ಬೆಂಗಳೂರು, ಜೂ.30- ಕರ್ನಾಟಕದಲ್ಲಿ ಬಿಜೆಪಿಯ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಇದು ದೆಹಲಿ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಕ್ಷದ ನಾಯಕರ ನಡುವಿನ ಸಮನ್ವಯದ ಕೊರತೆ ಮತ್ತು ಪದೇಪದೇ ಉಂಟಾಗುತ್ತಿರುವ ಭಿನ್ನಮತವು ರಾಜ್ಯದಲ್ಲಿ ಪಕ್ಷದ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮತ್ತೊಂದೆಡೆ ದೇಶಾದ್ಯಂತ ಭದ್ರ ಅಡಿಪಾಯದೊಂದಿಗೆ ಬಲಿಷ್ಠವಾಗಿ ಬೆಳೆಯುತ್ತಿರುವ ಬಿಜೆಪಿ, ಕರ್ನಾಟಕದಲ್ಲಿ ಮಾತ್ರ ಪದೇ ಪದೆ ಆಂತರಿಕ ಸಂಘರ್ಷಗಳಿಗೆ ತುತ್ತಾಗುತ್ತಿರುವುದು ಸ್ವತಃ ಕಾರ್ಯಕರ್ತರಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಡಿ.ವಿ.ಸದಾನಂದ ಗೌಡ ಅವರ ಹೆಸರಿನಲ್ಲಿ ವೈರಲ್ ಆಗುತ್ತಿರುವ ಆಡಿಯೋವೊಂದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ವೈರಲ್ ಆಗಿರುವ ಆಡಿಯೋದಲ್ಲಿ, ಸದಾನಂದ ಗೌಡರು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕಾರ್ಯವೈಖರಿ ಮತ್ತು ಪಕ್ಷದ ಬೆಳವಣಿಗೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪಕ್ಷದ ಹಿರಿಯ ನಾಯಕರು ಮತ್ತು ರಾಜ್ಯ ನಾಯಕತ್ವದ ನಡುವಿನ ಅಂತರ ಮತ್ತೊಮೆ ಜಗಜ್ಜಾಹೀರಾಗಿದೆ.
ರಾಜ್ಯ ಬಿಜೆಪಿಯಲ್ಲಿ ಆಂತರಿಕ ಜಗಳ ಹೊಸದೇನಲ್ಲವಾದರೂ, ಈ ಹೊಸ ಆಡಿಯೋ ಪ್ರಕರಣವು ಪಕ್ಷದೊಳಗಿನ ಅಸ್ಥಿರತೆಯನ್ನು ಮತ್ತೊಮೆ ಎತ್ತಿ ತೋರಿಸಿದೆ. ಪಕ್ಷದ ತಳಮಟ್ಟದಿಂದ ಹಿಡಿದು ಉನ್ನತ ನಾಯಕರವರೆಗೆ ಇರುವ ಭಿನ್ನಾಭಿಪ್ರಾಯಗಳು, ಕಾರ್ಯಕರ್ತರಲ್ಲಿ ಗೊಂದಲವನ್ನು ಉಂಟುಮಾಡಿವೆ. ಈ ಘಟನೆಯು ಪಕ್ಷದಲ್ಲಿ ಎಲ್ಲವೂ ಸುಗಮವಾಗಿಲ್ಲ ಎಂಬುದನ್ನು ಪುಷ್ಟೀಕರಿಸಿದಂತಾಗಿದೆ.
ದೇಶದಾದ್ಯಂತ ಬಿಜೆಪಿ ಬಲಿಷ್ಠವಾಗಿ ಬೆಳೆಯುತ್ತಿದ್ದರೆ, ಕರ್ನಾಟಕದಲ್ಲಿ ಮಾತ್ರ ಪಕ್ಷದ ವರ್ಚಸ್ಸುದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂಬ ಆತಂಕ ಕಾರ್ಯಕರ್ತರಲ್ಲಿ ಮನೆಮಾಡಿದೆ. ರಾಜ್ಯದಲ್ಲಿ ಪಕ್ಷವನ್ನು ಸಂಘಟಿತವಾಗಿ ಮುನ್ನಡೆಸುವಲ್ಲಿ ನಾಯಕತ್ವ ವಿಫಲವಾಗುತ್ತಿದೆಯೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ತೀವ್ರವಾಗಿವೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿ, ಸಂಘಟನಾತಕ ಸಭೆಗಳನ್ನು ನಡೆಸಿದರೂ, ಭಿನ್ನಮತ ಶಮನಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಪಕ್ಷದ ಹಿರಿಯ ನಾಯಕರ ನಡುವಿನ ವಾಕ್ಸಮರ ಮತ್ತು ಬಣ ರಾಜಕೀಯದಿಂದಾಗಿ ತಳಮಟ್ಟದ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ.
ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಬೇಕೆಂಬ ಪ್ರಸ್ತಾವನೆಯು ಪಕ್ಷದ ಒಳಗೇ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಒಂದು ಕಡೆ ರಾಜ್ಯದಲ್ಲಿ ಬಲಿಷ್ಠ ಪ್ರತಿಪಕ್ಷವಾಗಿ ಹೊರಹೊಮಬೇಕಾದ ಅನಿವಾರ್ಯತೆ ಇದ್ದರೂ, ಆಂತರಿಕ ಭಿನ್ನಮತಗಳೇ ಪಕ್ಷದ ಬೆಳವಣಿಗೆಗೆ ಮಾರಕವಾಗುತ್ತಿವೆ ಎಂಬ ಆತಂಕ ಹಿರಿಯ ಮುಖಂಡರಲ್ಲೇ ವ್ಯಕ್ತವಾಗುತ್ತಿದೆ.
ರಾಜ್ಯದಲ್ಲಿನ ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ವರಿಷ್ಠರು, ಇತ್ತೀಚೆಗಷ್ಟೇ ರಾಜ್ಯದ ಪ್ರಮುಖ ನಾಯಕರನ್ನು ನವದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿದ್ದರು. ಪಕ್ಷದ ಆಂತರಿಕ ಭಿನ್ನಮತ ಮತ್ತು ಶಿಸ್ತಿನ ಉಲ್ಲಂಘನೆಯ ಬಗ್ಗೆ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಬಿಜೆಪಿಯಲ್ಲಿನ ಈ ಬೆಳವಣಿಗೆಗಳು ಮುಂಬರುವ ದಿನಗಳಲ್ಲಿ ಪಕ್ಷದ ಆಂತರಿಕ ರಚನೆ ಮತ್ತು ನಾಯಕತ್ವದಲ್ಲಿ ಬದಲಾವಣೆಗಳನ್ನು ತರುತ್ತವೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಗಳಲ್ಲಿನ ಅಡ್ಡಮತದಾನದ ಆರೋಪಗಳು ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿವೆ. ಈ ಬೆಳವಣಿಗೆಗಳ ಬೆನ್ನಲ್ಲೇ, ಹಿರಿಯ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ತೀವ್ರಗೊಂಡಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಗೊಂದಲವನ್ನು ಉಂಟುಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ತುಣುಕುಗಳು ಮತ್ತು ನಾಯಕರ ಹೇಳಿಕೆಗಳು ಈ ಆಂತರಿಕ ಅಸಮಾಧಾನವನ್ನು ಮತ್ತಷ್ಟು ಎತ್ತಿ ತೋರಿಸುತ್ತಿವೆ.
ಹೈಕಮಾಂಡ್ ಎಚ್ಚರಿಕೆ :
ಪರಿಸ್ಥಿತಿಯನ್ನು ನಿಯಂತ್ರಿಸಲು ಇತ್ತೀಚೆಗಷ್ಟೇ ರಾಜ್ಯಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರು, ಪಕ್ಷದ ಕೋರ್ ಕಮಿಟಿ ಸಭೆ ನಡೆಸಿ ಕಠಿಣ ಸಂದೇಶ ರವಾನಿಸಿದ್ದಾರೆ. ನಾಯಕರ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು, ಜನಪರ ಹೋರಾಟಗಳಿಗೆ ಒತ್ತು ನೀಡಬೇಕು. ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷದ ಹಿತವೇ ಮುಖ್ಯ ಎಂದು ನಬೀನ್ ತಾಕೀತು ಮಾಡಿದ್ದಾರೆ. ಅಲ್ಲದೆ, ತಮಿಳುನಾಡಿನಂತಹ ರಾಜ್ಯಗಳಲ್ಲಿನ ರಾಜಕೀಯ ಬೆಳವಣಿಗೆಗಳಿಂದ ಪಾಠ ಕಲಿಯುವಂತೆ ರಾಜ್ಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ಬಿಜೆಪಿ ರಾಜ್ಯ ಘಟಕವು ಸದ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವ ತಂತ್ರಗಾರಿಕೆಯನ್ನು ರೂಪಿಸುತ್ತಿದೆ. ಆದರೆ, ಆಂತರಿಕ ಕಲಹಗಳು ಶಮನವಾಗದ ಹೊರತು, ಸರ್ಕಾರದ ವಿರುದ್ಧದ ಹೋರಾಟಗಳು ವೇಗ ಪಡೆದುಕೊಳ್ಳುವುದಿಲ್ಲ ಎಂಬ ಅಭಿಪ್ರಾಯ ರಾಜಕೀಯ ವಿಶ್ಲೇಷಕರಿಂದ ವ್ಯಕ್ತವಾಗಿದೆ. ನಾಯಕರ ನಡುವಿನ ಭಿನ್ನಮತವನ್ನು ಸರಿಪಡಿಸಲು ಹೈಕಮಾಂಡ್ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಮತ್ತು ಸ್ಥಳೀಯ ನಾಯಕರು ಈ ಸವಾಲನ್ನು ಹೇಗೆ ಎದುರಿಸಲಿದ್ದಾರೆ ಎಂಬುದು ಈಗಿನ ಕುತೂಹಲವಾಗಿದೆ.
ಪಕ್ಷದ ಭವಿಷ್ಯದ ದೃಷ್ಟಿಯಿಂದ ಎಲ್ಲ ನಾಯಕರೂ ಒಗ್ಗಟ್ಟಾಗಿ ಕೆಲಸ ಮಾಡುವುದು ಅನಿವಾರ್ಯವಾಗಿದೆ ಎಂದು ವರಿಷ್ಠರು ಬಲವಾಗಿ ಪ್ರತಿಪಾದಿಸುತ್ತಿದ್ದರೂ, ಸ್ಥಳೀಯ ಮಟ್ಟದ ಗೊಂದಲಗಳು ಇನ್ನೂ ಬಗೆಹರಿಯದಿರುವುದು ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ. ಪಕ್ಷದ ಶಿಸ್ತನ್ನು ಮರುಸ್ಥಾಪಿಸಲು ಮತ್ತು ಭಿನ್ನಮತೀಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ವರಿಷ್ಠರು ಯಾವ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
