Homeರಾಜ್ಯಒಂದೇ ಕುಟುಂಬದ 6 ಜನರ ಕಗ್ಗೊಲೆ ಪ್ರಕರಣದಲ್ಲಿ 10 ಮಂದಿ ಬಂಧನ

ಒಂದೇ ಕುಟುಂಬದ 6 ಜನರ ಕಗ್ಗೊಲೆ ಪ್ರಕರಣದಲ್ಲಿ 10 ಮಂದಿ ಬಂಧನ

10 arrested in the case of the murder of 6 members of a family

ಬೆಂಗಳೂರು,ಮೇ 30- ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಆರು ಮಂದಿಯನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಹತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಉತ್ತರ ವಲಯದ ಐಜಿಪಿ ಸಂದೀಪ್‌ಪಾಟಿಲ್‌ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆ ಚಡಚಣ ತಾಲ್ಲೂಕಿನ ಗೋವಿಂದ ಪುರ ದಲ್ಲಿ ಸಂಜೆ ನಡೆದ ಭೀಕರ ಆರು ಮಂದಿಯ ಹತ್ಯಾಕಾಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಅವರು ಈ ಸಂಜೆಯೊಂದಿಗೆ ಮಾತನಾಡಿ, ಮಹರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ್‌ ತಾಲ್ಲೂಕಿನ ಕೂಡ್ಲಾ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದೇವೆ. ಘಟನೆಯಲ್ಲಿ ಹಂತಕರಿಂದ ಇಬ್ಬರು ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಭೀಮಾತೀರ ಎಂಬ ಹೆಸರು ಕೇಳಿದರೆ ಮೈ ನಡುಕ ಉಂಟಾಗುತ್ತದೆ. ಏಕೆಂದರೆ ಆ ಸ್ಥಳದಲ್ಲಿ ಎಷ್ಟೋ ಜನರ ನೆತ್ತರು ಚೆಲ್ಲಿದೆ. ರಕ್ತ ಸಂಬಂಧಿಯಾಗಲೀ, ನೆರೆಹೊರೆಯರಾಗಲೀ, ಸ್ನೇಹಿತರಾಗಲೀ ತಪ್ಪು ಮಾಡಿದ್ದಾರೆಂದು ಗೊತ್ತಾದರೆ ಸೇಡಿಗೆ ಸೇಡು ಎಂಬಂತೆ ಹಲ್ಲು ಮಸಿಯುತ್ತಾರೆ. ಅಲ್ಲದೇ ಕೊಲೆಗೆ ಕೊಲೆ ಎಂಬ ದ್ವೇಷವಿಟ್ಟುಕೊಂಡು ಹೆಣಗಳನ್ನು ಉರುಳಿಸಿದವರಿದ್ದಾರೆ. ಅಂತಹ ಸ್ಥಳದಲ್ಲೇ ಈಗ ಮತ್ತೊಂದು ಹತ್ಯಾಕಾಂಡ ನಡೆದು ಹೋಗಿದ್ದು ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ.

ಸುಮಾರು 25 ಎಕರೆ ವಿವಾದಿತ ಜಮೀನು ಎರಡೂ ಕುಟುಂಬದ ಮಧ್ಯೆ ಕತ್ತಿ ಮಸೆಯುವಂತೆ ಮಾಡಿತ್ತು. ಅಲ್ಲದೇ ಗೊಳಗಿ ಕುಟುಂಬದ ಸಂಬಂಧಿಯಿಂದ ವಿರೋಧದ ಮಧ್ಯೆ ನಿರಾಳೆ ಕುಟುಂಬದವರು ಜಮೀನು ಖರೀದಿ ಮಾಡಿದ್ದರು.

ಕೃಷಿ ಚಟುವಟಿಕೆಗಾಗಿ ಸ್ವಚ್ಛಗೊಳಿಸಲು ನಿನ್ನೆ ಜಮೀನಿನಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ ನಿರಾಳೆ, ಈತನ ಸಹೋದರರಾದ ದುಂಡಪ್ಪ ನಿರಾಳೆ, ಶಿವಪುತ್ರಪ್ಪ ನಿರಾಳೆ, ಸಂಬಂಧಿಕರಾದ ರಾಹುಲ ನಿರಾಳೆ, ಸಮರ್ಥ ನಿರಾಳೆ ಹಾಗೂ ಇನ್ನಿಬ್ಬರು ಸಂಬಂಧಿಕರು ಕೆಲಸ ಮಾಡುತ್ತಿದ್ದರು.ದುರಾದೃಷ್ಟವೆಂಬಂತೆ ಜೆಸಿಬಿ ಚಾಲಕ ಶಬ್ಬೀರ್‌ ಕೂಲಿ ಕೆಲಸಕ್ಕೆ ಬಂದಿದ್ದರು.

ಜಮೀನಿನಲ್ಲಿ ಒಂದೇ ಕಡೆ ಇವರೆಲ್ಲರೂ ಇರುವ ವಿಷಯ ತಿಳಿದು ರಣರಾಕ್ಷಸರಾಗಿದ್ದ ಅಪ್ಪುಗೌಡ ತನ್ನ ಹತ್ತೆರಡು ಮಂದಿ ಸಹಚರರೊಂದಿಗೆ ಮಚ್ಚುಗಳನ್ನು ಹಾಗೂ ಡಬಲ್‌ ಬ್ಯಾರಲ್‌ ಬಂದೂಕನ್ನು ತೆಗೆದುಕೊಂಡು ಸ್ಥಳಕ್ಕೆ ಬಂದು ಎಲ್ಲರನ್ನೂ ಸುತ್ತುವರೆದು ಚೇತನ ನಿರಾಳೆ ಕುಟುಂಬದ ಮೇಲೆ ಮುಗಿ ಬಿದ್ದಿದ್ದಾರೆ.

ಜಮೀನಿನಲ್ಲಿ ಎಲ್ಲರನ್ನೂ ಅಟ್ಟಾಡಿಸಿಕೊಂಡು ಗುಂಡು ಹೊಡೆದು ನಂತರ ಮಚ್ಚಿನಿಂದ ಮನಬಂದಂತೆ ಕೊಚ್ಚಿ ಸಾಯಿಸಿದ್ದಾರೆ. ಹಂತಕರ ಕೆಂಗಣ್ಣಿಗೆ ಗುರಿಯಾಗಿ ಕೂಲಿ ಕೆಲಸಕ್ಕೆ ಬಂದಿದ್ದ ಶಬ್ಬೀರ್‌ ಕೂಡ ಹತ್ಯೆಯಾಗಿರುವುದ ದುರ್ದೈವ.

ಮೊದಲು ಜಮೀನಿನಲ್ಲಿದ್ದ ಆರು ಮಂದಿಯ ದೇಹಕ್ಕೆ ಗುಂಡು ಹಾರಿಸಿದ್ದು, ಅವರೆಲ್ಲರೂ ನೆಲಕ್ಕೆ ಬೀಳುತ್ತಿದ್ದಂತೆ ಮಚ್ಚುಗಳಿಂದ ಕೊಚ್ಚಿ ಹಾಕಿದ್ದಾರೆ. ಒಂದೇ ಜಾಗದಲ್ಲಿ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಆರು ಮಂದಿಯ ರುಂಡ ಚೆಂಡಾಡಿದ್ದಾರೆ.ಆರು ಮಂದಿಯ ಮೃತದೇಹಗಳನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹಂತಕ ಅಪ್ಪುಗೌಡ ಭೀಮಾತೀರದ ಹತ್ಯಾಕಾಂಡದಲ್ಲಿ ಹತನಾಗಿರುವ ಮಾಣಕಪ್ಪ ಮಾಸ್ತರ್‌ರ ಸಂಬಂಧಿ ಈತ. ಹೀಗಾಗಿಯೇ ಏನೋ ಹೊಂಚು ಹಾಕಿ ಸಂಚು ರೂಪಿಸಿದ್ದಾನೆ. ಒಂದೇ ದಿನ, ಒಂದೇ ಜಾಗದಲ್ಲಿ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದ್ದಾನೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಹಿರಿಯ ಪೊಲೀಸ್‌‍ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳದಲ್ಲಿದ್ದವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಚಡಚಣ ಠಾಣೆ ಪೊಲೀಸರು ಎಸ್ಪಿ ನೇತೃತ್ವದಲ್ಲಿ ತನಿಖೆ ಶುರು ಮಾಡಿದ್ದಾರೆ. ಸ್ಥಳಕ್ಕೆ ಸೋಕೋ ತಂಡ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬಂದೋಬಸ್ತ್‌: ಸ್ಥಳದಲ್ಲಿ ಬಿಗುವಿನ ವಾತಾವರಣ ಇದ್ದು, ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ಹಿರಿಯ ಪೊಲೀಸ್‌‍ ಅಧಿಕಾರಿಗಳು ಅಲ್ಲಿ ಮೊಕ್ಕಾಂ ಹೂಡಿದ್ದಾರೆ. ಮೂರು ಡಿಎಆರ್‌ ಹಾಗೂ ನಾಲ್ಕು ಕೆಎಸ್‌‍ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

RELATED ARTICLES

Latest News