ಬೆಂಗಳೂರು,ಮಾ.12- ರಾಜ್ಯಸರ್ಕಾರದ ವಿವಿಧ ಇಲಾಖೆಗಳಲ್ಲಿ 1,88,037 ಹುದ್ದೆಗಳು ಖಾಲಿ ಇವೆ ಎಂದು ಸಭಾನಾಯಕ ಎನ್.ಎಸ್.ಬೋಸರಾಜು ವಿಧಾನಪರಿಷತ್‌ಗೆ ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಶಶಿಲ್ ಜಿ ನಮೋಷಿ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಪರವಾಗಿ ಉತ್ತರಿಸಿದ ಸಚಿವರು, ರಾಜ್ಯಸರ್ಕಾರದ ವಿವಿಧ ಇಲಾಖೆಗಳಲ್ಲಿ 7,76,414 ಹುದ್ದೆಗಳು ಮಂಜೂರಾಗಿದ್ದು 4,91,533 ಹುದ್ದೆಗಳನ್ನು ತುಂಬಲಾಗಿದೆ ಎಂದರು.
ಗ್ರೂಪ್ ಸಿ ಹಾಗೂ ಗ್ರೂಪ್ ಡಿ ವೃಂದದ ಹುದ್ದೆಗಳಾದ ದತ್ತಾಂಶ ನಮೂದು ಸಹಾಯಕರು ಹಾಗೂ ವಾಹನ ಚಾಲಕರ 96,844 ಹುದ್ದೆಗಳನ್ನು ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗಿದೆ. ಎಲ್ಲಾ ಸೇರಿ ಒಟ್ಟು 5,88,377 ಹುದ್ದೆಗಳನ್ನು ತುಂಬಲಾಗಿದೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ವಿವಿಧ ನೇಮಕಾತಿ ಪ್ರಾಧಿಕಾರಿಗಳ ಮೂಲಕ ಇಲಾಖೆಗಳಲ್ಲಿ ಖಾಲಿ ಇರುವ 8,157 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. 3,081 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಅಲ್ಲದೆ, 56,432 ಹುದ್ದೆಗಳನ್ನು ತುಂಬುವ ಪ್ರಕ್ರಿಯೆಯನ್ನು 30 ದಿನಗಳಲ್ಲಿ ಪ್ರಾರಂಭಿಸುವಂತೆ ಫೆ.27 ರಂದು ಸರ್ಕಾರ ಎಲ್ಲಾ ಇಲಾಖೆ ಹಾಗೂ ನೇಮಕಾತಿ ಪ್ರಾಧಿಕಾರಿಗಳಿಗೆ ಸೂಚಿಸಿದೆ.
ನಿರುದ್ಯೋಗಿಗಳ ಹಿತದೃಷ್ಟಿಯಿಂದ ಫೆ.27 ರಂದು ಸರ್ಕಾರ ಆದೇಶ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸೂಚಿಸಿದೆ. ಉಚ್ಚ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು ಮುಂದಿನ ನೇಮಕಾತಿ ಮಾಡುವ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ 2 ಹಾಗೂ ಪರಿಶಿಷ್ಟ ಪಂಗಡಕ್ಕೆ 4 ಹುದ್ದೆಗಳನ್ನು ಕಾಯ್ದಿರಿಸಬೇಕೆಂದು ತಿಳಿಸಲಾಗಿದೆ ಎಂದರು.
ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ :
ಜನವರಿ 29 ರಂದು ಹೊರಡಿಸಿರುವ ಆದೇಶದಂತೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳ ಅನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ಆಯಾ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಯ ಕ್ರಮವಾಗಿ ಐದು ವರ್ಷಗಳ ಸಡಿಲಿಕೆಗೆ ಆದೇಶಿಸಲಾಗಿದೆ. ಇದು 2027 ರ ಡಿ.31 ರವರೆಗೆ ಜಾರಿಯಲ್ಲಿರುತ್ತದೆ. ಇದರಿಂದ ಎಲ್ಲಾ ಆಕಾಂಕ್ಷಿಗಳಿಗೆ ಸರ್ಕಾರಿ ನೌಕರಿಗೆ ಸೇರಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ 371 ಜೆ ಪ್ರಕಾರ ನೇಮಕಾತಿಯಲ್ಲಿ ಯಾವುದೇ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಸಚಿವ ಸಂಪುಟ ಉಪಸಮಿತಿ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
