾದಳದಿಂದ ಕಾಂಗ್ರೆಸ್‌‍ಗೆ ವಲಸೆ ಬಂದ ನಾಯಕರಾಗಿದ್ದು, ಕಾಂಗ್ರೆಸ್‌‍ನ ಮೂಲ ಮುಸ್ಲಿಂ ನಾಯಕರಿಗಿಂತಲೂ ಹೆಚ್ಚಿನ ಅಧಿಕಾರ ಮತ್ತು ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಚುನಾವಣಾ ವಿಚಾರಗಳು ಬಂದಾಗ ತಾವು ಇಲ್ಲದೇ ಇದ್ದರೆ ಕಾಂಗ್ರೆಸ್‌‍ಗೆ ಅಲ್ಪಸಂಖ್ಯಾತರ ಬೆಂಬಲ ದೊರೆಯುವುದಿಲ್ಲ ಎಂಬ ರೀತಿಯಲ್ಲಿ ವರ್ತಿಸಿರುವುದು ಪಕ್ಷದ ಮೂಲ ನಿವಾಸಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಈ ಹಿನ್ನೆಲೆಯಲ್ಲಿ ಜಮೀರ್‌ ಅಹಮದ್‌ ಖಾನ್‌ ಅವರನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಲು ಕೆಲವರು ದೆಹಲಿಯತ್ತ ಮುಖ ಮಾಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಗೊಂದಲಕಾರಿ ಹೇಳಿಕೆಗಳ ಮೂಲಕ ಜಮೀರ್‌ ಅಹಮದ್‌ ಖಾನ್‌ ಪಕ್ಷಕ್ಕೆ ಹಾನಿ ಮಾಡಿದ್ದಾರೆ ಎಂದು ಪ್ರತಿಪಾದಿಸಲು ಪ್ರಯತ್ನಿಸಲಾಗುತ್ತಿದೆ.

ತಮ ವಿರುದ್ಧ ರಾಜಕಿಯ ಷಡ್ಯಂತ್ರಗಳು ನಡೆಯುತ್ತಿವೆ ಎಂಬ ಅರಿವಿದ್ದರೂ, ಜಮೀರ್‌ ಅಹಮದ್‌ ಖಾನ್‌, ಸಿದ್ದರಾಮಯ್ಯಅವರ ಪರವಾಗಿ ವಕಾಲತ್ತು ವಹಿಸುವುದನ್ನು ನಿಲ್ಲಿಸಿಲ್ಲ.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಗೆದ್ದರೆ ಸಿದ್ದರಾಮಯ್ಯ ಅವರು ಮತ್ತೆ ಮುಂದಿನ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಜಮೀರ್‌ ಅಹಮದ್‌ ಖಾನ್‌ ಗೊಂದಲ ಮೂಡಿಸಿದರು. ಅನಂತರ ಸರ್ಕಾರ ತನ್ನ ಪಾಡಿಗೆ ತಾನು ನಡೆಯುತ್ತಿದ್ದಾಗ ಮುಂದಿನ 5 ವರ್ಷಗಳ ವರೆಗೂ ಸಿದ್ದರಾಮಯ್ಯ ಅವರೇ ಅಧಿಕಾರದಲ್ಲಿರುತ್ತಾರೆ. ಕಾಂಗ್ರೆಸ್‌‍ ಪಕ್ಷಕ್ಕೆ ಸಿದ್ದರಾಮಯ್ಯ ಇಲ್ಲದೇ ಹೋದರೆ ನೆಲೆ ಇಲ್ಲ ಎಂಬ ಅರ್ಥದಲ್ಲಿ ಹಲವಾರು ಬಾರಿ ಮಾತನಾಡಿ, ಮುಜುಗರ ಉಂಟುಮಾಡಿದ್ದರು.

ಕಾಂಗ್ರೆಸ್‌‍ ಹೈಕಮಾಂಡ್‌ ನಾಯಕರೇ ಜಮೀರ್‌ ಅವರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದರು. ಒಂದಷ್ಟು ದಿನ ತಣ್ಣಗಿದ್ದ ಜಮೀರ್‌ ಮತ್ತೆ ಚುನಾವಣಾ ಕಣದಲ್ಲಿ ನಾಯಕತ್ವದ ವಿವಾದವನ್ನು ಕೆಣಕಿದ್ದಾರೆ. 2028ರ ವರೆಗೆ ಸಿದ್ದರಾಮಯ್ಯ ಅವರ ನಾಯಕತ್ವ ಅಬಾಧಿತ ಎಂಬ ಹೇಳಿಕೆಗಳೇ ಸಾಕಷ್ಟು ಗೊಂದಲ ಮೂಡಿಸುತ್ತಿವೆ. ಅಂತಹದರಲ್ಲಿ 2028ರ ನಂತರವೂ ಮತ್ತೆ ಮೂರನೇ ಬಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಜಮೀರ್‌ ಅಹಮದ್‌ ಖಾನ್‌ ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

RELATED ARTICLES

Latest News