Homeರಾಜ್ಯಡಿಕೆಶಿ ಪಟ್ಟಾಭಿಷೇಕಕ್ಕೆ ಮಹೂರ್ತ ಫಿಕ್ಸ್, ಸರಳ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕಾರ

ಡಿಕೆಶಿ ಪಟ್ಟಾಭಿಷೇಕಕ್ಕೆ ಮಹೂರ್ತ ಫಿಕ್ಸ್, ಸರಳ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕಾರ

Swearing-in of D.K. Shivakumar as Karnataka CM in Bengaluru on June 3

ಬೆಂಗಳೂರು, ಮೇ 30- ನೂತನ ಮುಖ್ಯಮಂತ್ರಿ ಯಾಗಿ ಡಿ.ಕೆ.ಶಿವಕುಮಾರ್‌ ಅವರು ಒಂಬತ್ತು ಮಂದಿ ಸಚಿವರೊಂದಿಗೆ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ವಿಧಾನಸೌಧದಲ್ಲಿ ಸಂಜೆ 4 ಗಂಟೆಗೆ ಕಾಂಗ್ರೆಸ್‌‍ ಶಾಸಕಾಂಗ ಸಭೆ ನಡೆಯಲಿದೆ. ಅಲ್ಲಿ ಎಐಸಿಸಿ ವೀಕ್ಷಕರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲ ಅವರ ಸಮುಖದಲ್ಲಿ ಸಭೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್‌ ಅವರ ಹೆಸರನ್ನು ಮುಖ್ಯ ಮಂತ್ರಿ ಹುದ್ದೆಗೆ ಪ್ರಸ್ತಾಪ ಮಾಡಲಿದ್ದಾರೆ. ಮಾಜಿ ಸಚಿವರಾದ ಡಾ.ಜಿ.ಪರಮೇಶ್ವರ್‌, ಕೆ.ಹೆಚ್‌.ಮುನಿಯಪ್ಪ ಮತ್ತು ಎಂ.ಬಿ.ಪಾಟೀಲ್‌ ಅವರು ಅನುಮೋದಿಸಲಿದ್ದಾರೆ ಎಂದು ಹೇಳಲಾಗಿದೆ.

ನಂತರ ಸರ್ಕಾರ ರಚನೆ ಪ್ರಕ್ರಿಯೆಯನ್ನು ಡಿ.ಕೆ.ಶಿವಕುಮಾರ್‌ ಆರಂಭಿಸಲಿದ್ದಾರೆ. ನಾಳೆ ರಾಜ್ಯಪಾಲರ ಅಲಭ್ಯತೆ, ಸೋಮವಾರ ಐಪಿಎಲ್‌ ಸಂಭ್ರಮಾಚರಣೆಯ ಸಾಧ್ಯತೆಯಿದೆ. ಮಂಗಳವಾರ ಹೊರತು ಪಡಿಸಿ, ಬುಧವಾರ ಡಿ.ಕೆ.ಶಿವಕುಮಾರ್‌ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಕ್ರಿಯಾಶೀಲ ಹಾಗೂ ಹಿರಿಯರಾದ 9 ಮಂದಿ ಡಿ.ಕೆ.ಶಿವಕುಮಾರ್‌ರವರ ಸಂಪುಟದಲ್ಲಿ ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಹೆಚ್‌.ಕೆ.ಪಾಟೀಲ್‌, ಕೆ.ಜೆ.ಜಾರ್ಜ್‌, ಡಾ.ಜಿ.ಪರಮೇಶ್ವರ್‌, ರೂಪಕಲಾ ಶಶಿಧರ್‌, ಪ್ರಿಯಾಂಕ್‌ ಖರ್ಗೆ, ಎಂ.ಬಿ.ಪಾಟೀಲ್‌, ಚಲುವರಾಯಸ್ವಾಮಿ, ಬಿ.ನಾಗೇಂದ್ರ ಸೇರಿದಂತೆ ಯು.ಟಿ.ಖಾದರ್‌ ಅಥವಾ ಎನ್‌.ಎ.ಹ್ಯಾರಿಸ್‌‍ ಅವರಲ್ಲಿ ಒಬ್ಬರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರಳ ಕಾರ್ಯಕ್ರಮ ? :
ಈ ಮೊದಲು ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್‌ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಸಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ತಯಾರಿಗಳಾಗಿತ್ತು. ಆದರೆ ಬುಧವಾರ ಕಾರ್ಯಾಂಗದ ದಿನವಾಗಿರುವುದರಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಾಗಿ ಜನರಿಗೆ ಸಮಸ್ಯೆಯಾಗಲಿದೆ. ಮೊದಲ ದಿನವೇ ಸರ್ಕಾರಕ್ಕೆ ಜನ ಶಾಪ ಹಾಕುವಂತಾಗಬಾರದು ಎಂಬ ಕಾರಣಕ್ಕೆ ಸರಳವಾಗಿ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆದಿದೆ.

ವಿಧಾನಸೌಧದ ಮೆಟ್ಟಿಲು ಅಥವಾ ಲೋಕಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದ್ದು, ಒಂದು ಸಾವಿರ ಜನರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಇಂದು ಶಾಸಕಾಂಗ ಸಭೆಯ ಬಳಿಕ ಡಿ.ಕೆ.ಶಿವಕುಮಾರ್‌ ದೆಹಲಿಗೆ ತೆರಳಲಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ಕಾಂಗ್ರೆಸ್‌‍ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಇನ್ನಿತರ ಪ್ರಮುಖರನ್ನು ಆಹ್ವಾನಿಸಲಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಯ್ದ ವ್ಯಕ್ತಿಗಳಿಗಷ್ಟೇ ಆಹ್ವಾನ ನೀಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಬೃಹತ್‌ ಬಹಿರಂಗ ಸಮಾವೇಶ ನಡೆಸಿ ಡಿ.ಕೆ.ಶಿವಕುಮಾರ್‌ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ. ಪ್ರಸಕ್ತ ಸನ್ನೀವೇಶದಲ್ಲಿ ತ್ವರಿತವಾಗಿ ಪ್ರಮಾಣ ವಚನ ಸ್ವೀಕರಿಸಿ, ಸರ್ಕಾರ ರಚಿಸಲಿದ್ದಾರೆ ಎನ್ನಲಾಗಿದೆ.

ಚುರುಕಾದ ಡಿ.ಕೆ. :
ದೆಹಲಿ ಭೇಟಿಯಲ್ಲಿ ಮುಂದಿನ ಮುಖ್ಯಮಂತ್ರಿ ತಾವೇ ಎಂಬುದು ಖಚಿತವಾದ ಬಳಿಕ ಡಿ.ಕೆ.ಶಿವಕುಮಾರ್‌ ಮತ್ತಷ್ಟು ಚುರುಕಾಗಿದ್ದಾರೆ. ಬಿಡುವಿಲ್ಲದ ಕ್ರಿಯಾತಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ಲೋಕಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿ ಮಾಡಿ ಸಮಯ ಹಾಗೂ ಇತರ ವಿಚಾರಗಳ ಕುರಿತು ಚರ್ಚೆ ನಡೆಸಿದರು.

ಬಳಿಕ ನಾಗರಭಾವಿಯಲ್ಲಿರುವ ಅಜ್ಜಯ್ಯನ ಪೀಠಕ್ಕೆ ಭೇಟಿ ನೀಡಿ, ಆಶೀರ್ವಚನ ಪಡೆದರು. ಸಂಜೆ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ್ದು, ಇಂದು ಅಥವಾ ನಾಳೆ ದೆಹಲಿಗೆ ಭೇಟಿ ನೀಡಲಿದ್ದಾರೆ. ಕಳೆದ ಆರೇಳು ತಿಂಗಳಿನಿಂದ ತೀವ್ರ ಕುತೂಹಲ ಕೆರಳಿಸಿದ್ದ ಅಧಿಕಾರ ಹಂಚಿಕೆಯ ಪ್ರಹಸನಕ್ಕೆ ಇಂದು ತೆರೆ ಬೀಳಲಿದ್ದು, ನೂತನ ಮುಖ್ಯಮಂತ್ರಿ ಆಯ್ಕೆಯ ಬಳಿಕ ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗಳು ಮತ್ತಷ್ಟು ಚುರುಕು ಪಡೆಯಲಿವೆ.

RELATED ARTICLES

Latest News