HomeರಾಜಕೀಯPOLITICAL BREAKING : ಖಾತೆ ಹಂಚಿಕೆ ಕುರಿತು ಡಿಕೆ ಸರ್ಕಾರದಲ್ಲಿ ಭುಗಿಲೆದ್ದ ಅಸಮಾಧಾನ

POLITICAL BREAKING : ಖಾತೆ ಹಂಚಿಕೆ ಕುರಿತು ಡಿಕೆ ಸರ್ಕಾರದಲ್ಲಿ ಭುಗಿಲೆದ್ದ ಅಸಮಾಧಾನ

Discontent erupts in DK government over portfolio allocation

ಬೆಂಗಳೂರು, ಜೂ. 5- ನೂತನ ಸರ್ಕಾರದಲ್ಲಿ ಖಾತೆ ಕ್ಯಾತೆ ಹಾಗೂ ಸಂಪುಟದಲ್ಲಿನ ಅವಕಾಶ ವಂಚಿತರ ಅಸಮಾಧಾನ, ಆಕ್ರೋಶಗಳೇ ಹೆಚ್ಚು ಚರ್ಚೆಯಾಗುತ್ತಿದ್ದು, ಶೀಘ್ರದಲ್ಲೇ ಖಾತೆಗಳ ಮರು ಹಂಚಿಕೆಯಾಗುವ ಸಾಧ್ಯತೆ ಇದೆ.

ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ ಬೆನ್ನಲ್ಲೇ ಹಿರಿಯ ಸಚಿವರಾದ ಕೆ.ಎಚ್‌.ಮುನಿಯಪ್ಪ, ಕೆ.ಜೆ.ಜಾರ್ಜ್‌ ಹಾಗೂ ಸಿದ್ದರಾಮಯ್ಯ ಅವರ ಆಪ್ತ ಭೈರತಿಸುರೇಶ್‌ ಖಾತೆ ಹಂಚಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ.

ಜಲ ಸಂಪನೂಲ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ತಮಗೆ ಬೇರೆ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಸಾರಿಗೆ ಸಚಿವ ಭೈರತಿ ಸುರೇಶ್‌ ವಸತಿ ಖಾತೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಒತ್ತಡ ಹೇರುತ್ತಿದ್ದಾರೆ. ಇಂಧನ ಹಾಗೂ ಪ್ರವಾಸೋದ್ಯಮ ಸಚಿವರಾಗಿರುವ ಕೆ.ಜೆ.ಜಾರ್ಜ್‌ ಅಧಿಕಾರಿಗಳ ನೇಮಕದ ವಿಚಾರವಾಗಿ ಅಸಹನೆ ಹೊಂದಿದ್ದು, ಬದಲಾವಣೆ ಮಾಡದೇ ಇದ್ದರೆ, ರಾಜೀನಾಮೆ ನೀಡುವುದಾಗಿ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಕೇಂದ್ರ ಬೆಂಗಳೂರು ಪಾಲಿಕೆ ಆಯುಕ್ತರಾಗಿದ್ದ ರಾಜೇಂದ್ರ ಚೋಳನ್‌ ಅವರನ್ನು ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಿದ್ದಂತೆ ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಮಾಡಿದರು. ಹೆಚ್ಚುವರಿಯಾಗಿ ಮುಖ್ಯಮಂತ್ರಿಯವರ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿಯನ್ನು ವಹಿಸಿದ್ದರು. ತಮಗೆ ಇಂಧನ ಖಾತೆ ದೊರೆಯುತ್ತಿದ್ದಂತೆ ಅದರ ಅಧೀನದಲ್ಲಿರುವ ಕೆಪಿಟಿಸಿಎಲ್‌ಗೆ ಅಧಿಕಾರಿಯನ್ನು ಬದಲಾವಣೆ ಮಾಡಬೇಕೆಂಬುದು ಜಾರ್ಜ್‌ ಅವರ ಬಿಗಿ ಪಟ್ಟಾಗಿದೆ.

ಈ ಮೊದಲಿನ ವ್ಯವಸ್ಥಾಪಕ ನಿರ್ದೇಶಕ ಗೌರವ್‌ ಗುಪ್ತ ಜಾರ್ಜ್‌ ಅವರೊಂದಿಗೆ ಉತ್ತಮ ಸೌಹಾರ್ದತೆ ಹೊಂದಿದ್ದರು ಎನ್ನಲಾಗಿದೆ. ಮೊದಲ ಹಂತದಲ್ಲಿ ಡಿ.ಕೆ.ಶಿವಕುಮಾರ್‌ ಅವರ ನೂತನ ಸಂಪುಟಕ್ಕೆ ಒಂದು ಉಪ ಮುಖ್ಯಮಂತ್ರಿ ಹಾಗೂ 12 ಸಚಿವರ ನೇಮಕವಾಗಿ ಖಾತೆಗಳು ಹಂಚಿಕೆಯಾಗಿವೆ. ಡಿ.ಕೆ.ಶಿವಕುಮಾರ್‌ ಅವರು ತಮ ಬಳಿ ಹಣಕಾಸು, ಗುಪ್ತಚರ ಸೇರಿದಂತೆ ಹಂಚಿಕೆಯಾಗದೇ ಉಳಿದ ಎಲ್ಲಾ ಖಾತೆಗಳನ್ನು ಉಳಿಸಿಕೊಂಡಿದ್ದಾರೆ.

ಉಪ ಮುಖ್ಯಮಂತ್ರಿಯಾಗಿರುವ ಡಾ.ಜಿ.ಪರಮೇಶ್ವರ್‌ ಅವರಿಗೆ ಕಂದಾಯದ ಜೊತೆಗೆ ಕ್ರೀಡಾ ಇಲಾಖೆ ನೀಡಲಾಗಿದೆ. ಕೆ.ಎಚ್‌.ಮುನಿಯಪ್ಪ ಅವರಿಗೆ ಈ ಹಿಂದೆ ನೀಡಲಾಗಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಕೆ.ಜೆ.ಜಾರ್ಜ್‌ ಅವರಿಗೆ ಇಂಧನ, ಪ್ರವಾಸೋದ್ಯಮ ಖಾತೆ ನೀಡಲಾಗಿದೆ.

ಎಂ.ಬಿ.ಪಾಟೀಲ್‌ ಅವರಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಸತೀಶ್‌ ಜಾರಕಿಹೊಳಿಯವರಿಗೆ ಲೋಕೋಪಯೋಗಿ, ಶರಣಪ್ರಕಾಶ್‌ ಪಾಟೀಲ್‌ ಅವರಿಗೆ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ನೀಡಲಾಗಿದೆ. ಈ ಮೂವರು ಸಚಿವರ ಖಾತೆಗಳನ್ನು ಯಥಾರೀತಿ ಮುಂದುವರೆಸಿದ್ದು, ಯಾವುದೇ ಆಕ್ಷೇಪಗಳು ಕಂಡು ಬಂದಿಲ್ಲ.

ಬ್ರ್ಯಾಂಡ್‌ ಬೆಂಗಳೂರು ಕನಸ್ಸನ್ನು ಹೊತ್ತ ಡಿ.ಕೆ.ಶಿವಕುಮಾರ್‌ ಅವರು, ಕೃಷ್ಣಭೈರೇಗೌಡ ಅವರಿಗೆ ಗ್ರೇಟರ್‌ ಬೆಂಗಳೂರು ನಗರಾಭಿವೃದ್ಧಿ ನೀಡಿದ್ದಾರೆ. ಪ್ರಿಯಾಂಕ್‌ ಖರ್ಗೆ ಅವರಿಗೆ ಹಿಂದಿನ ಐಟಿಬಿಟಿ ಜೊತೆಗೆ ಗೃಹ ಇಲಾಖೆ ದೊರಕಿದೆ. ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ವಿದಾಯ ಹೇಳಿದ ಸಚಿವರಾದ ಯು.ಟಿ.ಖಾದರ್‌ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ನೀಡಲಾಗಿದೆ. ಈಶ್ವರ್‌ ಖಂಡ್ರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಪಡೆದಿದ್ದಾರೆ. ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರಿಗೆ ನಗರಾಭಿವೃದ್ಧಿ ನೀಡಲಾಗಿದೆ.

ಸಿದ್ದರಾಮಯ್ಯಅವರ ಆಪ್ತರಾಗಿದ್ದ ಭೈರತಿ ಸುರೇಶ್‌ ಅವರಿಗೆ ಸಾರಿಗೆ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಆದರೆ ಇದನ್ನು ಒಪ್ಪದ ಅವರು ವಸತಿ ಇಲಾಖೆ ಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಆಪ್ತ ಜಮೀರ್‌ ಅಹಮದ್‌ ಖಾನ್‌ ವಸತಿ ಖಾತೆ ನಿರ್ವಹಿಸುತ್ತಿದ್ದರು. ಹೀಗಾಗಿ ಭೈರತಿ ಸುರೇಶ್‌ ಆ ಖಾತೆಯೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಸಾರಿಗೆ ಇಲಾಖೆಯಲ್ಲಿ ವೇತನ ಪರಿಷ್ಕರಣೆ, ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಬಸ್‌‍ ದರ ಹೆಚ್ಚಿಸಬೇಕಾದ ಇಕ್ಕಟ್ಟಿನ ಪರಿಸ್ಥಿತಿ ಇದೆ. ಈ ವಿವಾದಕ್ಕೆ ಸಿಲುಕಲು ಭೈರತಿ ಸುರೇಶ್‌ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.

ಖಾತೆ ಹಂಚಿಕೆ ವಿಚಾರವಾಗಿ ಹೈಕಮಾಂಡ್‌ ನಿರ್ಧಾರ ತೆಗೆದುಕೊಂಡಿದೆ ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನಗಳಾಗುತ್ತಿವೆ. ಆದರೆ ಡಿ.ಕೆ.ಶಿವಕುಮಾರ್‌ ಅವರೇ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಹತ್ವದ ಸಭೆ:
ರಾಹುಲ್‌ ಗಾಂಧಿಯವರನ್ನು ಆಹ್ವಾನಿಸಲು ವಿಮಾನ ನಿಲ್ದಾಣಕ್ಕೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವರಾದ ಕೆ.ಎಚ್‌.ಮುನಿಯಪ್ಪ, ಕೆ.ಜೆ.ಜಾರ್ಜ್‌ ಮತ್ತಿತರರು ವಿಐಪಿ ಲಾಂಜ್‌ನಲ್ಲಿ ಕಾದು ಕುಳಿತ್ತಿದ್ದರು.
ಈ ವೇಳೆ ಖಾತೆಗಳ ಹಂಚಿಕೆ ವಿಚಾರವಾಗಿ ಉಂಟಾಗಿರುವ ಗೊಂದಲಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ರಾಹುಲ್‌ ಗಾಂಧಿ ಆಗಮಿಸಿದ ಬಳಿಕ ದೇವನಹಳ್ಳಿ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಈ ಹಂತದಲ್ಲಿ ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಸಿದ್ದು ಕೆಲ ಕಠಿಣ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.ಈ ಹಿನ್ನೆಲೆಯಲ್ಲಿ ಹಿರಿತನ ಆಧರಿತವಾಗಿ ಖಾತೆ ಹಂಚಿಕೆ ಮಾಡಬೇಕೆಂಬ ಒತ್ತಡಕ್ಕೆ ಮಣಿದು ಕೆಲವರ ಖಾತೆಗಳು ಬದಲಾವಣೆಯಾಗುವ ಸಾಧ್ಯತೆ ಇದೆ.

RELATED ARTICLES

Latest News