Thursday, April 16, 2026
Homeರಾಜಕೀಯಕುತೂಹಲ ಕೆರಳಿಸಿದ ಹೈಕಮಾಂಡ್‌ ಜೊತೆ ಡಿಕೆಶಿ ಚರ್ಚೆ

ಕುತೂಹಲ ಕೆರಳಿಸಿದ ಹೈಕಮಾಂಡ್‌ ಜೊತೆ ಡಿಕೆಶಿ ಚರ್ಚೆ

DK Shivakumar's discussion with the high command aroused curiosity

ಬೆಂಗಳೂರು, ಫೆ.20- ಅಸ್ಸಾಂ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಎಐಸಿಸಿ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಸಚಿವ ಸತೀಶ್‌ ಜಾರಕಿಹೊಳಿ ಕೂಡ ದೆಹಲಿ ಪ್ರವಾಸದಲ್ಲಿರುವುದು ಕುತೂಹಲ ಕೆರಳಿಸಿದೆ.

ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆಯ ಜಿದ್ದಾಜಿದ್ದಿ ನಡೆಯುತ್ತಲೇ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಮಂಡನೆ ನಂತರವೂ ಹುದ್ದೆ ತ್ಯಾಗ ಮಾಡಲು ನಿರಾಕರಿಸಿ ಪಟ್ಟಾಗಿ ಕುಳಿತಿದ್ದಾರೆ. ಒಂದಾದರ ಮೇಲೆ ಒಂದರಂತೆ ಗಡುವು ನೀಡುತ್ತಿರುವ ಡಿ.ಕೆ.ಶಿವಕುಮಾರ್‌ ಶತಾಯಗತಾಯ ತಮಗೆ ಮುಖ್ಯಮಂತ್ರಿ ಹುದ್ದೆ ಸಿಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಹೈಕಮಾಂಡ್‌ ನಾಯಕರ ಮೇಲೆ ಮೇಲಿಂದ ಮೇಲೆ ಒತ್ತಡ ಹೇರುತ್ತಿದ್ದಾರೆ.

ಅಸ್ಸಾಂ ವಿಧಾನಸಭೆ ಚುನಾವಣೆಯ ಉಸ್ತುವಾರಿ ವಹಿಸಿರುವ ಡಿ.ಕೆ. ಶಿವಕುಮಾರ್‌ ಕಳೆದ ಮೂರು ದಿನಗಳಿಂದಲೂ ದೆಹಲಿಯಲ್ಲಿ ಬಿಡು ಬಿಟ್ಟಿದ್ದರು. ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌ ಮತ್ತು ರಣದೀಪ ಸಿಂಗ್‌ ಸುರ್ಜೆವಾಲ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಸೋನಿಯಾ ಗಾಂಧಿಯವರ ಪುತ್ರಿಯೂ ಆಗಿರುವ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರ ಅವರೊಂದಿಗೆ ನಿನ್ನೆ ಅಸ್ಸಾಂ ವಿಧಾನಸಭೆ ಚುನಾವಣೆ ಸಂಬಂಧ ನಡೆದ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಭಾಗವಹಿಸಿದ್ದರು. ಈ ವೇಳೆ ಕರ್ನಾಟಕ ರಾಜ್ಯ ರಾಜಕಾರಣದ ಬಗ್ಗೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಹೈಕಮಾಂಡ್‌ ನಿರಾಸಕ್ತಿಯ ನಡುವೆಯೂ ಡಿ.ಕೆ.ಶಿವಕುಮಾರ್‌ ತಮ ಪಟ್ಟು ಸಡಿಲಿಸಿಲ್ಲ. ನಿರಂತರವಾಗಿ ದೆಹಲಿಗೆ ಭೇಟಿ ನೀಡುತ್ತಲೇ ಇದ್ದಾರೆ, ವರಿಷ್ಠರನ್ನು ಭೇಟಿ ಮಾಡುತ್ತಲೇ ಇದ್ದಾರೆ. ಅಸ್ಸಾಂ ವಿಧಾನಸಭೆ ಚುನಾವಣೆ ಪೂರ್ಣಗೊಳ್ಳುವವರೆಗೂ ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ಹೈಕಮಾಂಡ್‌ ಸಂದೇಶ ರವಾನಿಸಿದೆ. ಇದರ ನಡುವೆಯೂ ಡಿ.ಕೆ.ಶಿವಕುಮಾರ್‌ ಪ್ರಯತ್ನ ಮುಂದುವರಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರ ಕಾರ್ಯ ಚಟುವಟಿಕೆಗೆ ಪ್ರತಿತಂತ್ರವಾಗಿ ಸಿದ್ದರಾಮಯ್ಯ ಬಣ ಒಳಗೊಳಗೆ ಕಾರ್ಯಾಚರಣೆ ನಡೆಸುತ್ತಿದೆ. ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ದೆಹಲಿಗೆ ತೆರಳಿದ್ದು ಸಂಜೆಯ ಮೇಲೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ.

ಧಾರವಾಡದ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಸುಪ್ರೀಂ ಕೋರ್ಟಿನ ಮಾದರಿಯಲ್ಲೇ ಕಟ್ಟಡ ನಿರ್ಮಿಸುವ ತಯಾರಿಗಳು ನಡೆದಿವೆ. ಹೀಗಾಗಿ ಸುಪ್ರೀಂ ಕೋರ್ಟಿನ ಕಟ್ಟಡದ ಮಾದರಿಯನ್ನು ವಿಕ್ಷೀಸಲು ಹೈಕೋರ್ಟ್‌ ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹಿರಿಯರ ಜೊತೆ ದೆಹಲಿಗೆ ಆಗಮಿಸಿರುವುದಾಗಿ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಸದ್ಯಕ್ಕೆ ತಮ ಆದ್ಯತೆ ಸುಪ್ರೀಂಕೋರ್ಟಿನ ಮಾದರಿಯನ್ನು ವೀಕ್ಷಿಸುವುದಾಗಿದೆ. ನಂತರ ಸಂಜೆಯ ಮೇಲೆ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲು ಪ್ರಯತ್ನಿಸುವುದಾಗಿ ಜಾರಕಿಹೊಳಿ ಹೇಳಿದ್ದಾರೆ.ರಾಜಕೀಯದ ಜಿದ್ದಾಜಿದ್ದಿನ ನಡುವೆ ಸುಪ್ರೀಂಕೋರ್ಟಿನ ವೀಕ್ಷಣೆಯ ನೆಪದಲ್ಲಿ ಸಿದ್ದರಾಮಯ್ಯ ಬಣ ಕೂಡ ತನ್ನದೇ ಆದ ಕಾರ್ಯತಂತ್ರ ಅನುಸರಿಸುತ್ತಿರುವುದು ಕಂಡು ಬಂದಿದೆ.

RELATED ARTICLES

Latest News