Homeರಾಜಕೀಯಅಧಿಕಾರ ಬೇಕಾಗಿರೋರು ಡಿಕೆಶಿ ಜತೆ ಹೋಗಿ, ಪಕ್ಷ ಕಟ್ಟೋರು ನನ್ನ ಜೊತೆ ಬನ್ನಿ : ಹರಿಪ್ರಸಾದ್‌...

ಅಧಿಕಾರ ಬೇಕಾಗಿರೋರು ಡಿಕೆಶಿ ಜತೆ ಹೋಗಿ, ಪಕ್ಷ ಕಟ್ಟೋರು ನನ್ನ ಜೊತೆ ಬನ್ನಿ : ಹರಿಪ್ರಸಾದ್‌ ಸ್ಫೋಟಕ ಹೇಳಿ

Those who want power should go with DK, those who want to build a party should come with me: Hariprasad makes explosive statement

ಬೆಂಗಳೂರು, ಜೂ. 4- ಅಧಿಕಾರ ಸ್ಥಾನಮಾನ ಬೇಕಾದವರು ಡಿ.ಕೆ.ಶಿವಕುಮಾರ್‌ ಅವರ ಜೊತೆಗೆ ಹೋಗಿ. ಕಾಂಗ್ರೆಸ್‌‍ ಅನ್ನು ಸದೃಢವಾಗಿ ಕಟ್ಟಲು ಬಯಸುವವರು ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ್‌ ಖರ್ಗೆ ಅವರ ಕೈ ಬಲ ಪಡಿಸುವವರು ನನ್ನ ಜೊತೆಗೆ ಬನ್ನಿ ಎಂದು ಕೆಪಿಸಿಸಿಯ ನಿಯೋಜಿತ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಪಕ್ಷದ ನೂತನ ಸಾರಥಿಯ ಹೇಳಿಕೆ ಸಂಚಲನ ಮೂಡಿಸಿದೆ. ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಅವರು ಹೋರಾಟ ಮಾಡುತ್ತಿದ್ದಾರೆ. ನಾವು ಕೂಡ ಅದೇ ರೀತಿ ಬೀದಿಗಿಳಿದು ಹೋರಾಟ ಮಾಡಬೇಕು ಎಂದಿದ್ದಾರೆ.

ಈಗಾಗಲೇ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಅಧಿಕಾರ ಸ್ಥಾನಮಾನ ಬೇಕಾದರೆ, ಡಿ.ಕೆ.ಶಿವಕುಮಾರ್‌ ಜೊತೆ ಹೋಗಿ, ಪಕ್ಷವನ್ನು ಬಲಗೊಳಿಸವಬೇಕು ಎಂಬುವರು ನನ್ನ ಜೊತೆ ಬನ್ನಿ, ತಮ ಮಾತುಗಳಲ್ಲಿ ಯಾವುದೇ ಬಣ್ಣಗಳಿಲ್ಲ. ಸರ್ಕಾರ ಮತ್ತು ಸಂಘಟನೆ ನಡುವೆ ಜವಾಬ್ದಾರಿ ಹಂಚಿಕೊಂಡು ಕೆಲಸ ಮಾಡುತ್ತೇವೆ. ಯಾವುದೇ ಸಂದರ್ಭದಲ್ಲಿ ತಾವು ಕಾರ್ಯಕರ್ತರ ಜೊತೆಗಿರುವುದಾಗಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ತಮ ಸಾಮಾಜಿಕ ಜಾಲತಾಣದಲ್ಲಿ ಹರಿಪ್ರಸಾದ್‌ ಅವರು, ಕರ್ನಾಟಕ ಪ್ರದೇಶ ಕಾಂಗ್ರೆಸ್‌‍ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ನೇಮಿಸಿದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ನನ್ನ ಮೇಲೆ ಪ್ರೀತಿ, ವಿಶ್ವಾಸ, ನಂಬಿಕೆ ಇರಿಸಿ ಜವಾಬ್ದಾರಿ, ವಹಿಸಿದ ನನ್ನ ಅಚ್ಚುಮೆಚ್ಚಿನ ನಾಯಕಿ ಸೋನಿಯಾ ಗಾಂಧಿಯವರಿಗೆ, ವಿರೋಧ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ ಅವರಿಗೆ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಕೆಪಿಸಿಸಿ ರಾಜ್ಯ ಉಸ್ತುವಾರಿ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್‌‍ನ ಕೇಂದ್ರ ನಾಯಕತ್ವದ ಈ ನಿರ್ಧಾರವು ಕೇವಲ ಒಬ್ಬ ವ್ಯಕ್ತಿಗೆ ನೀಡಿರುವ ಹುದ್ದೆಯಲ್ಲ. ಇದು ಕಾಂಗ್ರೆಸ್‌‍ ಪಕ್ಷದ ಮೂಲ ಸಿದ್ಧಾಂತಗಳಾದ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಪ್ರಜಾಪ್ರಭುತ್ವ, ಸಂವಿಧಾನವಾದ ಮತ್ತು ದುರ್ಬಲ ವರ್ಗಗಳ ಸಬಲೀಕರಣದ ಪರವಾಗಿ ನೀಡಿರುವ ಸ್ಪಷ್ಟ ಸಂದೇಶವಾಗಿದೆ ಎಂದು ನಾನು ಭಾವಿಸುತ್ತೇನೆ. ದೀರ್ಘಕಾಲದಿಂದ ಪಕ್ಷದ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿರುವ ನಾನು ಯಾವುದೇ ಅಧಿಕಾರದ ಹುದ್ದೆಗಳಿಗಾಗಿ ರಾಜಕೀಯ ಮಾಡದೇ, ನನ್ನ ಜೀವನ ಪೂರ್ತಿ ಕಾಂಗ್ರೆಸ್‌‍ ತತ್ವಗಳ ಜಾರಿಗೆ ಮೀಸಲಿಟ್ಟಿದ್ದೇನೆ.

ಅಧಿಕಾರಕ್ಕಿಂತ ಸಿದ್ಧಾಂತ ದೊಡ್ಡದು, ಹುದ್ದೆಗಿಂತ ಜನರ ಹಿತ ಮುಖ್ಯ ಎಂಬ ನಿಲುವಿನಂತೆ ನಾನು ರಾಜಕೀಯ ಬದುಕನ್ನು ಕಟ್ಟಿಕೊಂಡಿದ್ದೇನೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಎಂಬ ಪಕ್ಷ ಕಟ್ಟುವ ಕಾಯಕವನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ.

ದೇಶದಲ್ಲಿ ದ್ವೇಷದ ರಾಜಕಾರಣ, ಧರ್ಮದ ಹೆಸರಿನ ಧ್ರುವೀಕರಣ ಮತ್ತು ಸಂವಿಧಾನ ವಿರೋಧಿ ಪ್ರವೃತ್ತಿಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಸಾಮಾಜಿಕ ಸಾಮರಸ್ಯ ಮತ್ತು ಜಾತ್ಯತೀತ ಮೌಲ್ಯಗಳನ್ನು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿರುವ ನನಗೆ, ದೇಶದ ದುರಿತ ಕಾಲದಲ್ಲಿ ಕಾಂಗ್ರೆಸ್‌‍ ರಾಜ್ಯ ಘಟಕದ ನೇತೃತ್ವ ಸಿಕ್ಕಿರುವುದು ಹೊಸ ಜವಾಬ್ದಾರಿ, ಸವಾಲು ನೀಡಿದಂತಾಗಿದೆ. ಈ ಸವಾಲು ಮತ್ತು ಜವಾಬ್ದಾರಿಯನ್ನು ಪಕ್ಷದ ಸೈದ್ಧಾಂತಿಕ ಕಾರ್ಯಕರ್ತರ ಬಲದಿಂದ ಯಶಸ್ವಿಯಾಗಿ ಪೂರೈಸುತ್ತೇನೆ ಎಂಬ ಅಚಲ ನಂಬಿಕೆ ನನಗಿದೆ ಎಂದಿದ್ದಾರೆ.

ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಜನರ ಆಶೋತ್ತರಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಈ ನಿಟ್ಟಿನಲ್ಲೇ ನಾನು ಕರ್ನಾಟಕದಲ್ಲಿ ಕಾಂಗ್ರೆಸ್‌‍ ಪಕ್ಷವನ್ನು ಮತ್ತೆ ಬೂತ್‌ ಮಟ್ಟದಿಂದ ಸಂಘಟಿಸಿ, ಸೈದ್ಧಾಂತಿಕವಾಗಿ ಬಲಪಡಿಸುವುದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಸಮರ್ಥ ಸೈದ್ಧಾಂತಿಕ ನಾಯಕರು, ಕಾರ್ಯಕರ್ತರು ಈ ನಿಟ್ಟಿನಲ್ಲಿ ನನ್ನ ಕೈಜೋಡಿಸಲಿದ್ದಾರೆ. ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತುವವರು, ಕೋಮುವಾದದ ವಿರುದ್ಧ ಹೋರಾಡುವವರು, ಸಂವಿಧಾನವನ್ನು ರಕ್ಷಿಸುವ ಹೋರಾಟಗಾರರು ಮತ್ತು ಪ್ರಗತಿಪರ ಚಿಂತನೆ ಹೊಂದಿರುವ ಕೋಟ್ಯಂತರ ಕಾಂಗ್ರೆಸ್ಸೇತರ ಕಾರ್ಯಕರ್ತರೂ ನಮ ದೇಶದ ಈ ದುರಿತ ಕಾಲದಲ್ಲಿ ನಮೊಂದಿಗೆ ಕೈ ಜೋಡಿಸಬೇಕಿದೆ ಎಂದಿದ್ದಾರೆ.

ಕಾಂಗ್ರೆಸ್ಸಿಗರಾದ ನಾವೂ ಕೂಡಾ ಕಾಂಗ್ರೆಸ್‌‍ ಮತ್ತು ಕಾಂಗ್ರೆಸ್ಸೇತರ ಜಾತ್ಯತೀತ ಯುವ ಸಮುದಾಯವನ್ನು ಒಟ್ಟುಗೂಡಿಸಿಕೊಂಡು ಹೋಗಬೇಕಿದೆ ಎಂಬ ಅರಿವು ನನಗಿದೆ. ಸಂವಿಧಾನವೇ ನಮ ದಾರಿ, ಸಾಮಾಜಿಕ ನ್ಯಾಯವೇ ನಮ ಗುರಿ, ಜಾತ್ಯತೀತತೆಯೇ ನಮ ಶಕ್ತಿ ಎಂಬ ಕಾಂಗ್ರೆಸ್‌‍ನ ಮೂಲ ಸಂದೇಶವನ್ನು ಬಲಪಡಿಸುವ ಈ ನಿರ್ಧಾರದ ಜೊತೆ ಕಾಂಗ್ರೆಸ್‌‍ ಕಾರ್ಯಕರ್ತರು, ನಾಯಕರು, ಜಾತ್ಯತೀತ ಯುವ ಸಮುದಾಯ, ಕಾಂಗ್ರೆಸ್ಸೇತರ ಜಾತ್ಯತೀತ ಪಕ್ಷ, ಸಂಘಟನೆಗಳು ನನ್ನ ಜೊತೆ ಕೈ ಜೋಡಿಸುತ್ತವೆ ಎಂಬ ಭರವಸೆಯಲ್ಲಿ ಎಐಸಿಸಿ ನೀಡಿದ ಜವಾಬ್ದಾರಿಯನ್ನು ಒಪ್ಪಿ ನಿರ್ವಹಿಸುತ್ತೇನೆ ಎಂದು ತಿಳಿಸಿದ್ದಾರೆ.

RELATED ARTICLES

Latest News