ಬೆಂಗಳೂರು, ಆ.21- ಬರ ನಿರ್ವಹಣೆಗೆ ಕೇಂದ್ರ ಸರ್ಕಾರ ಹಣ ನೀಡದೆ ಇರುವ ಕಾರಣದಿಂದಲೇ ಬಿಜೆಪಿಯವರು ವಿಧಾನಮಂಡಲದಲ್ಲಿ ಈ ಕುರಿತು ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು. ವಿಧಾನಸೌಧ ಮತ್ತು ವಿಧಾನ ಪರಿಷತ್ ನಡುವಿನ ಗಾಂಧಿ ಪ್ರತಿಮೆ ಎದುರು ಆಡಳಿತಾರೂಢ ಕಾಂಗ್ರೆಸ್ ಸದಸ್ಯರು, ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಹರಿಪ್ರಸಾದ್, ಬರ ನಿರ್ವಹಣೆಗೆ 10,000 ಕೋಟಿ ನೆರವು ನೀಡುವಂತೆ ಮುಖ್ಯಮಂತ್ರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಈವರೆಗೆ ಕೇಂದ್ರದಿಂದ ಯಾವುದೇ ನೆರವು ದೊರೆತಿಲ್ಲ ಎಂದು ಹೇಳಿದರು.
ವಿಧಾನಮಂಡಲದಲ್ಲಿ ಬರದ ಕುರಿತು ಚರ್ಚೆಗೆ ಅವಕಾಶ ಸಿಕ್ಕರೆ, ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು. ಇದರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಕ್ಷಿಸುವ ಉದ್ದೇಶದಿಂದ ಬಿಜೆಪಿ, ಸಚಿವ ನಾಗೇಂದ್ರ ಅವರ ವಿಚಾರವನ್ನು ಮುಂದಿಟ್ಟುಕೊಂಡು ಸದನದಲ್ಲಿ ಗದ್ದಲ ಸೃಷ್ಟಿಸುತ್ತಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರವನ್ನು ಎಂದಿಗೂ ಸಮರ್ಥಿಸಿಕೊಳ್ಳುವುದಿಲ್ಲ. ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅವ್ಯವಹಾರದ ಕುರಿತು ಬಿಜೆಪಿ ನೋಟಿಸ್ ನೀಡಲಿ. ಚರ್ಚೆ ನಡೆಸಿ ನಾಗೇಂದ್ರ ಅವರ ಮೇಲಿನ ಆರೋಪಗಳನ್ನು ಸಾಬೀತುಪಡಿಸಲಿ. ಆರೋಪ ಸಾಬೀತಾದ ಬಳಿಕ ಐದು ನಿಮಿಷವೂ ಅವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸುವುದಿಲ್ಲ ಎಂದು ಹರಿಪ್ರಸಾದ್ ಸವಾಲು ಹಾಕಿದರು.
ವಿಧಾನಮಂಡಲವನ್ನು ಯಶವಂತಪುರದ ಮಾರುಕಟ್ಟೆಯಂತೆ ನಡೆಸಲು ಸಾಧ್ಯವಿಲ್ಲ. ಸದನದಲ್ಲಿ ನಿಯಮಾನುಸಾರವೇ ಚರ್ಚೆ ನಡೆಯಬೇಕು. ಬಿಜೆಪಿ ನಾಯಕರ ವಿರುದ್ಧವೂ ಗಂಭೀರ ಆರೋಪಗಳಿವೆ. ಕೇಂದ್ರ ಗೃಹ ಸಚಿವರ ವಿರುದ್ಧವೂ ಆರೋಪಗಳಿದ್ದು, ಸುನಿಲ್ ಕುಮಾರ್, ಯಶ್ಪಾಲ್ ಸುವರ್ಣ ಸೇರಿದಂತೆ ಹಲವರ ವಿರುದ್ಧ ಆರೋಪಗಳು ಕೇಳಿಬಂದಿವೆ ಎಂದು ಅವರು ಹೇಳಿದರು.
ಪಿಎಂ ಕೇಸ್‌ರ್ ನಿಧಿಯಲ್ಲಿ ನಡೆದಿರುವಷ್ಟು ಭ್ರಷ್ಟಾಚಾರ ಬೇರೆ ಯಾವುದರಲ್ಲೂ ನಡೆದಿಲ್ಲ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಹಾಗಾದರೆ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ರಾಜೀನಾಮೆ ನೀಡುತ್ತಾರೆಯೇ? ಎಂದು ಹರಿಪ್ರಸಾದ್ ಪ್ರಶ್ನಿಸಿದರು. ಬಿಜೆಪಿಯಿಂದ ಕಾಂಗ್ರೆಸ್ ನೈತಿಕತೆಯ ಪಾಠ ಕಲಿಯಬೇಕಿಲ್ಲ. ರಾಜ್ಯದ 18 ಜಿಲ್ಲೆಗಳಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ಈಗಾಗಲೇ ಈ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿದೆ. ವಿರೋಧ ಪಕ್ಷಗಳು ಜನರ ಸಮಸ್ಯೆಗಳ ಕುರಿತು ಚರ್ಚಿಸಿ ಸರ್ಕಾರಕ್ಕೆ ಸಲಹೆ ನೀಡಬೇಕಿತ್ತು. ಆದರೆ ಅದನ್ನು ಬಿಟ್ಟು ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬರ ಘೋಷಣೆಗೂ ಮುನ್ನ ಕೇಂದ್ರ ಸರ್ಕಾರ ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳುಹಿಸಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಬೇಕು. ಆ ತಂಡದ ವರದಿ ಆಧರಿಸಿ ಬರ ಘೋಷಣೆ ಮಾಡಬೇಕಿದೆ. ಆದರೆ ಈವರೆಗೆ ಕೇಂದ್ರದಿಂದ ಅಧಿಕಾರಿಗಳ ತಂಡವೂ ಬಂದಿಲ್ಲ, ಹಣವೂ ಬಿಡುಗಡೆಯಾಗಿಲ್ಲ. ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗುತ್ತದೆ ಎಂಬ ಕಾರಣಕ್ಕಾಗಿಯೇ ಬಿಜೆಪಿ ಹಾಗೂ ಜೆಡಿಎಸ್‌ನವರು ನಾಗೇಂದ್ರ ಅವರ ವಿಚಾರವನ್ನು ಮುಂದಿಟ್ಟುಕೊಂಡು ಗದ್ದಲ ಸೃಷ್ಟಿಸುತ್ತಿದ್ದಾರೆ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
