Sunday, April 12, 2026
Homeರಾಜ್ಯನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿಯಾಗಿ 3 ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ದುರ್ಮರಣ

ನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿಯಾಗಿ 3 ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ದುರ್ಮರಣ

3 engineering students die after bike collides with lorry

ಬೆಂಗಳೂರು,ಮಾ.28- ನಿಂತಿದ್ದ ಲಾರಿಗೆ ಬುಲೆಟ್‌ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಮೃತಪಟ್ಟಿರುವ ದಾರುಣ ಘಟನೆ ಕುದೂರು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನಜಾವ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಗಳನ್ನು ಆಚಾರ್ಯ ಎಂಜಿನಿಯರಿಂಗ್‌ ಕಾಲೇಜಿನ ಅಭಿಷೇಕ್‌ (21) ಮತ್ತು ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜಿನ ಮನೋಜ್‌ (22) ಹಾಗೂ ನವೀನ್‌ (22) ಎಂದು ಗುರುತಿಸಲಾಗಿದೆ.

ಹಾಸನ ಜಿಲ್ಲೆಯ ನವೀನ್‌, ಬೇಲೂರಿನ ಅಭಿಷೇಕ್‌ ಹಾಗೂ ದಾವಣಗೆರೆಯ ಮನೋಜ್‌ ಸ್ನೇಹಿತರಾಗಿದ್ದು, ಕಾಲೇಜು ಹಾಸ್ಟೆಲ್‌ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಇವರುಗಳ ಪೈಕಿ ಒಬ್ಬ ಸ್ನೇಹಿತನ ಮನೆಗೆ ಒಂದೇ ಬುಲೆಟ್‌ ಬೈಕ್‌ನಲ್ಲಿ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಮೂವರು ಹೋಗುತ್ತಿದ್ದರು.

ಮರೂರು ಹ್ಯಾಂಡ್‌ಪೋಸ್ಟ್‌ ಬಳಿ ರಸ್ತೆ ಬದಿ ಲಾರಿ ನಿಲ್ಲಿಸಿರುವುದು ಗಮನಕ್ಕೆ ಬಂದಿಲ್ಲ. ಹಾಗಾಗಿ ಬೈಕ್‌ ಚಾಲನೆ ಮಾಡಿಕೊಂಡು ಹೋಗಿ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.ಡಿಕ್ಕಿಯ ರಭಸಕ್ಕೆ ಮೂವರು ಒಂದೊಂದು ಕಡೆ ಹಾರಿ ಬಿದ್ದು ಗಂಭೀರ ಗಾಯಗೊಂಡಿದ್ದು, ಅಭಿಷೇಕ್‌ ಹಾಗೂ ಮನೋಜ್‌ ಸ್ಥಳದಲ್ಲೇ ಸಾವನ್ನಪ್ಪಿದರೆ, ನವೀನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಸುದ್ದಿ ತಿಳಿದು ಕುದೂರು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮೃತ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ನಂತರ ಅವರ ಪೋಷಕರುಗಳಿಗೆ ವಿಷಯ ತಿಳಿಸಿದ್ದಾರೆ.

ಮೂವರು ವಿದ್ಯಾರ್ಥಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಕ್ಕಳ ಸಾವಿನ ಸುದ್ದಿ ತಿಳಿದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಟ್ರಕ್‌ಗೆ ಬೈಕ್‌ ಡಿಕ್ಕಿ : ಎಂಜಿನಿಯರ್‌ ವಿದ್ಯಾರ್ಥಿ ಸಾವು

ಬೆಂಗಳೂರು,ಮಾ.28-ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಎಂಜಿನಿಯರಿಂಗ್‌ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಕೆಎಸ್‌‍ ಲೇಔಟ್‌ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿ ಅಕ್ಷಜ್‌ಗೌಡ (21) ಮೃತಪಟ್ಟವರು.

ನೆಲಮಂಗಲ ಮೂಲದವರಾದ ಈತನ ಕುಟುಂಬ ನಗರದ ಉತ್ತರಹಳ್ಳಿಯಲ್ಲಿ ವಾಸವಾಗಿದೆ. ಅಕ್ಷಜ್‌ಗೌಡ ತನ್ನ ಸ್ನೇಹಿತ ಗಣೇಶ್‌ (22) ನನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಟೆಲ್‌ಗೆ ಹೋಗಿ ಊಟ ಮಾಡಿಕೊಂಡು ವಾಪಸ್‌‍ ಇಬ್ಬರು ಮನೆಗೆ ಬರುತ್ತಿದ್ದರು.ಮಾರ್ಗಮಧ್ಯೆ 11.15ರ ಸುಮಾರಿನಲ್ಲಿ ಉತ್ತರಹಳ್ಳಿ-ಕೆಂಗೇರಿ ಮುಖ್ಯರಸ್ತೆಯ ಹೋಟೆಲ್‌ವೊಂದರ ಮುಂಭಾಗ ಯಾವುದೇ ಇಂಡಿಕೇಟರ್‌ (ಬ್ಲಿಂಕಿಂಗ್‌ ಲೈಟ್‌) ಹಾಕದೆ ಅಪಾಯಕರ ರೀತಿಯಲ್ಲಿ ಇತರೆ ವಾಹನಗಳಿಗೆ ತೊಂದರೆಯಾಗುವಂತೆ ಟ್ರಕ್‌ ನಿಲ್ಲಿಸಿರುವುದು ಗಮನಕ್ಕೆ ಬಾರದೆ ಬೈಕ್‌ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಬೈಕ್‌ ಸಮೇತ ಬಿದ್ದು ಗಾಯಗೊಂಡರು.

ಅಕ್ಷಜ್‌ ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ಪೆಟ್ಟಾದರೇ, ಗಣೇಶ್‌ ಕಾಲು ಹಾಗೂ ಇನ್ನಿತರ ಭಾಗಗಳಿಗೆ ಗಾಯಗಳಾಗಿವೆ.ಇವರಿಬ್ಬರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ.ಗಣೇಶ್‌ನನ್ನು ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾರೆ.
ಅಕ್ಷಜ್‌ನನ್ನು ವೈದ್ಯರು ಪರೀಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ,ಹೆಚ್ಚಿನ ಚಿಕಿತ್ಸೆಗಾಗಿ ಬಿಜಿಎಸ್‌‍ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಅದರಂತೆ ಅವರನ್ನು ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಕೆಎಸ್‌‍ ಲೇಔಟ್‌ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅಪಘಾತ : ಸ್ಕೂಟರ್‌ ಸವಾರ ಸಾವು
ಬೆಂಗಳೂರು,ಮಾ.28- ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.ಬಾಗಲೂರು ನಿವಾಸಿ ಶುಭಂರೈ ಮೃತಪಟ್ಟ ಸ್ಕೂಟರ್‌ ಸವಾರ. ಇವರು ರಿಯಲ್‌ ಎಸ್ಟೇಟ್‌ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಇಂದು ಬೆಳಗಿನಜಾವ 1 ಗಂಟೆ ಸುಮಾರಿನಲ್ಲಿ ಶುಭಂ ಅವರು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಸಾತನೂರು-ಬಾಗಲೂರು ರಸ್ತೆಯ ಕಾರ್‌ ಶೋರೂಂ ಮುಂಭಾಗ ನಿಯಂತ್ರಣ ತಪ್ಪಿ ಉರುಳಿ ಬಿದ್ದು, ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಚಿಕ್ಕಜಾಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಂಧ್ರದಲ್ಲಿ ಭೀಕರ ಅಪಘಾತ : ನಗರದ ಒಂದೇ ಕುಟುಂಬದ ಮೂವರು ದುರ್ಮರಣ

ಬೆಂಗಳೂರು,ಮಾ.28-ನಗರದಿಂದ ತಿರುಪತಿಗೆ ಹೋಗುತ್ತಿದ್ದ ಕಾರು ಮಾರ್ಗಮಧ್ಯೆ ಅಪಘಾತಕ್ಕೀಡಾಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ಆಂಧ್ರದ ಪಲಮಕುಲಪಲ್ಲಿ ಬಳಿ ನಡೆದಿದೆ.

ನಗರದ ಸಿಂಗಸಂದ್ರದಿಂದ ಕಾರಿನಲ್ಲಿ ದಂಪತಿ ಹಾಗೂ ನಾಲ್ಕು ವರ್ಷದ ಮಗು ತಿರುಪತಿಗೆ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ಆಂಧ್ರದ ಬಂಗಾರುಪಾಳ್ಯಂ ಬಳಿ ಇಂದು ಮುಂಜಾನೆ 6.20ರ ಸುಮಾರಿನಲ್ಲಿ ಮುಂದೆ ಚಲಿಸುತ್ತಿದ್ದ ಬಸ್‌‍ಗೆ ಹಿಂಬದಿ ಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ.

ಸುದ್ದಿ ತಿಳಿದು ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿ ಕಾರಿನಲ್ಲಿ ಸಿಕ್ಕಿಕೊಂಡಿದ್ದ ಮೂವರ ಮೃತದೇಹಗಳನ್ನು ಹೊರ ತೆಗೆದು ಆಸ್ಪತ್ರೆಗೆ ರವಾನಿಸಲಾಗಿದೆ. ಕಾರು ಚಾಲಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟವರ ಹೆಸರು, ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ. ಪೊಲೀಸರು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.

RELATED ARTICLES

Latest News