Thursday, April 16, 2026
Homeರಾಜ್ಯರಾಜ್ಯದಲ್ಲಿ ಆಟೋ ಗ್ಯಾಸ್‌‍ ಸಮಸ್ಯೆ ಉಲ್ಬಣ : ಅಡುಗೆ ಅನಿಲ ನಿರಾಳ

ರಾಜ್ಯದಲ್ಲಿ ಆಟೋ ಗ್ಯಾಸ್‌‍ ಸಮಸ್ಯೆ ಉಲ್ಬಣ : ಅಡುಗೆ ಅನಿಲ ನಿರಾಳ

Auto gas problem worsens in the state

ಬೆಂಗಳೂರು, ಏ.10- ಮಧ್ಯಪ್ರಾಚ್ಯ ದೇಶಗಳಲ್ಲಿನ ಯುದ್ಧ ಸನ್ನಿವೇಶದಿಂದಾಗಿ ಸೃಷ್ಟಿಯಾಗಿದ್ದ ಅಡುಗೆ ಅನಿಲದ ಸಮಸ್ಯೆ ಕ್ರಮೇಣ ಸುಧಾರಣೆಯಾಗುತ್ತಿದೆ. ಆದರೆ, ಆಟೋ ಗ್ಯಾಸ್‌‍ ಸಮಸ್ಯೆ ನಿವಾರಣೆಯಾಗಿಲ್ಲ. ಬದಲಾಗಿ ಹೆಚ್ಚಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಕಂಪ ನಿಗಳ ಮುಖ್ಯಸ್ಥರು
ಹಾಗೂ ಸಮನ್ವಯಕಾರರೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ 5 ಲಕ್ಷ ಆಟೋಗಳಿವೆ. ಅವುಗಳಲ್ಲಿ 3 ಲಕ್ಷ ಆಟೋಗಳು ಗ್ಯಾಸ್‌‍ ಅವಲಂಬಿತವಾಗಿವೆ.

ಬೆಂಗಳೂರಿನಲ್ಲಿ 1.60 ಲಕ್ಷ ಆಟೋಗಳು ಆಟೋ ಗ್ಯಾಸ್‌‍ ಬಳಕೆ ಮಾಡುತ್ತಿವೆ. ಸರ್ಕಾರಿ ಸ್ವಾಮ್ಯದ ಗ್ಯಾಸ್‌‍ ಬಂಕ್‌ ಗಳು 60 ಲಕ್ಷ ಮೆಟ್ರಿಕ್‌ ಟನ್‌ ಆಟೋ ಗ್ಯಾಸ್‌‍ ಪೂರೈಸುತ್ತವೆ. ಉಳಿದಂತೆ ಖಾಸಗಿ ಕಂಪನಿಗಳು 220 ಲಕ್ಷ ಮೆಟ್ರಿಕ್‌ ಟನ್‌ ಪೂರೈಸುತ್ತಿದ್ದವು. ಭಾರತ್‌ ಪೆಟ್ರೋಲಿಯಂ, ಇಂಡಿಯನ್‌ ಆಯಿಲ್‌ ಕಂಪನಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ಗ್ಯಾಸ್‌‍ ಬಂಕ್‌ಗಳಲ್ಲಿ ಶೇ.98ರಷ್ಟು ಪೂರೈಕೆ ಇದೆ. ಆದರೆ ಖಾಸಗಿ ಗ್ಯಾಸ್‌‍ ಬಂಕ್‌ಗಳಿಗೆ ಸರಬರಾಜು ಸ್ಥಗಿತಗೊಂಡಿದೆ. ಅವರು ವಿದೇಶದಿಂದ ಆಮದು ಮಾಡಿಕೊಂಡು ಪೂರೈಕೆ ಮಾಡಬೇಕು. ಗ್ಯಾಸ್‌‍ ಸಿಗುತ್ತಿಲ್ಲ ಎಂದು ಬಹುತೇಕ ಬಂಕ್‌ ಗಳು ಮುಚ್ಚಿವೆ. ಟೋಟಲ್‌ ಗ್ಯಾಸ್‌‍ ಮಾತ್ರ ಅಲ್ಪಸ್ವಲ್ಪ ಸರಬರಾಜು ಮಾಡುತ್ತಿದೆ ಎಂದರು.

ಇಂದು ಸಂಜೆ ತಾವು ಖಾಸಗಿ ಬಂಕ್‌ ಮಾಲೀಕರನ್ನು ಕರೆಸಿ ಚರ್ಚೆ ಮಾಡುತ್ತೇನೆ. ಅವರು ಎಲ್ಲಿಂದ ಗ್ಯಾಸ್‌‍ ತರಿಸುತ್ತಾರೆ? ಸಮಸ್ಯೆಗಳೇನು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಒಂದು ವೇಳೆ ಖಾಸಗಿಯವರು ಗ್ಯಾಸ್‌‍ ಆಮದು ಮಾಡಿಕೊಂಡು ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ.

ಈ ವ್ಯವಹಾರ ಸಂಪೂರ್ಣವಾಗಿ ಕೇಂದ್ರ ಸರ್ಕಾರಕ್ಕೆ ಸೇರಿದ್ದಾಗಿದೆ. ಖಾಸಗಿ ಗ್ಯಾಸ್‌‍ ಬಂಕ್‌ಗಳಿಗೆ ಪರವಾನಗಿ ನೀಡುವುದು, ಅನಿಲ ಪೂರೈಕೆ ಸೇರಿದಂತೆ ಎಲ್ಲವನ್ನೂ ಕೇಂದ್ರವೇ ನಿರ್ವಹಣೆ ಮಾಡುತ್ತದೆ. ರಾಜ್ಯ ಸರ್ಕಾರದ ಪಾತ್ರ ಇದರಲ್ಲಿ ಏನೂ ಇಲ್ಲ. ಸಂಕಷ್ಟ ಕಾಲದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮುನಿಯಪ್ಪ ಆರೋಪಿಸಿದರು.

ಲಕ್ಷಾಂತರ ಜನ ಚಾಲಕರು ಆಟೋ ಗ್ಯಾಸ್‌‍ ನಂಬಿ ಬದುಕುತ್ತಿದ್ದಾರೆ. ಜನ ಸಾಮಾನ್ಯರು ಆಟೋ ಸೇವೆ ಬಳಸುತ್ತಿದ್ದಾರೆ. ಅವರಿಗೆ ಸ್ಪಂದಿಸಬೇಕಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ತೊಂದರೆಗೆ ಒಳಗಾಗಿರುವವರಿಗೆ ಪರಿಹಾರ ನೀಡುವುದು ಕೂಡ ಕೇಂದ್ರ ಸರ್ಕಾರದ ಹೊಣೆಗಾರಿಕೆ. ಈ ವಿಷಯವಾಗಿ ನಾವು ಈಗಾಗಲೇ ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಯವರು ಎರಡು ಬಾರಿ ಪತ್ರ ಬರೆದಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿವರು ಒಟ್ಟು ಆರು ಬಾರಿ ಪತ್ರ ಬರೆದಿದ್ದಾರೆ. ನಿನ್ನೆ ಹೊಸದಾಗಿ ಮತ್ತೆ ಮುಖ್ಯಕಾರ್ಯದರ್ಶಿಯವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎಂದು ಮುನಿಯಪ್ಪ ತಿಳಿಸಿದರು.

ಸರ್ಕಾರಿ ಮತ್ತು ಖಾಸಗಿ ಬಂಕ್‌ಗಳು ಆಟೋ ಗ್ಯಾಸ್‌‍ ದರವನ್ನು ಸರ್ಕಾರ ನಿಗದಿ ಪಡಿಸಿದ ಮೌಲ್ಯಕ್ಕೆ ಮಾರಾಟ ಮಾಡಬೇಕು. ಹೆಚ್ಚಿನ ದರ ವಸೂಲಿ ಮಾಡಿದರೆ ಎಸಾ ಕಾಯ್ದೆ ಬಳಕೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಬಂಕ್‌ಗಳನ್ನು ಜಪ್ತಿ ಮಾಡುತ್ತೇವೆ ಎಂದು ಎಚ್ಚರಿಸಿದರು.
ಈಗಾಗಲೇ 1491 ದಾಳಿಗಳನ್ನು ನಡೆಸಲಾಗಿದೆ. 29 ಎಫ್‌ ಐ ಆರ್‌ ಗಳನ್ನು ದಾಖಲಿಸಿದ್ದೇವೆ. 22 ಮಂದಿಯನ್ನು ಬಂಧಿಸಲಾಗಿದೆ. 1694 ಸಿಲಿಂಡರ್‌ಗಳನ್ನು ಜಪ್ತಿ ಮಾಡಿದ್ದೇವೆ ಎಂದು ವಿವರಿಸಿದರು.

ಕಾಳಸಂತೆಯಲ್ಲಿ ಆಟೋ ಗ್ಯಾಸ್‌‍ ಅಥವಾ ಅಡುಗೆ ಅನಿಲ ಸಿಲಿಂಡರ್‌ ಮಾರಾಟ ಮಾಡಿದರೆ ಕಠಿಣ ಕ್ರಮ ಜರುಗಿಸುತ್ತೇವೆ. ಹೆಚ್ಚಿನ ದರ ವಸೂಲಿ ಮಾಡುತ್ತಿದ್ದರೆ ಅಂತಹ ಗ್ಯಾಸ್‌‍ ಬಂಕ್‌ಗಳನ್ನು ಜಪ್ತಿ ಮಾಡುತ್ತೇವೆ. ಆಟೋ ಚಾಲಕರ ಕಷ್ಟಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಳಜಿ ಇದೆ. ಆದರೆ ಪೂರ್ಣ ಪ್ರಮಾಣದ ವ್ಯವಹಾರ ಇರುವುದು ಕೇಂದ್ರ ಸರ್ಕಾರದ ಕೈನಲ್ಲಿ ಎಂದು ಮುನಿಯಪ್ಪ ತಿಳಿಸಿದರು.

ಗೃಹ ಬಳಕೆಗೆ ನಗರ ಪ್ರದೇಶದಲ್ಲಿ 25 ದಿನಗಳಿಗೆ ಒಂದು, ಗ್ರಾಮೀಣ ಭಾಗದಲ್ಲಿ 45 ದಿನಕ್ಕೆ ಒಂದು ಸಿಲಿಂಡರ್‌ ವಿತರಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಈ ಮೊದಲು ಅನಿಯಮಿತವಾಗಿ ಸಿಲಿಂಡರ್‌ ಗಳನ್ನು ಒದಗಿಸಲಾಗುತ್ತಿತ್ತು. ಯುದ್ಧ ಕಾಲದಲ್ಲಿನ ಸಂಕಷ್ಟಕ್ಕಾಗಿ ಕಾಲ ಮಿತಿ ನಿಗದಿ ಮಾಡಿದ್ದಾರೆ. ಒಂದು ಕುಟುಂಬದಲ್ಲಿ ನಾಲ್ಕೈದು ಜನ ಇರುತ್ತಾರೆ ಎಂದರೆ ಅವರಿಗೆ 25 ದಿನಗಳವರೆಗೂ ಸಿಲಿಂಡರ್‌ ಬಳಕೆಯಾಗಲಿದೆ ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರ. 26ನೇ ದಿನಕ್ಕೆ ಹೊಸ ಸಿಲಿಂಡರ್‌ಗೆ ಬುಕ್‌ ಮಾಡಿದರೆ ಅದೇ ದಿನ ಸರಬರಾಜಾಗಬೇಕು. ಮೊದಲಿನಿಂದ ವಾರಗಟ್ಟಲೆ ಕಾಯಿಸಬಾರದು ಎಂದು ಸಚಿವರು ಎಚ್ಚರಿಕೆ ನೀಡಿದರು.

ನಗರ ಪ್ರದೇಶದಲ್ಲಿ 26ನೇ, ಗ್ರಾಮೀಣ ಭಾಗದಲ್ಲಿ 46ನೇ ದಿನಕ್ಕೆ ತಪ್ಪದೆ ಸಿಲಿಂಡರ್‌ ಪೂರೈಸುವಂತೆ ತೈಲ ಕಂಪೆನಿಗಳಿಗೆ ನಿರ್ದೇಶನ ನೀಡಲಾಗಿದೆ. ಇಲ್ಲವಾದರೆ ಜನ ಮತ್ತೆ ಆತಂಕಕ್ಕೆ ಒಳಗಾಗುತ್ತಾರೆ. ಡಿಸ್ಟ್ರಿಬ್ಯೂಟರ್‌ಗಳ ಕಚೇರಿ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ಈ ರೀತಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದರು.

ವಾಣಿಜ್ಯ ಬಳಕೆಗೆ 10 ಸಾವಿರ ಸಿಲಿಂಡರ್‌ಗಳು ಬೇಕು. ಸದ್ಯದಲ್ಲಿ ಸರಾಸರಿ 3 ರಿಂದ 4 ಸಾವಿರ ಸಿಲಿಂಡರ್‌ಗಳನ್ನು ಪೂರೈಸಲಾಗುತ್ತಿದೆ. ಇನ್ನೊಂದಿಷ್ಟು ಸುಧಾರಣೆಯಾಗಿ ಆರು ಸಾವಿರ ಸಿಲಿಂಡರ್‌ವರೆಗೂ ಪೂರೈಸಿದರೆ ಸಮಸ್ಯೆ ಮತ್ತಷ್ಟು ಸ್ವಲ್ಪ ಕಡಿಮೆಯಾಗಬಹುದು. ಶಾಲಾ-ಕಾಲೇಜುಗಳು, ಆಸ್ಪತ್ರೆಗಳಿಗೆ ಪೂರ್ಣ ಪ್ರಮಾಣದಲ್ಲಿ ಸಿಲಿಂಡರ್‌ಗಳು ಸರಬರಾಜಾಗುತ್ತಿವೆ. ಹೋಟೆಲ್‌ಗಳಿಗೆ ಶೇ.62ರಷ್ಟು ಸಿಲಿಂಡರ್‌ ಪೂರೈಕೆಯಾಗುತ್ತಿದೆ ಎಂದು ವಿವರಿಸಿದರು.

RELATED ARTICLES

Latest News