Homeರಾಜಕೀಯಗೃಹ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಆರ್‌.ಅಶೋಕ್‌ ಹಿಗ್ಗಾಮುಗ್ಗಾ ವಾಗ್ದಾಳಿ

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಆರ್‌.ಅಶೋಕ್‌ ಹಿಗ್ಗಾಮುಗ್ಗಾ ವಾಗ್ದಾಳಿ

R. Ashok attacks Home Minister Priyank Kharge

ಬೆಂಗಳೂರು,ಜೂ.13- ಟ್ವಿಟರ್‌ನಲ್ಲಿ ಸಂವಿಧಾನ ಉಳಿಸುವ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ, ತಮ್ಮ ಸ್ವಂತ ಜಿಲ್ಲೆಯ ಕಾಲೇಜಿನ ಮೇಲ್ಛಾವಣಿಯನ್ನೂ ಉಳಿಸಿಕೊಳ್ಳುವ ಯೋಗ್ಯತೆಯೂ ಇಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಕೆಂಡಕಾರಿದ್ದಾರೆ.

ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ದಿನಬೆಳಗಾದರೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳ ಮುಂದೆ ಜ್ಞಾನ ಬೋಧನೆ, ಬೆಳಗ್ಗೆಯಿಂದ ಸಂಜೆವರೆಗೆ ಬಿಜೆಪಿ, ಆರ್‌ ಎಸ್‌‍ ಎಸ್‌‍ , ಇತಿಹಾಸ, ಕೇಂದ್ರ ಸರ್ಕಾರ, ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ದೊಡ್ಡ ದೊಡ್ಡ ಭಾಷಣ. ಆದರೆ ನಿಮದೇ ಸ್ವಂತ ಜಿಲ್ಲೆಯಾದ ಕಲಬುರಗಿಯ ಸರ್ಕಾರಿ ಕಾಲೇಜಿನ ದುಸ್ಥಿತಿ ನೋಡಲು ಮಾತ್ರ ನಿಮಗೆ ಪುರುಸೊತ್ತಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಲಬುರಗಿ ನಗರದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ತರಗತಿ ನಡೆಯುತ್ತಿದ್ದಾಗಲೇ ಮೇಲ್ಛಾವಣಿಯ ಸಿಮೆಂಟ್‌ ಪದರು ಕುಸಿದು ಬಿದ್ದು 5 ವಿದ್ಯಾರ್ಥಿನಿಯರು ತೀವ್ರವಾಗಿ ಗಾಯಗೊಂಡಿದ್ದಾರೆ! 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿಯಲ್ಲಿದ್ದ ಸಂದರ್ಭದಲ್ಲಿ ಈ ಭೀಕರ ಘಟನೆ ನಡೆದಿದೆ ಎಂದರೆ ಇದು ಕೇವಲ ಅಪಘಾತವಲ್ಲ, ಇದು ನಿಮ ಕಾಂಗ್ರೆಸ್‌‍ ಸರ್ಕಾರದ ಜವಾಬ್ದಾರಿರಹಿತ ನಿರ್ಲಕ್ಷ್ಯದ ಪರಮಾವಧಿ!ಅಸಲಿಗೆ ನಿಮ ಆದ್ಯತೆಯಾದರೂ ಏನು ಪ್ರಿಯಾಂಕ್‌ ಖರ್ಗೆ ಅವರೇ, ಬರೀ ಚಿಲ್ಲರೆ ರಾಜಕೀಯವೋ ಅಥವಾ ಆಡಳಿತ ಮಾಡುವ ಆಸಕ್ತಿ ಏನಾದರೂ ಇದೆಯೋ? ಎಂದು ಪ್ರಶ್ನೆ ಮಾಡಿದ್ದಾರೆ.

ಸ್ವಂತ ಜಿಲ್ಲೆಯ ಕಾಲೇಜು ಕಟ್ಟಡಗಳು ಕಣ್ಣೆದುರೇ ಕುಸಿಯುತ್ತಿವೆ. ನಿಮ್ಮ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿಯರು ತರಗತಿಯಲ್ಲೇ ಗಾಯಗೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಆದರೆ ನೀವು ಮಾತ್ರ ಸದಾ ಕಾಲ ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ರಾಜಕೀಯ ವಿವಾದಗಳ ಹುಡುಕಾಟದಲ್ಲಿ ನಿರತರಾಗಿದ್ದೀರಿ!ಸ್ವಂತ ಜಿಲ್ಲೆಯ ಹೆಣ್ಣುಮಕ್ಕಳು ಕಲಿಯುವ ಕಾಲೇಜಿನ ಮೇಲ್ಛಾವಣಿಯನ್ನೇ ಭದ್ರವಾಗಿ ಉಳಿಸಿಕೊಳ್ಳಲಾಗದವರು, ಇಡೀ ರಾಜ್ಯದ, ದೇಶದ, ಸಂವಿಧಾನದ ಭವಿಷ್ಯದ ಬಗ್ಗೆ ಭಾಷಣ ಬಿಗಿಯುವುದು ಎಷ್ಟು ದೊಡ್ಡ ವಿಪರ್ಯಾಸ! ಎಂದು ವಿಷಾದಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರೇ,ಇದು ಕೇವಲ ಕಟ್ಟಡದ ಮೇಲ್ಛಾವಣಿ ಕುಸಿದ ಘಟನೆ ಅಲ್ಲ, ಇದು ನಿಮ ಕಾಂಗ್ರೆಸ್‌‍ ಸರ್ಕಾರದ ಆಡಳಿತವೇ ಸಂಪೂರ್ಣವಾಗಿ ಕುಸಿದು ಬಿದ್ದಿರುವುದರ ಜೀವಂತ ಸಂಕೇತ!ನಮ ಆಗ್ರಹ ಇಷ್ಟೇ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಗಾಯಗೊಂಡ ವಿದ್ಯಾರ್ಥಿನಿಯರಿಗೆ ತಕ್ಷಣ ಉನ್ನತ ಮಟ್ಟದ ಉಚಿತ ಚಿಕಿತ್ಸೆ ನೀಡಬೇಕು. ಈ ಗಂಭೀರ ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು.ರಾಜ್ಯದ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳ ಸುರಕ್ಷತಾ ಲೆಕ್ಕಪರಿಶೋಧನೆಯನ್ನು ತಕ್ಷಣವೇ ನಡೆಸಬೇಕು.ಇಲ್ಲವಾದರೆ, ಮಕ್ಕಳ ಜೀವದ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್‌‍ ಪಕ್ಷವನ್ನ ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಅಕ್ಕಿ ಕಳ್ಳರನ್ನು ಜೈಲಿಗಟ್ಟಿ
ಮತ್ತೊಂದು ಪೋಸ್ಟ್‌ ನಲ್ಲಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಈ ಲೂಟಿ ಸರ್ಕಾರದ ವಿರುದ್ಧ ಜನ ದಂಗೆ ಏಳುವ ದಿನ ಬಹಳ ದೂರವಿಲ್ಲ. ಮುಖ್ಯಮಂತ್ರಿಗಳೇ, ನಿಮ್ಮ ಮೂಗಿನ ಕೆಳಗೆ ನಡೆಯುತ್ತಿರುವ ಈ ಹಗರಣಕ್ಕೆ ನಿಮ ಉತ್ತರವೇನು ಸ್ವಾಮಿ? ಇದೇನಾ ನಿಮ ಪಾರದರ್ಶಕತೆ? ಇದೇನಾ ನಿಮ ಕಾರ್ಯವೈಖರಿ? ನಿಮಗೆ ಕಿಂಚಿತ್ತಾದರೂ ಆತಸಾಕ್ಷಿ ಇದ್ದರೆ ತಕ್ಷಣವೇ ಈ ಅಕ್ಕಿ ಮಾಫಿಯಾದ ಸೂತ್ರಧಾರರನ್ನು ಜೈಲಿಗಟ್ಟಿ ಎಂದು ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟನ್‌ ಗಟ್ಟಲೆ ಅಕ್ಕಿ ಕಳವು:
ಬೆಂಗಳೂರಿನ ವಿವಿಧೆಡೆ ಆಹಾರ ನಿಗಮದ ಗೋದಾಮುಗಳಿಂದಲೇ ನೂರಾರು ಕ್ವಿಂಟಲ್‌ ಅನ್ನಭಾಗ್ಯದ ಅಕ್ಕಿ, ರಾಗಿ ಖಾಸಗಿ ಗೋದಾಮುಗಳಿಗೆ ಅಕ್ರಮವಾಗಿ ಸರಬರಾಜು!

ಲೆಕ್ಕವಿಲ್ಲದ 860 ಚೀಲಗಳು:
ಶಾಂತಿನಗರದ ನಿಗಮದ ಗೋದಾಮಿನಲ್ಲೇ ದಾಖಲೆ ಇಲ್ಲದ ನೂರಾರು ಚೀಲ ಅಕ್ಕಿ ಪತ್ತೆ! ಗೋದಾಮುಗಳಲ್ಲಿ ಸಿಸಿಟಿವಿ ಇಲ್ಲ, ಸುರಕ್ಷತೆಯೂ ಇಲ್ಲ ಇದೆಲ್ಲವೂ ವ್ಯವಸ್ಥಿತ ಲೂಟಿಗೆ ಸರ್ಕಾರವೇ ಮಾಡಿಕೊಟ್ಟ ದಾರಿಯಲ್ಲವೇ?

ರೀ-ಪ್ಯಾಕೇಜಿಂಗ್‌ ದಂಧೆ:
ಬಡವರ ಪಡಿತರ ಅಕ್ಕಿಯನ್ನು ಪಾಲಿಶ್‌ ಮಾಡಿ, ಬೇರೆ ಚೀಲಗಳಿಗೆ ತುಂಬಿಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರಿ ಲೂಟಿ ಹೊಡೆಯುತ್ತಿರುವ ಮಾಫಿಯಾಕ್ಕೆ ಸರ್ಕಾರದ ಶ್ರೀರಕ್ಷೆ ಇಲ್ಲದೆ ನಡೆಯಲು ಸಾಧ್ಯವೇ? ಎಂದು ಪ್ರಶ್ನೆಸಿದ್ದಾರೆ.

ರೈತ_ ವಿರೋಧಿ ಕಾಂಗ್ರೆಸ್‌‍
ಇನ್ನೊಂದು ಪೋಸ್ಟ್‌ ನಲ್ಲಿ ಅನ್ನದಾತನನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ಕಾಗದದಲ್ಲಿ ಮಾತ್ರ ಗೊಬ್ಬರ ತೋರಿಸುವ ಈ ಮೋಸದ ಆಡಳಿತವನ್ನು ಕರ್ನಾಟಕದ ರೈತರು ಎಂದಿಗೂ ಕ್ಷಮಿಸುವುದಿಲ್ಲ! ರೈತರ ಶಾಪ ತಟ್ಟಿದ ಸರ್ಕಾರ ಯಾವತ್ತೂ ಉಳಿದಿಲ್ಲ, ಈ ಕಾಂಗ್ರೆಸ್‌‍ ಸರ್ಕಾರವೂ ಇದಕ್ಕೆ ಹೊರತಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಅತ್ಯಂತ ದೊಡ್ಡ ವಿಪರ್ಯಾಸ ಏನು ಗೊತ್ತೇ? ಕೃಷಿ ಇಲಾಖೆಯ ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 10.65 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನಿದೆಯಂತೆ! ಕೊಪ್ಪಳದಲ್ಲಿ ಗೊಬ್ಬರ ಎಲ್ಲಿದೆ? ಗದಗದಲ್ಲಿ ಗೊಬ್ಬರ ಎಲ್ಲಿದೆ? ಹಾವೇರಿಯಲ್ಲಿ ಗೊಬ್ಬರ ಎಲ್ಲಿದೆ? ಕಲಬುರಗಿಯಲ್ಲಿ ಗೊಬ್ಬರ ಎಲ್ಲಿದೆ? ಯಾದಗಿರಿಯಲ್ಲಿ ಗೊಬ್ಬರ ಎಲ್ಲಿದೆ?ಬಳ್ಳಾರಿಯಲ್ಲಿ ಗೊಬ್ಬರ ಎಲ್ಲಿದೆ? ಕಾಗದದಲ್ಲಿ ದಾಸ್ತಾನು ಇದ್ದರೆ ಸಾಲದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೇ, ನಿಮ ಸರ್ಕಾರದ ಬಳಿ ಉತ್ತರ ಇದೆಯೇ? 10.65 ಲಕ್ಷ ಟನ್‌ ಗೊಬ್ಬರ ನಿಜವಾಗಿಯೂ ಎಲ್ಲಿದೆ? ಯಾರ ನಿರ್ಲಕ್ಷ್ಯದಿಂದ ರೈತರು ಪರದಾಡುತ್ತಿದ್ದಾರೆ? ನಿಮ ಸಂಪುಟದಲ್ಲಿ ಕೃಷಿ ಸಚಿವರು ಯಾಕಿಲ್ಲ? ಯಾವಾಗ ನೇಮಕವಾಗುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

RELATED ARTICLES
spot_img

Latest News