ಬೆಂಗಳೂರು, ಮೇ 29- ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಸಿದ್ದರಾಮಯ್ಯ ಅವರ ಪರವಾಗಿ ಅಗತ್ಯಕ್ಕಿಂತಲೂ ಹೆಚ್ಚು ಮಾತನಾಡಿ, ಕೆಲ ಆಪ್ತರೇ ದುರ್ಗತಿಯ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ ಎಂಬ ಹಿಡೀ ಶಾಪ ಆಪ್ತರ ಬಣದಲ್ಲಿ ಕೇಳಿ ಬರುತ್ತಿದೆ. ಜಮೀರ್ ಅಹಮದ್‌ಖಾನ್, ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ, ಬಸವರಾಜರಾಯ ರೆಡ್ಡಿ, ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸೇರಿದಂತೆ ಕೆಲವರು ಅನಗತ್ಯವಾಗಿ ಪದೇ ಪದೇ ನಾಯಕತ್ವದ ವಿವಾದವನ್ನು ಕೆಣಕಿ ಡಿ.ಕೆ.ಶಿವಕುಮಾರ್ ಬಣವನ್ನು ರೊಚ್ಚಿಗೆಬ್ಬಿಸಿದರು.
ಡಿ.ಕೆ.ಶಿವಕುಮಾರ್‌ರವರು ತಮ್ಮ ಪರವಾಗಿ ಮಾತನಾಡುತ್ತಿದ್ದ ಕೆಲ ಶಾಸಕರುಗಳಿಗೆ ಪಕ್ಷದ ವತಿಯಿಂದ ನೋಟೀಸ್ ಜಾರಿ ಮಾಡಿ ಕಡಿವಾಣ ಹಾಕಿದ್ದರು. ಒಳಗೊಳಗೆ ಯಾವುದೇ ರೀತಿಯ ಕುಮಕ್ಕು ಕೊಟ್ಟಿದ್ದರೂ ಬಹಿರಂಗವಾಗಿ ಹೇಳಿಕೆ ನೀಡಿ, ಪಕ್ಷಕ್ಕೆ ಹಾನಿ ಮಾಡುವವರ ವಿರುದ್ಧ ಡಿ.ಕೆ.ಶಿವಕುಮಾರ್ ನಿಷ್ಠೂರವಾಗಿ ಗದರುತ್ತಿದ್ದರು.
ಆದರೆ ಇದೇ ರೀತಿಯ ನಿಯಂತ್ರಣ ಸಿದ್ದರಾಮಯ್ಯ ಅವರಿಂದ ಕಂಡು ಬರಲಿಲ್ಲ. ಕೆ.ಎನ್.ರಾಜಣ್ಣ, ಡಿ.ಕೆ.ಶಿವಕುಮಾರ್ ಅವರ ವಿರುದ್ಧ ವ್ಯಕ್ತಿಗತವಾಗಿ ಟೀಕೆ ಮಾಡಿ, ಸಡ್ಡು ಹೊಡೆದಾಗಲೂ ಸಿದ್ದರಾಮಯ್ಯ ಒಂದು ಮಾತನ್ನು ಆಡಲಿಲ್ಲ. ಒಂದು ಹಂತದಲ್ಲಿ ರಾಜಣ್ಣ ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಡಿ.ಕೆ.ಶಿವಕುಮಾರ್, ತಾವಾಗಿಯೇ ರಾಜಣ್ಣ ಅವರ ಕಚೇರಿ ಬಾಗಿಲಿಗೆ ಹೋದಾಗಲು ಕೈಗೆ ಸಿಗದೇ ತಪ್ಪಿಸಿಕೊಳ್ಳುವ ಮೂಲಕ ಉದ್ಧಟತನ ಪ್ರದರ್ಶಿಸಿದರು.
ಡಿ.ಕೆ.ಶಿವಕುಮಾರ್ ಅವರು ಹಲವಾರು ಬಾರಿ ರಾಜಣ್ಣ ಹೇಳಿಕೆಗಳ ಕುರಿತು ಅವುಡುಗಚ್ಚಿ, ತಾಳೆಯಿಂದಲೇ ಮೃದುವಾದ ಪ್ರತಿಕ್ರಿಯೆಗಳನ್ನು ನೀಡಿ ತೇಲಿಸುವ ಪ್ರಯತ್ನ ಮಾಡುತ್ತಿದ್ದರು. ಆದರೆ ಸಿದ್ದರಾಮಯ್ಯ ಅವರ ಬೆಂಬಲ ಇದೆ ಎಂಬ ಕಾರಣಕ್ಕಾಗಿ ರಾಜಣ್ಣ ಕೆಲವು ಸಂದರ್ಭಗಳಲ್ಲಿ ಗಡಿ ಮೀರಿ ಮಾತನಾಡಿದ್ದೂ ಇದೆ.
ಇದಕ್ಕೂ ಮೊದಲು 2019ರಲ್ಲಿ ಜೆಡಿಎಸ್-ಬಿಜೆಪಿ ಸಮಿಶ್ರ ಸರ್ಕಾರವಿದ್ದಾಗ ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿದ್ದರು. ಇದೇ ರಾಜಣ್ಣ, ಪರಮೇಶ್ವರ್ ವಿರುದ್ಧ ಜೀರೊ ಟ್ರಾಫಿಕ್ ಸಚಿವ ಎಂಬ ವ್ಯಂಗ್ಯದ ಜೊತೆಗೆ ಅವಾಚ್ಯ ಶಬ್ದಗಳನ್ನು ಬಳಿಸಿ ನಿಂದಿಸಿದ್ದರು. ಅದೇ ಸಂದರ್ಭದಲ್ಲಿ ಸಮಿಶ್ರ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಕಾಂಗ್ರೆಸ್ ಶಾಸಕ ರೋಷನ್ ಬೇಗ್, ಕೆಲ ವಿಚಾರಗಳಿಗೆ ಟೀಕೆ ಮಾಡಿದ್ದರು.
ಸಿದ್ದರಾಮಯ್ಯ ಅವರು ಹೈಕಮಾಂಡ್ ಮೇಲೆ ಪ್ರಭಾವ ಬೀರಿ ರೋಷನ್ ಬೇಗ್ ಅವರನ್ನು ಪಕ್ಷದಿಂದ ಹೊರ ಹಾಕಿಸುವಲ್ಲಿ ಯಶಸ್ವಿಯಾಗಿದ್ದರು. ಅದೇ ಪ್ರಭಾವದಲ್ಲಿ ರಾಜಣ್ಣ ಅವರನ್ನು ರಕ್ಷಣೆ ಮಾಡಿಕೊಂಡಿದ್ದರು.
ಈವರೆಗೂ ಪಕ್ಷದಲ್ಲಿ ಮೂಲ ಕಾಂಗ್ರೆಸಿಗರು ಹೇಳಿಕೆ ನೀಡುವಾಗ ಅಳೆದು-ತೂಗಿ ಮಾತನಾಡುತ್ತಾರೆ. ಆದರೆ ವಲಸೆ ಬಂದ ನಾಯಕರು ಎಗ್ಗಿಲ್ಲದೆ ತಮಗೆ ತೋಚಿದ್ದನ್ನೇ ಹೇಳಿ ಗೊಂದಲ ಮೂಡಿಸುತ್ತಿದ್ದಾರೆ ಎಂಬ ಆರೋಪಗಳಿವೆ. ವೈಯಕ್ತಿಕ ಹಿತಾಸಕ್ತಿಗಷ್ಟೇ ಆದ್ಯತೆ ನೀಡುವ ಹೇಳಿಕೆಗಳು ಪಕ್ಷದ ಮೇಲೆ ಭಾರಿ ಪರಿಣಾಮ ಬೀರಿರುವ ಹಲವಾರು ಸಂದರ್ಭಗಳಿವೆ.2013 ರಿಂದ 2018ರ ನಡುವೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ತಮದೇ ಆದ ಪಟಾಲಮ್ ಅನ್ನು ಬೆಳೆಸಿಕೊಂಡಿದ್ದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬಂದಾಗ ಅದೇ ಪಟಾಲಮ್ ಮುಂದೆ ಬಂದು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕೆಂದು ಬಹಿರಂಗ ಹೇಳಿಕೆಗಳನ್ನು ನೀಡಲಾರಂಭಿಸಿತು.
ಮೂಲ ಕಾಂಗ್ರೆಸಿಗರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿ ತಮ ಪಾಡಿಗೆ ತಾವಿದ್ದಾಗ, ವಲಸಿಗ ನಾಯಕರು ಮಾತ್ರ ಸಿದ್ದರಾಮಯ್ಯ ಅವರ ಪರವಾಗಿ ಜೋರು ಧ್ವನಿ ಮಾಡುತ್ತಿದ್ದರು. ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಕಾಂಗ್ರೆಸ್ ನಿರ್ನಾಮವಾಗಲಿದೆ. ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಬಿಂಬಿಸಿ ಜನ ಮಾನಸದಲ್ಲಿ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನ ನೂರ್ಮಡಿಸುವಂತೆ ಮಾಡಿದ್ದರು.
ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ, 2023ಕ್ಕಷ್ಟೇ ಅಲ್ಲ 2028ಕ್ಕೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿ ಎಂದು ಪ್ರತಿಪಾದಿಸಿದರು. ಜಮೀರ್ ಅಹಮದ್ ಖಾನ್ ಅವರು ಹಲವು ಬಾರಿ ಹೇಳಿಕೆ ನೀಡಿ, ಸಿದ್ದರಾಮಯ್ಯ ಹುಲಿ ಇದ್ದಂತೆ, 5 ವರ್ಷ ಅವರನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು.
ಆಗ ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಇಲಾಖೆಯ ಕೆಲಸ ಮಾಡಿದ್ದಕ್ಕಿಂತಲೂ ಹೆಚ್ಚಾಗಿ ಸಿದ್ದರಾಮಯ್ಯ ಅವರ ಪರವಾಗಿ ವಕಾಲತ್ತು ವಹಿಸುತ್ತಿದ್ದರು. ಅಷ್ಟಕ್ಕೇ ನಿಲ್ಲದೇ ಡಿ.ಕೆ.ಶಿವಕುಮಾರ್ ಅವರ ನಾಯಕತ್ವಕ್ಕೂ ಸವಾಲು ಎಸೆಯುವಂತೆ, ಒಬ್ಬರಿಗೆ ಒಂದೇ ಹುದ್ದೆ ಎಂಬ ಸಿದ್ಧಾಂತದ ಅಡಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡಬೇಕು ಎಂದು ವಾದಿಸುತ್ತಿದ್ದರು.
ಲೋಕಸಭೆ ಚುನಾವಣೆಗೂ ಮುನ್ನ ಜಾತಿಗೆ ಒಬ್ಬರಂತೆ ಉಪ ಮುಖ್ಯಮಂತ್ರಿ ಮಾಡಬೇಕು. ಕನಿಷ್ಠ ದಲಿತ, ಲಿಂಗಾಯತ, ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ಪಂಗಡದ ಒಬ್ಬ ನಾಯಕನಿಗೆ ಉಪ ಮುಖ್ಯಮಂತ್ರಿಯಾಗಲು ಅವಕಾಶ ನೀಡಬೇಕೆಂದು ಹೈಕಮಾಂಡ್‌ಗೆ ಒತ್ತಾಯಿಸಿದ್ದರು. ಇದು ಒಂದು ಹಂತದಲ್ಲಿ ಭಾರಿ ಗೊಂದಲವನ್ನು ಸೃಷ್ಟಿಸಿತ್ತು.
ಬಸವರಾಜರಾಯರೆಡ್ಡಿ ಅವರು, ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವುದು ಅಷ್ಟು ಸುಲಭವಲ್ಲ, ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಅವರನ್ನು ಪದಚ್ಯುತಗೊಳಿಸಬೇಕಾದರೂ ಶಾಸಕಾಂಗ ಸಭೆಯಲ್ಲೇ ನಿರ್ಣಯವಾಗಬೇಕೆಂದು ಪದೇ ಪದೇ ಸವಾಲಿನ ಧಾಟಿಯಲ್ಲಿ ಮಾತನಾಡುತ್ತಿದ್ದರು.
ಈ ಹೇಳಿಕೆಗಳು ಡಿ.ಕೆ.ಶಿವಕುಮಾರ್ ಅವರ ಕೋಪವನ್ನು ಹೆಚ್ಚಿಸುತ್ತಿದ್ದರೂ ತಾಳೆಯಿಂದಲೇ ಎಲ್ಲದ್ದಕ್ಕೂ ಮೌನವಾಗಿ ಪ್ರತಿಕ್ರಿಯಿಸುತ್ತಿದ್ದದ್ದು ಕಂಡು ಬಂತು.ಹೊರಗೆ ಏನೂ ಮಾತನಾಡದೇ ಇದ್ದರೂ, ಒಳಗೆ ಡಿ.ಕೆ.ಶಿವಕುಮಾರ್ ತಮದೇ ಆದ ಕಾರ್ಯತಂತ್ರ ರೂಪಿಸುತ್ತಿದ್ದರು. ಸಿದ್ದರಾಮಯ್ಯ ಅವರ ಬಣ ಎಷ್ಟೆಲ್ಲಾ ಪ್ರತ್ಯೇಕ ಸಭೆಗಳನ್ನು ನಡೆಸಿ ಚರ್ಚೆ ಮಾಡಿದ್ದರೂ, ಅದು ಫಲ ನೀಡಲಿಲ್ಲ. ಡಿ.ಕೆ.ಶಿವಕುಮಾರ್ ಅವರ ತಣ್ಣನೆಯ ಕಾರ್ಯತಂತ್ರ ಕೊನೆಗೂ ಯಶಸ್ವಿಯಾಗಿದೆ.
ಸಿದ್ದರಾಮಯ್ಯ ಅವರು ನಿನ್ನೆ ನೀಡಿದ ರಾಜೀನಾಮೆಯನ್ನು ರಾಜ್ಯಪಾಲರು ಇಂದು ಅಂಗೀಕರಿಸಿದ್ದಾರೆ. ಸಿದ್ದರಾಮಯ್ಯ ಅವರ ಆಡಳಿತದ ಯುಗಾಂತ್ಯವಾಗಿದೆ. ಕಾಂಗ್ರೆಸ್‌ಗೆ ಬಂದು 20 ವರ್ಷ ಕಳೆದಿದ್ದು ಅದರಲ್ಲಿ 17 ವರ್ಷ ಸಿದ್ದರಾಮಯ್ಯ ಒಂದಲ್ಲ ಒಂದು ಅಧಿಕಾರದಲಿದ್ದರು. ಮುಂದೆ ಅವರಿಗೆ ಯಾವ ರೀತಿಯ ಸ್ಥಾನಮಾನ ನೀಡಲಾಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಈವರೆಗೂ ಪ್ರತಿಯೊಂದಕ್ಕೂ ಸಿದ್ದರಾಮಯ್ಯ ಅವರನ್ನು ಓಲೈಕೆ ಮಾಡುತ್ತಿದ್ದ ಪಟಾಲಮ್ ಮುಂದೆ ಯಾವ ನಡೆ ಅನುಸರಿಸುತ್ತದೆ ಎಂಬುದನ್ನೂ ಕೂಡ ಕಾದು ನೋಡಬೇಕಿದೆ.
