Thursday, May 14, 2026
Homeರಾಜ್ಯಜಿಬಿಎ ಚುನಾವಣೆ ಮುಂದೂಡಿಕೆಗೆ ಮತ್ತೆ ಷಡ್ಯಂತ್ರ

ಜಿಬಿಎ ಚುನಾವಣೆ ಮುಂದೂಡಿಕೆಗೆ ಮತ್ತೆ ಷಡ್ಯಂತ್ರ

Another conspiracy to postpone GBA elections

ಬೆಂಗಳೂರು, ಮೇ.12- ಇದೇ ಜೂ. 24ರೊಳಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರಪಾಲಿಕೆಗಳ ಚುನಾವಣೆ ನಡೆಸುವುದಾಗಿ ಘೋಷಿಸಿದ್ದ ರಾಜ್ಯ ಚುನಾವಣಾ ಆಯೋಗ ಇದೀಗ ಸರ್ಕಾರದ ಸೂಚನೆಯಂತೆ ಚುನಾವಣೆಗೆ ಮತ್ತೆ ಮೂರು ತಿಂಗಳ ಗಡುವು ನೀಡುವಂತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಇದರಿಂದಾಗಿ ನಿಗಧಿತ ಅವಧಿಯೊಳಗೆ ಪಂಚ ಪಾಲಿಕೆಗಳಿಗೆ ಚುನಾವಣೆ ನಡೆಯುವುದೇ ಎಂಬ ಅನುಮಾನ ಕಾಡತೊಡಗಿದೆ.ಈ ಹಿಂದೆಯೂ ರಾಜ್ಯ ಸರ್ಕಾರ ಜಿಬಿಎ ಚುನಾವಣೆಯನ್ನು ಮುಂದೂಡಲು ಹಲವು ರೀತಿಯ ಪ್ರಯತ್ನಗಳನ್ನು ನಡೆಸುತ್ತಲೆ ಇತ್ತು.

ಜೂ.30ರೊಳಗೆ ಪಂಚ ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಗಡುವು ನೀಡಿದ್ದರೂ ರಾಜಕೀಯ ಪಕ್ಷಗಳ ಮುಖಂಡರು ಮಾತ್ರ ಚುನಾವಣೆ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಲೆ ಇದ್ದರು. ಇದೀಗ ಅವರ ಅನುಮಾನಗಳಿಗೆ ಪುಷ್ಠಿ ಎಂಬಂತೆ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣೆ ನಡೆಸಲು ಬರುವ ಸೆಪ್ಟೆಂಬರ್‌ವರೆಗೆ ಅವಧಿ ವಿಸ್ತರಿಸುವಂತೆ ಮನವಿ ಮಾಡಿಕೊಂಡಿದೆ.

ಕಳೆದ ವಾರ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥೆ ಸಂಗ್ರೇಶಿ ಅವರು ಸುದ್ದಿಗೋಷ್ಠಿ ನಡೆಸಿ, ಸುಪ್ರೀಂ ಕೋರ್ಟ್‌ ಸೂಚಿಸಿದ ಅವಧಿಯೊಳಗೆ ಚುನಾವಣೆಯನ್ನು ನಡೆಸಲು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದೇವೆ ಎಂದು ಹೇಳಿ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದ್ದರು.
ಇದೀಗ ಚುನಾವಣಾ ಆಯೋಗವೇ ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣೆಗೆ ಅವಧಿ ವಿಸ್ತರಿಸುವಂತೆ ಮೇಲನವಿ ಸಲ್ಲಿಸಿರುವುದು ಅವರ ಮೇಲೆ ರಾಜಕೀಯ ಒತ್ತಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಆಯೋಗ ಸಲ್ಲಿಸಿರುವ ಅಫಿಡವಿಟ್‌ನಲ್ಲಿ, ಜೂನ್‌ 30ರೊಳಗೆ ಚುನಾವಣೆ ಪೂರ್ಣಗೊಳಿಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೆಪ್ಟೆಂಬರ್‌ 30, 2026ರೊಳಗೆ ಜಿಬಿಎ ಚುನಾವಣೆಯನ್ನು ನಡೆಸಲು ಅವಕಾಶ ನೀಡಬೇಕು ಎಂದು ಆಯೋಗ ಮನವಿ ಮಾಡಿಕೊಳ್ಳಲಾಗಿದೆ.

ಗೌರವಾನ್ವಿತ ನ್ಯಾಯಾಲಯದ ನಿರ್ದೇಶನದಂತೆ ಚುನಾವಣೆಗೆ ಪೂರ್ವಭಾವಿ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಆದರೆ, ಕೇಂದ್ರ ಸರ್ಕಾರ ಘೋಷಿಸಿರುವ ಜನಗಣತಿ ಕಾರ್ಯ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಗಳಿಂದ ರಾಜ್ಯ ಸರ್ಕಾರಿ ಅಧಿಕಾರಿಗಳ ಸಂಪೂರ್ಣ ಮಾನವಶಕ್ತಿ ಮತ್ತು ಲಾಜಿಸ್ಟಿಕ್‌್ಸ ಬಳಕೆಯಾಗುತ್ತಿದೆ. ಇದರಿಂದಾಗಿ ಚುನಾವಣಾ ಕಾರ್ಯಗಳಿಗೆ ಅಗತ್ಯವಿರುವ ಸಿಬ್ಬಂದಿ ಹಾಗೂ ಆಡಳಿತಾತ್ಮಕ ಸಹಕಾರ ಲಭ್ಯವಾಗುತ್ತಿಲ್ಲ. ಹೀಗಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ವಿಳಂಬ ಉಂಟಾಗಿದೆ ಎಂದು ಆಯೋಗ ತಿಳಿಸಿದೆ.

ಇನ್ನೂ ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ-2024ರ ಸೆಕ್ಷನ್‌ 34(4) ಅನ್ವಯ ಮೇ 8ರಂದು ಜಿಬಿಎ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಈ ವೇಳೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಕೂಡ ಸೆಪ್ಟೆಂಬರ್‌ ಅಂತ್ಯದವರೆಗೆ ಚುನಾವಣೆಯನ್ನು ಮುಂದೂಡಲು ಮನವಿ ಮಾಡಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಚುನಾವಣಾ ಆಯೋಗವು ತನ್ನ ಮಟ್ಟಿಗೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಆದರೆ ಚುನಾವಣೆ ನಡೆಸಲು ರಾಜ್ಯ ಸರ್ಕಾರದ ಸಹಕಾರ ಅತ್ಯಗತ್ಯ. ಜನಗಣತಿ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ರಾಜ್ಯ ಸರ್ಕಾರ ಈಗಾಗಲೇ ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲವನ್ನು ನಿಯೋಜಿಸಿರುವುದರಿಂದ ಚುನಾವಣೆಗೆ ಅಗತ್ಯ ಸಿಬ್ಬಂದಿ ಕೊರತೆ ಎದುರಾಗಿದೆ ಎಂದು ಆಯೋಗ ನ್ಯಾಯಾಲಯದ ಗಮನಕ್ಕೆ ತಂದಿದೆ.

ಈ ಹಿನ್ನೆಲೆಯಲ್ಲಿ, ಜಿಬಿಎ ವ್ಯಾಪ್ತಿಯ ಐದು ನಗರಪಾಲಿಕೆಗಳ ಚುನಾವಣೆಯನ್ನು ನಡೆಸಲು ಹೆಚ್ಚುವರಿಯಾಗಿ ಮೂರು ತಿಂಗಳ ಕಾಲಾವಕಾಶ ನೀಡಬೇಕೆಂದು ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡಿದೆ.

ಅವಧಿ ವಿಸ್ತರಣೆಗೆ ನಕಾರ ಸಾಧ್ಯತೆ; ಕರ್ನಾಟಕ ಸರ್ಕಾರ ಹಾಗೂ ಚುನಾವಣಾ ಆಯೋಗ ಈ ಹಿಂದೆ ಸುಪ್ರಿಂ ಕೋರ್ಟ್‌ನಲ್ಲಿ ಜೂನ್‌ ತಿಂಗಳಿನೊಳಗೆ ಪಂಚ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸಿದ್ದ ಎಂದು ಅಫಿಡವಿಟ್‌ ಸಲ್ಲಿಸಿದ್ದವು. ವಾರ್ಡ್‌ ಮರುವಿಂಗಡಣೆ, ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮೀಸಲಾತಿ ಪಟ್ಟಿ ಪ್ರಕಟ ಈಗಾಗಲೇ ಪೂರ್ಣಗೊಂಡಿದೆ. ಇಂತಹ ಸಂದರ್ಭದಲ್ಲಿ ಸಬೂಬು ಹೇಳಿಕೊಂಡು ಚುನಾವಣೆ ಮುಂದೂಡಲು ಯತ್ನಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ ಸಮತಿಸುವ ಸಾಧ್ಯವಿಲ್ಲ ಎನ್ನಲಾಗಿದೆ.

ಸರ್ಕಾರದವರು ಜಿಬಿಎ ಚುನಾವಣೆ ನಡೆಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್‌ ಅವರು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಮನದಟ್ಟು ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ನ್ಯಾಯಲಯ ಚುನಾವಣೆ ಅವಧಿ ವಿಸ್ತರಣೆಗೆ ಸಮತಿಸುವುದಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES

Latest News