Friday, April 17, 2026
Homeರಾಜಕೀಯಶಾಸಕರ ಫಾರಿನ್ ಟೂರ್, ರಾಜ್ಯ ರಾಜಕೀಯದಲ್ಲಿ ತಲ್ಲಣ : ತಾರಕಕ್ಕೇರಿದ ಸಿಎಂ - ಡಿಸಿಎಂ ಬಣ...

ಶಾಸಕರ ಫಾರಿನ್ ಟೂರ್, ರಾಜ್ಯ ರಾಜಕೀಯದಲ್ಲಿ ತಲ್ಲಣ : ತಾರಕಕ್ಕೇರಿದ ಸಿಎಂ – ಡಿಸಿಎಂ ಬಣ ಬಡಿದಾಟ

MLAs' foreign tour, anxiety in state politics: CM-DCM faction clash

ಬೆಂಗಳೂರು, ಫೆ.18- ತೀವ್ರ ವಿರೋಧ ಹಾಗೂ ಅಧಿಕಾರ ಹಂಚಿಕೆಯ ಗೊಂದಲದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದ 20ಕ್ಕೂ ಹೆಚ್ಚು ಶಾಸಕರು ವಿದೇಶಿ ಪ್ರವಾಸ ಕೈಗೊಂಡಿರುವುದು ರಾಜ್ಯ ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ.

ನಿನ್ನೆ ರಾತ್ರಿ 12.30ಕ್ಕೆ ಕೆಲ ಶಾಸಕರು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ ಮತ್ತು ಮಲ್ಲೇಶಿಯಾ ದೇಶಗಳಿಗೆ ತೆರಳಿದ್ದಾರೆ. ಇಂದು ಇನ್ನೂ ಕೆಲ ಶಾಸಕರು ಇಂದು ರಾತ್ರಿ ವಿದೇಶಕ್ಕೆ ತೆರಳುತ್ತಿದ್ದಾರೆ.ಆಡಳಿತ ಪಕ್ಷದಲ್ಲಿ ನಡೆಯುತ್ತಿರುವ ವಿದೇಶಿ ಪ್ರವಾಸ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಣ ನಡೆಸಿದ್ದ ದೆಹಲಿ ಯಾತ್ರೆಗೆ ಎದಿರೇಟು ಎಂಬಂತೆ ಬಿಂಬಿಸಲಾಗಿದೆ. ಆರಂಭದಲ್ಲಿ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ 35ಕ್ಕೂ ಹೆಚ್ಚು ಶಾಸಕರು ವಿದೇಶಿ ಪ್ರವಾಸಕ್ಕೆ ಹೊರಟ್ಟಿದ್ದರು. ಆದರೆ ಕೊನೆ ಕ್ಷಣದಲ್ಲಿ ರಾಜಕೀಯ ತೊಂದರೆಗೆ ಒಳಗಾಗಬಾರದು ಎಂಬ ಕಾರಣಕ್ಕೆ ಹಿಂದೆ ಸರಿದಿದ್ದಾರೆ. ಹೈಕಮಾಂಡ್‌ ಶಾಸಕರ ವಿದೇಶಿ ಪ್ರವಾಸ ಕುರಿತು ಮಾಹಿತಿ ಕೇಳಿತ್ತು. ಅದರ ಬೆನ್ನಲ್ಲೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿದೇಶಿ ಪ್ರವಾಸ ಕುರಿತು ತಮಗೆ ಮಾಹಿತಿ ಇಲ್ಲ ಎಂದಿದ್ದರು.

ಇದರಿಂದ ಕೆಲವರು ಅಂಜಿಕೆಯಿಂದಲೇ ಹಿಂದೆ ಸರಿದಿದ್ದಾರೆ.ಬಹುತೇಕ ಶಾಸಕರು ಕುಟುಂಬ ಸಹಿತರಾಗಿ ವಿದೇಶಿ ಪ್ರವಾಸ ತೆರಳುತ್ತಿದ್ದು, ಮಾರ್ಚ್‌ 1ರ ನಂತರ ಸ್ವದೇಶಕ್ಕೆ ವಾಪಾಸ್‌‍ ಬರಲಿದ್ದಾರೆ. ಈ ಪ್ರವಾಸಕ್ಕೆ ಪ್ರಾಯೋಜಕತ್ವ ಯಾರದು? ಎಂಬ ಪ್ರಶ್ನೆ ತೀವ್ರ ಕುತೂಹಲ ಕೆರಳಿಸಿದೆ.

ಕೆಲ ಶಾಸಕರು ತಮ ಸ್ವಂತ ಖರ್ಚಿನಲ್ಲಿ ಪ್ರವಾಸ ಕೈಗೊಂಡರೆ ತಪ್ಪೇನು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಒಂದಿಬ್ಬರು ಸ್ವಂತ ಖರ್ಚಿನಲ್ಲಿ ಪ್ರವಾಸ ತೆರಳಿದ್ದರೆ ಅದರಲ್ಲಿ ವಿಶೇಷ ಏನು ಇರುತ್ತಿರಲಿಲ್ಲ. ಆದರೆ ಏಕಕಾಲಕ್ಕೆ 30ಕ್ಕೂ ಹೆಚ್ಚು ಶಾಸಕರು ಒಂದೇ ದೇಶಕ್ಕೆ ಪ್ರವಾಸಕ್ಕೆ ಅಣಿಯಾಗಿದ್ದಂತೂ ಕಾಕತಾಳೀಯವಲ್ಲ.

ಮೊದಲಿಗೆ ಅಧ್ಯಯನ ಪ್ರವಾಸ ನೆಪದಲ್ಲಿ ಸರ್ಕಾರದ ಖರ್ಚಿನಲ್ಲೇ ವಿದೇಶ ಪ್ರವಾಸಕ್ಕೆ ಯೋಜನೆ ರೂಪಿಸಲಾಗಿತ್ತು. ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರಿಂದಾಗಿ ಸರ್ಕಾರದ ವೆಚ್ಚದಲ್ಲಿನ ವಿದೇಶಿ ಪ್ರವಾಸಕ್ಕೆ ಕಡಿವಾಣ ಬಿದ್ದಿದೆ. ಆದರೆ ಖಾಸಗಿ ಪ್ರವಾಸಕ್ಕೆ ಅಷ್ಟು ಮಂದಿ ಶಾಸಕರಿಗೆ ಆರ್ಥಿಕ ಸೌಲಭ್ಯ ಕಲ್ಪಿಸಿದ್ದು ಯಾರು? ಎಂಬ ಪ್ರಶ್ನೆ ಉದ್ಭವಿಸಲಾರಂಭಿಸಿದೆ.

ಪ್ರವಾಸ ತೀವ್ರ ವಿವಾದ ಸೃಷ್ಟಿಯಾದ ನಂತರ ಸಚಿವ ಕೆ.ವೆಂಕಟೇಶ್‌, ಶಾಸಕರಾದ ರಾಘವೇಂದ್ರ ಹಿಟ್ನಾಳ್‌, ಕೋನರೆಡ್ಡಿ, ಶಾಂತನಗೌಡ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಉಳಿದಂತೆ ರಾಯಚೂರು ಗ್ರಾಮೀಣ ಬಸನಗೌಡ ದದ್ದಲ್‌, ಮಸ್ಕಿ ಬಸನಗೌಡ ತುರವಿಹಾಳ, ಕಲಬುರಗಿ, ದಕ್ಷಿಣ ಅಲ್ಲಮಪ್ರಭು ಪಾಟೀಲ್‌, ಕೊಳ್ಳೆಗಾಲ ಎ ಆರ್‌ ಕೃಷ್ಣಮೂರ್ತಿ, ಚಾಮರಾಜನಗರ ಪುಟ್ಟರಂಗಶೆಟ್ಟಿ, ಚಿಕ್ಕಮಗಳೂರು ಕ್ಷೇತ್ರದ ಎಚ್‌.ಡಿ.ತಮಯ್ಯ, ಸಿಂಧನೂರು ಹಂಪನಗೌಡ ಬಾದರ್ಲಿ, ಜಗಳೂರು ದೇವೇಂದ್ರಪ್ಪ, ಹೆಚ್‌.ಡಿ.ಕೋಟೆ ಅನಿಲ್‌ಚಿಕ್ಕಮಾಧು, ಸಿರಗುಪ್ಪ ಕ್ಷೇತ್ರದ ಬಿ.ಎಂ.ನಾಗರಾಜ್‌, ಬಾದಮಿ ಬಿ.ಬಿ.ಚಿಮನಕಟ್ಟಿ, ಬೈಲಹೊಂಗಲ ಮಹಂತೇಶ್‌ ಕೌಜಲಗಿ, ಚಳ್ಳಕೆರೆ ರಘುಮೂರ್ತಿ, ಬೀಳಗಿ ಕ್ಷೇತ್ರದ ಜಿ.ಟಿ.ಪಾಟೀಲ್‌ ಹಂತ ಹಂತವಾಗಿ ವಿದೇಶಕ್ಕೆ ತೆೆರಳಿದ್ದಾರೆ.

ವಿಧಾನಸಭೆಯ ಶಾಸಕರ ಜೊತೆಗೆ ವಿಧಾನ ಪರಿಷತ್‌ ಸದಸ್ಯರಾದ ನಾಗರಾಜ್‌ ಯಾದವ್‌, ವಸಂತಕುಮಾರ, ತಿಮಯ್ಯ ಮತ್ತಿತರರು ತೆರಳಿದ್ದಾರೆ.ಕಳೆದ ವರ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ಡಿ.ಕೆ.ಶಿವಕುಮಾರ್‌ ಬಣದ ಕೆಲ ಶಾಸಕರು ದೆಹಲಿಗೆೆ ತೆರಳಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.

ದೆಹಲಿಯಲ್ಲಿ ರಾಹುಲ್‌ ಗಾಂಧಿ ಅವರು ಡಿ.ಕೆ.ಶಿವಕುಮಾರ್‌ ಬಣದ ಶಾಸಕರ ಭೇಟಿಗೆ ಸಮಯ ನೀಡಿರಲಿಲ್ಲ. ಅದರಿಂದ ಒಳಗೊಳಗೆ ಕುದಿಯುತ್ತಿದ್ದ ಡಿ.ಕೆ.ಶಿವಕುಮಾರ್‌ ಬಣ ಗೋವಾದಲ್ಲಿ 50ಕ್ಕೂ ಹೆಚ್ಚು ಕೊಠಡಿಗಳನ್ನು ಕಾಯ್ದಿರಿಸಿ ಶಾಸಕರನ್ನು ಬೆಂಗಳೂರಿನಿಂದ ಸ್ಥಳಾಂತರಿಸಲು ವ್ಯೂಹ ರಚಿಸಿತ್ತು.

ಕೊನೆ ಕ್ಷಣದಲ್ಲಿ ಹೈಕಮಾಂಡ್‌ನ ವರಿಷ್ಠರು ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಮಾತುಕತೆ ನಡೆಸಿದ್ದರು. ಅಲ್ಲಿಗೆ ಗೋವಾ ರೆಸಾರ್ಟ್‌ ರಾಜಕೀಯ ಏಕಾಏಕಿ ತಣ್ಣಗಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿದ್ದರಾಮಯ್ಯ ಬಣ ಸದ್ದಿಲ್ಲದೆ ವಿದೇಶಿ ಪ್ರವಾಸದ ಯೋಜನೆ ರೂಪಿಸಿದೆ. ಈ ಮೊದಲು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಉತ್ತರ ಕರ್ನಾಟಕ ಭಾಗದ ಕೆಲ ಶಾಸಕರನ್ನು ಮೈಸೂರು ದಸರಾ ವೀಕ್ಷಣೆಯ ನೆಪದಲ್ಲಿ ಉತ್ತರ ಕರ್ನಾಟಕ ಪ್ರವಾಸಕ್ಕೆ ಅಣಿಗೊಳಿಸಿದ್ದರು. ಅದು ಗುಂಪುಗಾರಿಕೆ ಎಂಬ ಸಂದೇಶ ರವಾನೆಯಾಗಿದ್ದರಿಂದ ಹೈಕಮಾಂಡ್‌ ಬ್ರೇಕ್‌ ಹಾಕಿತ್ತು.

ಈ ಬಾರಿ ಹಿರಿಯ ನಾಯಕರ ಮಾತಿಗೆ ಸೊಪ್ಪು ಹಾಕದೆ ಶಾಸಕರು ವಿದೇಶಕ್ಕೆ ಹಾರಿದ್ದಾರೆ. ನಾವು ನಮ ಸ್ವಂತ ಖರ್ಚಿನಲ್ಲಿ ವಿದೇಶಿ ಪ್ರವಾಸ ಕೈಗೊಳ್ಳುವುದಾದರೆ ಪಕ್ಷದ ವರಿಷ್ಠ ನಾಯಕರಿಗೆ ಏಕೆ ಅನುಮತಿ ಕೇಳಬೇಕು ಎಂಬ ಪ್ರಶ್ನೆಯನ್ನು ಸಿದ್ದರಾಮಯ್ಯ ಆಪ್ತರು ಮುಂದಿಟ್ಟಿದ್ದಾರೆ.

ಪಕ್ಷವನ್ನು ಲೆಕ್ಕಿಸದೆ ಸಿದ್ದರಾಮಯ್ಯ ಬಣದ ಶಾಸಕರು ವಿದೇಶಕ್ಕೆ ತೆರಳಿರುವುದನ್ನು ನೋಡಿದಾಗ ಮುಂದೆ ರಾಜ್ಯ ರಾಜಕೀಯದಲ್ಲಿನ ಸುನಾಮಿಯ ಮುನ್ಸೂಚನೆ ನೀಡಿದೆ.
ಹಿಂದೆ ಡಿ.ಕೆ.ಶಿವಕುಮಾರ್‌ ಬಣದ ಶಾಸಕರು ದೆಹಲಿ ಪ್ರವಾಸ ಕೈಗೊಂಡಾಗ ನಮ ವೈಯಕ್ತಿಕ ಕೆಲಸಕ್ಕೆ ಬಂದಿದ್ದೇವೆ ಎಂದು ಹೇಳಿದ್ದರು. ಕಾಲಾನಂತರ ದೆಹಲಿ ಯಾತ್ರೆಯ ಉದ್ದೇಶಗಳು ಬಹಿರಂಗಗೊಂಡವು.

ಈಗ ವಿದೇಶಿ ಪ್ರವಾಸ ಕೈಗೊಳ್ಳುತ್ತಿರುವ ಶಾಸಕರು ಕೂಡ ವೈಯಕ್ತಿಕ ಪ್ರವಾಸ ಎಂದು ನೆಪ ಹೇಳುತ್ತಿದ್ದರೆ. ಆದರೆ ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಗೊತ್ತಿಲ್ಲ. ಶಾಸಕರ ವಿದೇಶಿ ಪ್ರವಾಸ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಅಸಹನೆಗೆ ಕಾರಣವಾಗಿದೆ.

RELATED ARTICLES

Latest News