Homeರಾಜ್ಯಹನೂರು ಶೂಟೌಟ್‌ ಪ್ರಕರಣದ ನ್ಯಾಯಾಂಗ ತನಿಖೆ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ: ರಾಮಲಿಂಗಾರೆಡ್ಡಿ

ಹನೂರು ಶೂಟೌಟ್‌ ಪ್ರಕರಣದ ನ್ಯಾಯಾಂಗ ತನಿಖೆ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ: ರಾಮಲಿಂಗಾರೆಡ್ಡಿ

ಬೆಂಗಳೂರು, ಆ.17- ಚಾಮರಾಜನಗರ ಜಿಲ್ಲೆಯ ಹನೂರು ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮೃತಪಟ್ಟಿರುವ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಗೆ ತಿಳಿಸಿದರು.

ಎನ್‌ಕೌಂಟರ್‌ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ ಬಳಿಕ ಅವರು ಸ್ಪಷ್ಟನೆ ನೀಡಿದರು. ಈಗಾಗಲೇ ಮ್ಯಾಜಿಸ್ಟ್ರೇಟ್‌ ತನಿಖೆ ನಡೆಯುತ್ತಿದ್ದು, ಅದರ ವರದಿ ಬರಲಿ. ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಮೃತರು ಬೇಟೆಗಾರರಾಗಿದ್ದರೆ ಅವರ ವಿರುದ್ಧವೂ ಕಾನೂನು ಕ್ರಮ ಜರುಗಲಿದೆ. ಪರಿಹಾರ ನೀಡುವ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ತನಿಖಾ ವರದಿ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌, ಎನ್‌ಕೌಂಟರ್‌ನಲ್ಲಿ ಅಮಾಯಕರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದರು. ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಬೇಕು. ಮ್ಯಾಜಿಸ್ಟ್ರೇಟ್‌ ತನಿಖೆಯ ಬದಲಿಗೆ ನ್ಯಾಯಾಂಗ ತನಿಖೆ ನಡೆಸಬೇಕು. ಘಟನೆಯ ನೈತಿಕ ಹೊಣೆ ಹೊತ್ತು ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಹತ್ತಿರದಿಂದ ಗುಂಡು ಹಾರಿಸಲಾಗಿದೆ. ರಾಜ್ಯದ ಜನರು ಹಾಗೂ ರೈತರು ಈ ಬಗ್ಗೆ ಪ್ರಶ್ನಿಸುತ್ತಿದ್ದು, ಸರ್ಕಾರ ಉತ್ತರ ನೀಡಬೇಕು. ಅವರನ್ನು ಬಂಧಿಸಬಹುದಾಗಿತ್ತು. ಆದರೆ ಮೂವರನ್ನೂ ಸಾಯಿಸುವ ಅಗತ್ಯವೇನಿತ್ತು ಎಂದು ಅಶೋಕ್‌ ಪ್ರಶ್ನಿಸಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು.

ಕೃಷ್ಣ ಬೈರೇಗೌಡ ಮಾತನಾಡಿ, ಸಚಿವರು ಸ್ವಯಂ ಹೇಳಿಕೆ ನೀಡಿದ ಬಳಿಕ ಅದೇ ವಿಚಾರದ ಬಗ್ಗೆ ಚರ್ಚೆಗೆ ಅವಕಾಶವಿಲ್ಲ ಎಂದು ಹೇಳಿದರು. ಬಿತ್ತನೆ ಬೀಜ ಹಾಗೂ ಗೊಬ್ಬರ ಕೇಳಿದ ರೈತರ ಮೇಲೆ ಗುಂಡು ಹಾರಿಸಿದವರು ನೀವು. ನಿಮ್ಮಿಂದ ಪಾಠ ಕಲಿಯಬೇಕಿಲ್ಲ ಎಂದು ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ತಮಿಳುನಾಡು ಮುಖ್ಯಮಂತ್ರಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವುದಕ್ಕೆ ಏನಾದರೂ ಕನಸಿನಲ್ಲಿ ಕಂಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಪೌರಾಡಳಿತ ಸಚಿವ ಸಿ.ಎನ್‌. ಬಾಲಕೃಷ್ಣ ಮಧ್ಯಪ್ರವೇಶಿಸಿ, ಸ್ಪಷ್ಟೀಕರಣ ಕೇಳುವುದನ್ನು ಬಿಟ್ಟು ರಾಜಕೀಯ ಮಾಡಲು ಬಂದಿದ್ದೀರಾ ಎಂದು ಪ್ರತಿಪಕ್ಷದ ಸದಸ್ಯರನ್ನು ಪ್ರಶ್ನಿಸಿದರು. ತಪ್ಪು ಮಾಡಿದರೆ ಶಿಕ್ಷೆಯಾಗಲಿದೆ. ಪ್ರಶ್ನೋತ್ತರ ಕಲಾಪವೂ ನಡೆಯಬೇಕಲ್ಲವೇ ಎಂದು ಹೇಳಿದರು.

ಬಿಜೆಪಿ ಶಾಸಕ ಸುನೀಲ್‌ಕುಮಾರ್‌ ಮಾತನಾಡಿ, ಸಚಿವರು ಮೃತರನ್ನು ಬೇಟೆಗಾರರು ಎಂದು ಉಲ್ಲೇಖಿಸಿದ್ದಾರೆ. ಆದರೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹಾಗೂ ಸಂಸದರ ಹೇಳಿಕೆಗಳಲ್ಲಿ ವ್ಯತ್ಯಾಸವಿದ್ದು, ಇದರಿಂದ ಗೊಂದಲ ಉಂಟಾಗಿದೆ ಎಂದು ಹೇಳಿದರು. ರಾಜಕೀಯ ಮೇಲಾಟಕ್ಕಾಗಿ ವಿಷಯಾಂತರ ಮಾಡಲು ರೈತರ ಮೇಲೆ ಗುಂಡು ಹಾರಿಸಲಾಗಿದೆಯೇ? ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಆರೋಪಿಸಿದರು.

ಸ್ಪಷ್ಟನೆ ನೀಡಿದ ಪುಟ್ಟರಂಗಶೆಟ್ಟಿ, ಸ್ವಾತಂತ್ರ್ಯ ದಿನಾಚರಣೆಯಂದು ಬೆಳಿಗ್ಗೆ 11.15ಕ್ಕೆ ಘಟನೆ ಕುರಿತು ಮಾಹಿತಿ ಬಂದಿದೆ. ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಒಂದು ರೀತಿಯ ಹೇಳಿಕೆ ನೀಡಿದ್ದಾರೆ. ಬೆಳಗಿನ ಜಾವ 5 ಗಂಟೆಗೆ ಹಸು ಮೇಯಿಸಲು ಹೋಗಿದ್ದರೇ ಎಂದು ಪ್ರಶ್ನಿಸಿದರು. ಅರಣ್ಯ ಇಲಾಖೆಯವರು ಹೇಳಿದ್ದು ಸರಿಯಲ್ಲ ಎಂದು ತಾನು ಹೇಳಿಲ್ಲ. ನ್ಯಾಯಾಂಗ ತನಿಖೆ ನಡೆದ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ಬಾಬು ಮಾತನಾಡಿ, ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರೆ ಮಂಡಿಯ ಕೆಳಭಾಗಕ್ಕೆ ಗುಂಡು ಹಾರಿಸಬಹುದಿತ್ತು. ಆದರೆ ಹತ್ತಿರದಿಂದ ಗುಂಡು ಹಾರಿಸಲಾಗಿದೆ ಎಂದು ಆರೋಪಿಸಿದರು. ಗಾಯಾಳು ಮಹಿಮಾ ದಾಸ್‌ ಆಸ್ಪತ್ರೆಯಿಂದ ಎಲ್ಲಿಗೆ ಹೋದರು ಎಂಬುದು ತಿಳಿದಿಲ್ಲ. ಅರಣ್ಯ ಇಲಾಖೆಯವರೇ ಅವರನ್ನು ಬೇರೆಡೆ ಕರೆದೊಯ್ದಿರುವ ಅನುಮಾನವಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಬಂಡೆಯ ಮೇಲೆ ಮಲಗಿದ್ದವರ ಮೇಲೆ ಶೂಟೌಟ್‌ ಮಾಡಲಾಗಿದೆ ಎಂಬ ಆರೋಪವಿದೆ ಎಂದು ಹೇಳಿದರು.

ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ಕಾಡಿನಲ್ಲಿ ಸಿಸಿ ಕ್ಯಾಮೆರಾಗಳಿವೆ. ಬಂದೂಕು ಹಿಡಿದು ಕಾಡಿಗೆ ಹೋಗಿದ್ದರೆ ಅವರನ್ನು ಪತ್ತೆಹಚ್ಚಬಹುದಿತ್ತು. ಮೂವರು ಮೃತಪಟ್ಟಿದ್ದರೆ ನಾಲ್ಕನೇ ವ್ಯಕ್ತಿ ಎಲ್ಲಿಗೆ ಹೋದರು ಎಂಬುದನ್ನು ಪತ್ತೆಹಚ್ಚಬೇಕು. ಮಲಗಿದ್ದವರನ್ನು ಎತ್ತಿಕೊಂಡು ಹೋಗಿ ಶೂಟೌಟ್‌ ಮಾಡಲಾಗಿದೆ ಎಂಬ ಆರೋಪವಿದೆ. ಸರ್ಕಾರ ಜನರ ಕ್ಷಮೆ ಕೇಳಬೇಕು, ಸೂಕ್ತ ಪರಿಹಾರ ನೀಡಬೇಕು ಹಾಗೂ ಎನ್‌ಕೌಂಟರ್‌ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಕಾಡಂಚಿನ ಜನರು ಮತ್ತು ಅರಣ್ಯ ಅಧಿಕಾರಿಗಳ ನಡುವೆ ಸಂಘರ್ಷ ನಡೆಯುತ್ತಿರುತ್ತದೆ. ಹನೂರು ಎನ್‌ಕೌಂಟರ್‌ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ ನ್ಯಾಯಾಂಗ ತನಿಖೆ ನಡೆಸಬೇಕು, ಎನ್‌ಕೌಂಟರ್‌ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, ಯಾವ ಆಧಾರದ ಮೇಲೆ ಅವರನ್ನು ಕಾಡುಗಳ್ಳರು ಎಂದು ಕರೆಯಲಾಗುತ್ತಿದೆ? 34 ಕೆಜಿ ಮಾಂಸ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಪ್ರಾಣಿಗಳ ಚರ್ಮ ಎಲ್ಲಿದೆ? ಇದು ಸತ್ಯವಲ್ಲ ಎಂದು ಆರೋಪಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗಿದ್ದರೆ ಅವರನ್ನು ಜೀವಂತವಾಗಿ ಬಂಧಿಸಬೇಕಿತ್ತು. ಮೃತಪಟ್ಟವರು ರೈತರು. ರಾಜಕೀಯ ಮಾಡಲು ನಮ್ಮ ಕ್ಷೇತ್ರಗಳಿವೆ ಎಂದು ಹೇಳಿದರು.

ಇದಕ್ಕೆ ಉತ್ತರ ನೀಡಿದ ಸಚಿವ ರಾಮಲಿಂಗಾರೆಡ್ಡಿ, ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಕಾನೂನುಗಳನ್ನು ಜಾರಿಗೆ ತಂದಿವೆ ಎಂದು ಹೇಳಿದರು. ಕಳೆದ 16 ವರ್ಷಗಳಲ್ಲಿ 278 ಕಳ್ಳಬೇಟೆ ಪ್ರಕರಣಗಳು ಪತ್ತೆಯಾಗಿವೆ. ಬೆಳಗಿನ ಜಾವ 5.10ರ ಸುಮಾರಿಗೆ ಕಾಡಿನಲ್ಲಿ ಕತ್ತಲೆ ಇರುತ್ತದೆ. ಸ್ಲೈಡ್‌ ಆಕ್ಷನ್‌ ಗನ್‌ನಿಂದ ಮೂರು ಸುತ್ತು ಗುಂಡು ಹಾರಿಸಲಾಗಿದ್ದು, ಗುಂಡುಗಳು ದೇಹದ ವಿವಿಧ ಭಾಗಗಳಿಗೆ ತಗುಲಿವೆ ಎಂದು ವಿವರಿಸಿದರು.

ಮೃತರ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಅರಣ್ಯ ಕಾಯ್ದೆಯಡಿ ಮೃತರ ವಿರುದ್ಧವೂ ಪ್ರಕರಣ ದಾಖಲಾಗಿದೆ. 34 ಕೆಜಿ ಮಾಂಸ ಪತ್ತೆಯಾಗಿದ್ದು, ಪ್ರಾಣಿಗಳ ಚರ್ಮವನ್ನು ಬಿಸಾಡಿರಬಹುದು. ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ. ಗಾಯಗೊಂಡಿದ್ದ ಮಹೀಂ ದಾಸ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಸಚಿವರು ತಿಳಿಸಿದರು.

RELATED ARTICLES
spot_img

Latest News