ಬೆಂಗಳೂರು,ಏ.18- ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲು ಆಗಿದ್ದು, ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಕಾರಣ ಎಂದು ಕರ್ನಾಟಕ ಬಿಜೆಪಿ ಘಟಕ ಗಂಭೀರ ಆರೋಪ ಮಾಡಿದೆ. ಕಾಂಗ್ರೆಸ್ಗೆ ಮಹಿಳಾ ಸಬಲೀಕರಣದ ಮೇಲೆ ನಂಬಿಕೆ ಇಲ್ಲ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಈ ಕುರಿತು ತಮ ಅಧಿಕೃತ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಿಳೆಯರಿಗೆ ಅವರ ನ್ಯಾಯಯುತ ಹಕ್ಕು ಒದಗಿಸಬೇಕು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸದುದ್ದೇಶಕ್ಕೆ ಕಾಂಗ್ರೆಸ್ ಕಲ್ಲು ಹಾಕಿದೆ ಎಂದು ಅರ್. ಅಶೋಕ್ ಗುಡುಗಿದ್ದಾರೆ.
ಮಹಿಳೆಯರಿಗೆ ತಮ ಹಕ್ಕುಗಳು ಸಿಗಬಾರದು ಎಂಬುದು ಕಾಂಗ್ರೆಸ್ನ ಅಜೆಂಡಾ. ಶೇ.33 ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ದಶಕಗಳಿಂದ ಅಡ್ಡಿಪಡಿಸುತ್ತಿದ್ದ ಕಾಂಗ್ರೆಸ್ನ ನಿಜವಾದ ಮುಖ ಇಂದು ಮತ್ತೊಮೆ ಬಯಲಾಗಿದೆ ಎಂದು ಅವರು ತಮ ಎಕ್್ಸಪೋಸ್ಟ್ನಲ್ಲಿ ಕಿಡಿಕಾರಿದ್ದಾರೆ.
ಬಿವೈ ವಿಜಯೇಂದ್ರ ಕಿಡಿ :
ಇನ್ನು ನಾರಿಶಕ್ತಿ ವಂದನ್ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರೂ ಕೂಡ ಈ ಐತಿಹಾಸಿಕ ಮಸೂದೆಗೆ ಸೋಲಾಗಲು ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಹಿಳಾ ಮೀಸಲಾತಿ ಮಸೂದೆ ಸೋಲಿಗೆ ಪ್ರತಿಕ್ರಿಯೆ ನೀಡಿರುವುದನ್ನು ಇಲ್ಲಿ ಸರಿಸಬಹುದು.
ನಾರಿ ಶಕ್ತಿ ವಂದನಾ ಕಾಯ್ದೆಗೆ ಇಂದು ಸೋಲುಂಟಾಗಿರುವುದು ಭಾರತದ ಪ್ರಜಾ ಪ್ರಭುತ್ವದ ವ್ಯವಸ್ಥೆಯ ಕರಾಳ ದಿನವಾಗಿದೆ. ಸಂವಿಧಾನದ ಆಶಯ, ಪ್ರಜಾ ಪ್ರಭುತ್ವದ ನೈಜ ಉದ್ದೇಶಗಳನ್ನು ಸ್ವಾತಂತ್ರ್ಯಾನಂತರದಿಂದಲೂ ಮೆಟ್ಟಿ ನಿಲ್ಲುವುದು, ಸರ್ವಾಧಿಕಾರ ಮೆರೆಯುವುದು, ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವುದು ಕಾಂಗ್ರೆಸ್ನ ಸಂಸ್ಕೃತಿಯಾಗಿದೆ.
ಲಕ್ಷಾಂತರ ಜನರ ತ್ಯಾಗ-ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು, ಅದನ್ನು ಸ್ವೇಚ್ಛಾಚಾರದಿಂದ ಕಾಂಗ್ರೆಸ್ ಬಳಸಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಆರೋಪಿಸಿದ್ದಾರೆ. ಸದ್ಯ ದೇಶದ ರಾಜಕೀಯ ಕ್ಷೇತ್ರದಲ್ಲಿ ಅಸ್ತಿತ್ವಕ್ಕಾಗಿ ತಿಣುಕಾಡುತ್ತಿರುವ ಕಾಂಗ್ರೆಸ್ ತನ್ನದೇ ಮನಸ್ಥಿತಿಯ ಇತರ ಪಕ್ಷಗಳನ್ನು ಕಟ್ಟಿಕೊಂಡು ಇಂಡಿ ಕೂಟದ ಹೆಸರಿನಲ್ಲಿ ಸ್ತ್ರೀ ಕುಲದ ಹಕ್ಕನ್ನು ಇಂದು ಲೋಕಸಭೆಯಲ್ಲಿ ಹಿಂಡಿದೆ. ದುಶ್ಯಾಸನ, ರಾವಣರ ಸಂಸ್ಕೃತಿ ನೆನಪಿಸುವ ರೀತಿಯಲ್ಲಿ ಇಂದು ಸಂಸತ್ನಲ್ಲಿ ನಡೆದುಕೊಂಡು ಡಾ. ಅಂಬೇಡ್ಕರ್ ಅವರ ಮಹಾದಾಶಯ, ಅಣ್ಣ ಬಸವಣ್ಣ ಅವರು ಪ್ರತಿಪಾದಿಸಿದ ಲಿಂಗ ಸಮಾನತೆಯನ್ನು ಹತ್ತಿಕ್ಕಲು ಯತ್ನಿಸಿವೆ ಎಂದು ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರೆದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸ್ವಾತಂತ್ರ್ಯದ ನೈಜತೆ ಹಾಗೂ ಸಂವಿಧಾನದ ಶಕ್ತಿಯನ್ನು ನಾರಿ ಕುಲಕ್ಕೆ ಸಮರ್ಪಿಸಬೇಕೆಂಬ ಮಹತ್ವಾಕಾಂಕ್ಷೆಯ ಕಾಯ್ದೆಗೆ ಹಿನ್ನೆಡೆಯುಂಟಾಗಿರುವುದು ಕೇವಲ ತಾತ್ಕಾಲಿಕವಷ್ಟೇ. ಇಡೀ ದೇಶದ ಮಹಿಳಾಶಕ್ತಿ ಇಂಡಿ ಒಕ್ಕೂಟಕ್ಕೆ ಭವಿಷ್ಯತ್ತಿನಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿವೈವಿ ಎಚ್ಚರಿಸಿದ್ದಾರೆ.
ಅತೀ ಶೀಘ್ರದಲ್ಲಿ ಲಿಂಗ ಸಮಾನತೆ, ಪ್ರಜಾ ಪ್ರಭುತ್ವದ ಸುಂದರತೆ ಅರಳಲಿದೆ, ಸಂವಿಧಾನದ ಶಕ್ತಿ ಮೆರೆಯಲಿದೆ, ಮಹಿಳಾ ಮೀಸಲಾತಿ ವಿಜೃಂಬಿಸಲಿದೆ. ಇಂದಿನ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ನಡೆ ಕೇವಲ ಭಾರತೀಯ ನಾರಿಕುಲಕ್ಕಷ್ಟೇ ಅಲ್ಲ, ಇಡೀ ವಿಶ್ವ ಮಹಿಳಾ ಕುಲವನ್ನು ಅಪಮಾನಿಸಿದ ನಡೆಯಾಗಿದೆ. ಇದನ್ನು ಅತ್ಯುಘ್ರವಾಗಿ ಲಿಂಗ ಸಮಾನತೆ ಒಪ್ಪುವ ಪ್ರತಿಯೊಬ್ಬರೂ ಖಂಡಿಸಬೇಕಾಗಿದೆ. ನೈಜ ಪ್ರಜಾ ಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ಸಂಕಲ್ಪ ತೊಡಬೇಕಾಗಿದೆ ಎಂದು ಬಿಎಸ್ವೈ ಪುತ್ರ ಕರೆ ನೀಡಿದ್ದಾರೆ.
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಬಿಜೆಪಿ ಘಟಕ, ತನ್ನ ಅಧಿಕೃತ ಎಕ್್ಸಪೋಸ್ಟ್ನಲ್ಲಿ ಕಾಂಗ್ರೆಸ್ ವಿರುದ್ಧ ಕೆಂಡಾಮಂಡಲವಾಗಿದೆ. ಮಹಿಳಾ ಶಕ್ತಿಯು ಮುಂದೆ ಸಾಗಲು ಕೇವಲ ಒಂದು ಹೆಜ್ಜೆ ದೂರದಲ್ಲಿತ್ತು. ಅದು ಒಂದು ಐತಿಹಾಸಿಕ ಅವಕಾಶವೂ ಆಗಿತ್ತು. ಆದರೆ ಕಾಂಗ್ರೆಸ್ ಮತ್ತು ಅದರ ಇಂಡಿ ಒಕ್ಕೂಟದ ವಿರೋಧ ಪಕ್ಷಗಳು, ಆ ಅವಕಾಶವನ್ನು ಕಸಿದುಕೊಂಡಿವೆ. ಮುಂಬರುವ ದಿನಗಳಲ್ಲಿ ಅಧಿಕಾರವು ಖಂಡಿತವಾಗಿಯೂ ಮಹಿಳೆಯರನ್ನು ತಲುಪುತ್ತದೆ ಎಂದು ಹೇಳಿದೆ.
