ಬೆಂಗಳೂರು,ಫೆ.21- ಸ್ಕ್ಯಾನಿಂಗ್ ಸೇವೆ ಒದಗಿ ಸುವ ಸಂಸ್ಥೆಗಳ ಬಾಕಿ ಬಿಲ್‌ಗಳನ್ನು ಕೂಡಲೇ ಪಾವತಿ ಮಾಡಿ, ಜಿಲ್ಲಾಸ್ಪತ್ರೆಗಳಲ್ಲಿ ಸ್ಥಗಿತಗೊಂಡಿರುವ ಉಚಿತ ಸ್ಕ್ಯಾನಿಂಗ್ ಸೇವೆ ಪುನರಾರಂಭ ಆಗುವಂತೆ ಕ್ರಮ ಕೈಗೊಳ್ಳಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಇಲಾಖೆಯ ನಿರ್ವಹಣೆಯಲ್ಲಿ ಪದೇ ಪದೇ ವಿಫಲರಾಗುತ್ತಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಂಪುಟದಿಂದ ತಕ್ಷಣ ವಜಾ ಮಾಡಿ ಎಂದು ಒತ್ತಾಯಿಸಿದ್ದಾರೆ.
ಬೆಲೆ ಏರಿಕೆಯ ಬಾದ್‌ಷಾ ಸಿಎಂ ಸಿದ್ದರಾಮಯ್ಯ ಅವರು. ಕರ್ನಾಟಕದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಏಪ್ರಿಲ್‌ನಿಂದ ಮತ್ತೊಮೆ ವಿದ್ಯುತ್ ದರ ಏರಿಸಲು ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಕನ್ನಡಿಗರ ಜೇಬಿಗೆ ನಿರಂತರವಾಗಿ ಕನ್ನ ಹಾಕುವುದೇ ಕಾಂಗ್ರೆಸ್ ಸರ್ಕಾರದ ಒನ್ ಪಾಯಿಂಟ್ ಅಜೆಂಡಾ ಆಗಿರುವುದು ನಿಜಕ್ಕೂ ದುರಂತ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಾಕಿ ವೇತನ ಬಿಡುಗಡೆಗೆ ಆಗ್ರಹ: ಕಳೆದ ಅಕ್ಟೋಬರ್‌ನಲ್ಲಿ ಸಕಾಲಕ್ಕೆ ವೇತನ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರದ ಅಮಾನವೀಯ ವ್ಯವಸ್ಥೆಗೆ ಬೇಸತ್ತು ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಗ್ರಂಥಪಾಲಕಿ ಭಾಗ್ಯವತಿ ವಿಶ್ವೇಶ್ವರಯ್ಯ ಅಗ್ಗಿಮಠ ಅವರು ನೇಣಿಗೆ ಶರಣಾಗಿದ್ದರು.
ಇಂತಹ ಹೃದಯವಿದ್ರಾವಕ ಘಟನೆ ನಡೆದ ಮೇಲೂ ಎಚ್ಚೆತ್ತುಕೊಳ್ಳದ ಕಾಂಗ್ರೆಸ್ ಸರ್ಕಾರ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅರಿವು ಕೇಂದ್ರಗಳ ಗ್ರಂಥಾಲಯ ಮೇಲ್ವಿಚಾರಕರಿಗೆ ಕಳೆದ ಒಂದು ವರ್ಷದಿಂದ ಅರ್ಧ ವೇತನ ನೀಡುವ ಮೂಲಕ ಅವರ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯನವರೇ, ತಮ ಪಾಪರ್ ಸರ್ಕಾರದ ದಿವಾಳಿತನಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು? ಕೊಡಲೇ ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಮೇಲ್ವಿಚಾರಕರಿಗೆ ಬಾಕಿ ವೇತನ ಬಿಡುಗಡೆ ಮಾಡಿ. ಇನ್ನು ಮುಂದೆ ಸಕಾಲಕ್ಕೆ ಪೂರ್ತಿ ಸಂಬಳ ಸಿಗುವಂತೆ ಕ್ರಮ ಕೈಗೊಳ್ಳಿ ಎಂದು ಅವರು ಆಗ್ರಹಿಸಿದ್ದಾರೆ.
