ಬೆಂಗಳೂರು, ಆ.17- ಹೊಸ ಕೊಠಡಿಗೆ ಸಾಂಕೇತಿಕವಾಗಿ ಪೂಜೆ ಸಲ್ಲಿಸಿ ಕಚೇರಿ ಉದ್ಘಾಟನೆ ಮಾಡಿದ್ದೇನೆ. ಕೊಠಡಿಯನ್ನು ಹಿಂದಿನ ಸ್ಥಿತಿಯಲ್ಲೇ ಸ್ವಚ್ಛಗೊಳಿಸಲಾಗಿದೆ. ಯಾವುದೇ ನವೀಕರಣ ಕಾಮಗಾರಿ ಮಾಡಿಸಿಲ್ಲ ಎಂದು ಸಚಿವ ಬಸವಂತಪ್ಪ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಚೇರಿ ನವೀಕರಣಕ್ಕಾಗಿ ಸರ್ಕಾರದ ಮೇಲೆ ಯಾವುದೇ ಹೆಚ್ಚುವರಿ ಹೊರೆ ಹಾಕಿಲ್ಲ. ವಿಶ್ವಮಾನವ ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಇರಿಸಿ ಕಚೇರಿ ಉದ್ಘಾಟನೆ ಮಾಡಿದ್ದೇನೆ. ಹಿರಿಯರೆಲ್ಲರೂ ಆಗಮಿಸಿ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.
ಸರ್ಕಾರದ ಹಣ ದುಂದುವೆಚ್ಚವಾಗಬಾರದು. ಈಗಾಗಲೇ ಇರುವ ಸಾಮಗ್ರಿಗಳನ್ನೇ ಬಳಸಿಕೊಂಡಿದ್ದೇನೆ. ನಮ್ಮ ಅವಧಿ ಮುಗಿದ ಬಳಿಕವೂ ಈ ಕೊಠಡಿಯನ್ನು ಸಮರ್ಪಕವಾಗಿ ರಕ್ಷಿಸಬೇಕು ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಇರುವ ಸಂದರ್ಭದಲ್ಲಿ ಇದೇ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಸ್ವೀಕರಿಸುತ್ತೇನೆ. ಕರಾವಳಿ ಭಾಗದಲ್ಲಿ ಮೀನುಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಕರಾವಳಿ ಭಾಗಕ್ಕೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ಸಚಿವರು ತಿಳಿಸಿದರು. ಆ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಸ್ಸಿಪಿ-ಟಿಎಸ್ಪಿ ಅನುದಾನದ ಬಳಕೆ ಕುರಿತು ಸಮಗ್ರ ಮಾಹಿತಿ ಪಡೆಯುತ್ತೇನೆ. ನಾನು ಕೂಡ ಅದೇ ಸಮುದಾಯದಿಂದ ಬಂದವನಾಗಿದ್ದು, ಈ ಅನುದಾನವನ್ನು ಪ್ರಾಮಾಣಿಕವಾಗಿ ಹಾಗೂ ಸಮರ್ಪಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಬಸಂತಪ್ಪ ಹೇಳಿದರು.
ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಅವರು ರಾಜ್ಯದ ಹಣಕಾಸು ವ್ಯವಸ್ಥೆಯನ್ನು ಕ್ರೋಡೀಕರಿಸುತ್ತಿದ್ದಾರೆ. ತಮ್ಮ ಇಲಾಖೆಗೆ ಹೆಚ್ಚಿನ ಅನುದಾನ ನೀಡುವ ವಿಶ್ವಾಸವಿದೆ ಎಂದು ಹೇಳಿದರು.
