Thursday, April 16, 2026
Homeರಾಜ್ಯ6ನೇ ಗ್ಯಾರಂಟಿಯಾಗಿ ಉಚಿತ ಗ್ಯಾಸ್‌ ನೀಡುವಂತೆ ಆಟೋ ಚಾಲಕರ ಪಟ್ಟು

6ನೇ ಗ್ಯಾರಂಟಿಯಾಗಿ ಉಚಿತ ಗ್ಯಾಸ್‌ ನೀಡುವಂತೆ ಆಟೋ ಚಾಲಕರ ಪಟ್ಟು

Auto drivers demand free gas as 6th guarantee

ಬೆಂಗಳೂರು, ಏ.4- ಮಧ್ಯಪ್ರಾಚ್ಯ ಪ್ರದೇಶಗಳದ ಯುದ್ಧದ ಪರಿಣಾಮ ಸಂಕಷ್ಟಕ್ಕೊಳಗಾಗಿರುವ ಆಟೋ ಚಾಲಕರಿಗೆ ಆರನೇ ಗ್ಯಾರಂಟಿಯಾಗಿ ಉಚಿತ ಗ್ಯಾಸ್‌‍ ಅಥವಾ ಪೆಟ್ರೋಲ್‌ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ಒಂದೆಡೆ ಗ್ಯಾಸ್‌‍ನ ಕೊರತೆ ತೀವ್ರವಾಗಿದ್ದರೆ, ಮತ್ತೊಂದೆಡೆ ಬೆಲೆ ಏರಿಕೆಯಿಂದ ಆಟೋ ಚಾಲಕರು ಕಂಗಾಲಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದು, ಆಟೋ ಚಾಲಕರ ಗೋಳು ಕೇಳುವವರಿಲ್ಲದಂತಾಗಿದೆ.

ಪ್ರತಿಯೊಂದು ಗ್ಯಾಸ್‌‍ ಬಂಕ್‌ನ ಮುಂದೆ ಸಾವಿರಾರು ಆಟೋಗಳು ಸರದಿ ಸಾಲಿನಲ್ಲಿ ನಿಂತಿವೆ. ರಾತ್ರಿ ಇಡೀ ಚಾಲಕರು ಗ್ಯಾಸ್‌‍ ಬಂಕ್‌ಗಳ ಬಳಿಯ ಸರದಿ ಸಾಲಿನಲ್ಲಿ ಆಟೋ ನಿಲ್ಲಿಸಿಕೊಂಡು,
ಅದರಲ್ಲೇ ಮಲಗಿ ಬೆಳಗ್ಗೆ 6 ಗಂಟೆಗೆ ಪೈಪೋಟಿಗೆ ಬಿದ್ದಂತೆ ಗ್ಯಾಸ್‌‍ ತುಂಬಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆ ಗಲಾಟೆ, ವಾಗ್ವಾದಗಳಾಗಿದ್ದು, ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾಗಿದೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಮಧ್ಯ ಪ್ರವೇಶಿಸಿರುವ ಉದಾಹರಣೆಗಳಿವೆ.

ಬೆಂಗಳೂರಿನಲ್ಲಿ ಪ್ರತಿಯೊಂದು ಗ್ಯಾಸ್‌‍ ಬಂಕ್‌ಗಳ ಮುಂದೆಯೂ ಸಾಲು ಸಾಲು ಆಟೋಗಳು ಕಾಣಸಿಗುತ್ತವೆ. ಒಂದೆಡೆ ಗ್ಯಾಸ್‌‍ನ ಕೊರತೆ ಕಂಡು ಬಂದರೆ, ಮತ್ತೊಂದೆಡೆ ಗ್ಯಾಸ್‌‍ ದರ ಕೂಡ ದುಪ್ಪಟ್ಟಾಗಿದೆ. 65 ರಿಂದ 70 ರೂ.ಗಳ ಆಜುಬಾಜಿನಲ್ಲಿದ್ದ ಗ್ಯಾಸ್‌‍ ದರ ಈಗ ಕೆಜಿಗೆ 100 ರೂ. ಗಡಿ ದಾಟಿದೆ. ಇನ್ನೂ ಕೆಲವು ಕಡೆ ಕಾಳ ಸಂತೆಯಲ್ಲಿ ಪ್ರತಿ ಕೆಜಿ ಗ್ಯಾಸ್‌‍ ಅನ್ನು 500 ರೂ.ಗಳವರೆಗೂ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ತಾವು ಒತ್ತಡಕ್ಕೆ ಸಿಲುಕಿರುವುದಾಗಿ ಆಟೋ ಚಾಲಕರು ಹೇಳಿಕೊಳ್ಳುತ್ತಿದ್ದಾರೆ.

ಪ್ರಯಾಣಿಕರು ಹೆಚ್ಚು ಹಣ ಕೇಳಿದರೆ ಕೊಡುವುದಿಲ್ಲ. ಆದರೆ ನಮಗೆ ದೈನಂದಿನ ಖರ್ಚುಗಳು ಹೆಚ್ಚಾಗುತ್ತಿವೆ. ಸಾಲದ ಕಂತು, ಮಕ್ಕಳ ಶಿಕ್ಷಣ ವೆಚ್ಚ, ವೈದ್ಯಕೀಯ ವೆಚ್ಚ, ಬಾಡಿಗೆ, ದೈನಂದಿನ ಖರ್ಚುಗಳನ್ನು ನಿಭಾಯಿಸಲಾಗುತ್ತಿಲ್ಲ. ಹೀಗಾಗಿ ಸರ್ಕಾರಗಳು ಆಟೋ ಚಾಲಕರಿಗೆ ದಿನಕ್ಕೆ ಕನಿಷ್ಠ 2 ಕೆಜಿ ಗ್ಯಾಸ್‌‍ ಅಥವಾ 2ಲೀ. ಪೆಟ್ರೋಲ್‌ ಉಚಿತವಾಗಿ ನೀಡಬೇಕು. ಇಲ್ಲವಾದರೆ 200 ರೂ. ಇಂದ 300 ರೂ. ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.ಪ್ರಮುಖವಾಗಿ ಗ್ಯಾಸ್‌‍ ಬೆಲೆಯನ್ನು ಕಡಿಮೆ ಮಾಡಿ ಸಮರ್ಪಕವಾಗಿ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಕೇಂದ್ರವನ್ನು ದೂರಿದ ಸಿದ್ದರಾಮಯ್ಯ:
ಆಟೋ ಎಲ್‌ಪಿಜಿ ಸಮರ್ಪಕವಾಗಿ ಪೂರೈಕೆ ಮಾಡದೇ ಇದ್ದರೆ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಆಟೋಚಾಲಕರು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಡುಗೆ ಅನಿಲ ಎಲ್‌ಪಿಜಿ, ಸಿಎನ್‌ಜಿ ಪೂರೈಕೆ ಕೇಂದ್ರ ಸರ್ಕಾರದ ಜವಾಬ್ದಾರಿ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರ ಸಮರ್ಪಕವಾಗಿ ಗ್ಯಾಸ್‌‍ ಸರಬರಾಜು ಮಾಡಿದರೆ, ನಾವು ಪೂರೈಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಆಟೋ ಚಾಲಕರ ಪರವಾಗಿ ವಕಾಲತ್ತು ವಹಿಸಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ತಲಾ 15 ಸಾವಿರ ರೂ. ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಜಾಗತಿಕ ಸಂಘರ್ಷ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡು ಜನರಿಗೆ ನೆರವು ನೀಡುತ್ತಿದೆ. ಹಲವು ದೇಶಗಳಲ್ಲಿ ಲಾಕ್‌ ಡೌನ್‌ ಮಾಡುವಂತಹ ಪರಿಸ್ಥಿಗೆ ಬಂದಿದೆ. ನಮಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ತೈಲೋತ್ಪನ್ನಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಜನ ಸಂಕಷ್ಟದಲ್ಲಿದ್ದಾರೆ. ಆಟೋ ಚಾಲಕರು ತಮ ಸಮಸ್ಯೆ ನಿವಾರಣೆಯಾಗುವವರೆಗೂ 15 ಸಾವಿರ ರೂ. ನೀಡಿ ಎಂದು ಕೇಳುತ್ತಿದ್ದಾರೆ. ಜನರ ತೆರಿಗೆ ಹಣವನ್ನು ಅವರಿಗೆ ಖರ್ಚು ಮಾಡಲು ರಾಜ್ಯ ಸರ್ಕಾರಕ್ಕೆ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ 1.30 ಲಕ್ಷ ಕೋಟಿ ರೂ. ಖರ್ಚು ಮಾಡಿರುವುದಾಗಿ ಹೇಳುತ್ತಿದ್ದಾರೆ. ಅದೇ ರೀತಿ ಆಟೋ ಚಾಲಕರಿಗೂ ನೆರವು ಕೊಡಲಿ ಎಂದು ಒತ್ತಾಯಿಸಿದ್ದಾರೆ. ಒಂದೆಡೆ ಆಟೋ ಚಾಲಕರು ಸಮಸ್ಯೆಯಿಂದ ಪರದಾಡುತ್ತಿದ್ದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಪರಸ್ಪರ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

RELATED ARTICLES

Latest News