ಬೆಂಗಳೂರು,ಏ.18- ಕರ್ನಾಟಕದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಗಳ ಪೈಕಿ ವಿನಯ್ ಕುಲಕರ್ಣಿ 2ನೇಯವರು. ಇನ್ನು ಅಧಿಕಾರದಲ್ಲಿದ್ದಾಗಲೇ ಜೀವಾವಧಿ ಶಿಕ್ಷೆಯಾಗಿದ್ದು ಇದೇ ಮೊದಲು.ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸಂಸದರಾಗಿದ್ದಾಗ ಬಂಧನವಾಗಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ಅವರ ಅಧಿಕಾರಾವಧಿ ಮುಗಿದ ಬಳಿಕ (ಬಂಧನವಾಗಿ 1 ವರ್ಷದ ನಂತರ) ಜನಪ್ರತಿನಿಧಿಗಳ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಸದ್ಯ ಅವರು ಜೈಲಿನಲ್ಲಿದ್ದಾರೆ.
ಇನ್ನು ವಿನಯ್ ಕುಲಕರ್ಣಿಯವರು ಧಾರವಾಡ ಜಿಲ್ಲಾ ಸಚಿವರಿದ್ದಾಗ (2016ರ ಜೂನ್) ಯೋಗೀಶ್ಗೌಡ ಕೊಲೆ ನಡೆದಿತ್ತು. ಆ ಕೊಲೆಗೆ ಸಂಬಂಧಿಸಿದಂತೆ 2020 ರಲ್ಲಿ ವಿನಯ್ ಕುಲಕರ್ಣಿಯವರ ಬಂಧನವೂ ಆಗಿತ್ತು. ಜಾಮೀನಿನ ಮೇಲೆ ಹೊರಗಿದ್ದ ವಿನಯ್ 2023 ರಲ್ಲಿ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಸದ್ಯ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಈ ಮೂಲಕ ಅಧಿಕಾರದಲ್ಲಿದ್ದಾಗಲೇ ಜೀವಾವಧಿ ಶಿಕ್ಷೆಗೆ ಗುರಿಯಾದ ಮೊದಲ ಜನಪ್ರತಿನಿಧಿ ವಿನಯ್ ಆಗಿದ್ದಾರೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ ರಾಜ್ಯದ ಜನಪ್ರತಿನಿಧಿಗಳು ಯಾರು ? :
ಸತೀಶ್ ಸೈಲ್ (ಕಾರವಾರದ ಶಾಸಕ): ಬೇಲೆಕೇರಿ ಅಕ್ರಮ ಅದಿರು ಸಾಗಾಣಿಕೆ ಪ್ರಕರಣದಲ್ಲಿ ಇತ್ತೀಚೆಗೆ (ಅಕ್ಟೋಬರ್ 2024) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇವರು ದೋಷಿ ಎಂದು ತೀರ್ಪು ನೀಡಿದ್ದು, 7 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಕೋಟ್ಯಂತರ ರೂಪಾಯಿ ದಂಡ ವಿಧಿಸಿತ್ತು. ಸದ್ಯ ಉನ್ನತ ನ್ಯಾಯಾಲಯಕ್ಕೆ (ಹೈಕೋರ್ಟ್) ಹೋಗಿ ತೀರ್ಪಿಗೆ ತಡೆ ತಂದು ಜಾಮೀನಿನಲ್ಲಿದ್ದಾರೆ. ಶಾಸಕರಾಗಿಯೂ ಮುಂದುವರೆದಿದ್ದಾರೆ.
ವೈ. ಸಂಪಂಗಿ (ಕೆ.ಜಿ.ಎಫ್ ಮಾಜಿ ಶಾಸಕ): ಲಂಚ ಪ್ರಕರಣದಲ್ಲಿ ನ್ಯಾಯಾಲಯವು 3.5 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ರಾಜ್ಯದ ಮೊದಲ ಶಾಸಕ ಇವರಾಗಿದ್ದರು. ಆ ನಂತರ ಉನ್ನತ ನ್ಯಾಯಾಲಯದ ಮೊರೆ ಹೋಗಿ ಬಿಡುಗಡೆಯಾಗಿದ್ದರು.
ಗಂಭೀರ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ನಾಯಕರು :
ಗಾಲಿ ಜನಾರ್ದನ ರೆಡ್ಡಿ (ಶಾಸಕ ಹಾಗೂ ಮಾಜಿ ಸಚಿವ): ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶಕ್ಕೆ ತೆಲಂಗಾಣ ಹೈಕೋರ್ಟ್ ತಡೆ ನೀಡಿದೆ.
ಜತೆಗೆ ಬೇಲೆೆಕೇರಿ ಬಂದರು ಅಕ್ರಮ ಅದಿರು ರಫ್ತು ಪ್ರಕರಣ, ಅಕ್ರಮ ಆಸ್ತಿ ಸಂಪಾದನೆ ಮತ್ತು ಮನಿ ಲಾಂಡರಿಂಗ್ ಸೇರಿ ಹಲವು ಪ್ರಕರಣಗಳಿದ್ದು, ವಿಚಾರಣೆ ನಡೆಯುತ್ತಿವೆ. 3 ವರ್ಷ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಡಿ.ಕೆ.ಶಿವಕುಮಾರ್ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಯಿಂದ ನ್ಯಾಯಾಂಗ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿದ್ದು, ಬಳಿಕ ಜಾಮೀನು ಪಡೆದರು.
