Homeರಾಜ್ಯಹೊಸ ಎಸ್‌‍ಐಆರ್‌ ನಡೆಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ-ಜೆಡಿಎಸ್ ಆಗ್ರಹ

ಹೊಸ ಎಸ್‌‍ಐಆರ್‌ ನಡೆಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ-ಜೆಡಿಎಸ್ ಆಗ್ರಹ

BJP-JDS urge Central Election Commission to conduct new SIR

ಬೆಂಗಳೂರು, ಜು.5- ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌‍ಐಆರ್‌)ಯಲ್ಲಿ ಸಾಕಷ್ಟು ಅಕ್ರಮಗಳು ನಡೆದ ಕಾರಣ ನಿಯಮ ಬದ್ಧವಾಗಿ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ- ಜೆಡಿಎಸ್‌‍ ಮೈತ್ರಿ ನಾಯಕರು ಕೇಂದ್ರ ಚುನಾವಣಾ ಆಯೋಗದ ಕದ ತಟ್ಟಲಿದ್ದಾರೆ.

ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪ್ರಹ್ಲಾದ್‌ ಜೋಶಿ ನೇತೃತ್ವದಲ್ಲಿ ಎನ್‌ಡಿಎ ನಾಯಕರು ಕೇಂದ್ರಚುನಾವಣಾ ಆಯೋಗ(ಇಸಿಐ)ದ ಮುಖ್ಯ ಆಯುಕ್ತರಾದ ಜ್ಞಾನೇಶ್‌ ಕುಮಾರ್‌ ಅವರನ್ನು ನಾಳೆ ನವದೆಹಲಿಯಲ್ಲಿ ಭೇಟಿ ಮಾಡಿ ಕರ್ನಾಟಕದಲ್ಲಿ ನಡೆಯುತ್ತಿರುವ ಆಕ್ರಮಗಳ ಕುರಿತು ದಾಖಲೆಗಳ ಸಮೇತ ದೂರು ನೀಡಲಿದ್ದಾರೆ.

ಪ್ರಸ್ತುತ ಕರ್ನಾಟಕದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಎಸ್‌‍ಐಆರ್‌ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಪಡಿಸಿ ಹೊಸದಾಗಿ ನಡೆಸಬೇಕು. ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲನೆ ಮಾಡದೆ, ಎಲ್ಲೆಂದರಲ್ಲಿ ಅರ್ಜಿಗಳನ್ನು ಭರ್ತಿ ಮಾಡಿಸಿಕೊಳ್ಳಲಾಗುತ್ತಿದೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿರುವುದರಿಂದ ಈಗ ನಡೆದಿರುವ ಪ್ರಕ್ರಿಯೆಯನ್ನು ರದ್ದುಪಡಿಸಿ ಹೊಸದಾಗಿ ನಡೆಸಬೇಕು ಎಂಬ ಒತ್ತಾಯವನ್ನು ಉಭಯ ನಾಯಕರು ಮಾಡಲಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ರಾಜ್ಯ ಸರ್ಕಾರವು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಮನೆ ಮನೆಗೆ ಹೋಗಿ ಪರಿಶೀಲನೆ ನಡೆಸುವ ಬದಲು, ಸ್ಥಳೀಯ ಮತಗಟ್ಟೆ ಅಧಿಕಾರಿಗಳು ಮತದಾರರನ್ನು ಒಂದು ಕಡೆ ಸೇರಿಸಿ ಫಾರ್ಮ್‌ ಭರ್ತಿ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಈ ಪ್ರಕ್ರಿಯೆಯು ಪಾರದರ್ಶಕವಾಗಿಲ್ಲ ಮತ್ತು ರಾಜ್ಯ ಸರ್ಕಾರದ ಒತ್ತಡದಿಂದಾಗಿ ಅಧಿಕಾರಿಗಳು ಪಕ್ಷಪಾತ ಮಾಡುತ್ತಿದ್ದಾರೆ ಎಂಬುದನ್ನು ದೂರಿನಲ್ಲಿ ಉಲ್ಲೇಖ ಮಾಡಲಿದ್ದಾರೆ.

ಆಡಳಿತರೂಢ ಕಾಂಗ್ರೆಸ್‌‍ ಸರ್ಕಾರ ಹಾಗೂ ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿದು ಬೂತ್‌ ಮಟ್ಟದ ಅಧಿಕಾರಿಗಳು( ಬಿಎಲ್‌ಓ) ದರ್ಗಾ , ಮಸೀದಿ, ಕಲ್ಯಾಣ ಮಂಟಪ, ಅಂಗನವಾಡಿ, ಜಗಲಿಕಟ್ಟೆ ಸೇರಿದಂತೆ ಮತ್ತೆ ತರ ಕಡೆ ಗುಂಪುಗೂಡಿಸಿಕೊಂಡು ಎಸ್‌‍ಐಆರ್‌ ನಡೆಸುತ್ತಿದ್ದಾರೆ. ಇದು ಸಂಪೂರ್ಣವಾಗಿ ನಿಯಮಕ್ಕೆ ವಿರುದ್ಧವಾಗಿರುವುದರಿಂದ ಈಗ ನಡೆದಿರುವ ಪ್ರಕ್ರಿಯೆ ಕಾನೂನುಬಾಹಿರ ಎಂಬುದು ಉಭಯ ನಾಯಕರ ದೂರಾಗಿದೆ.

ಚುನಾವಣಾ ಆಯೋಗ ನಿಗದಿಪಡಿಸಿದ ಸ್ಥಳದಲ್ಲಿ ಎಸ್‌‍ಐಆರ್‌ ನಡೆಸುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದರೂ,ಕಳೆದ ನಾಲ್ಕು ದಿನಗಳಿಂದ ಕೆಲವು ಕಡೆಗಳಲ್ಲಿ ಬೂತ್‌ಮಟ್ಟದ ಅಧಿಕಾರಿಗಳು ಮನೆಗಳಿಗೆ ಹೋಗುವ ಬದಲು, ಸಮುದಾಯ ಭವನಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ, ಮಸೀದಿಗಳಲ್ಲಿ ಜನರನ್ನು ಒಟ್ಟುಗೂಡಿಸಿ ನಮೂನೆಗಳನ್ನು ವಿತರಿಸುತ್ತಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್‌‍ ನಾಯಕರ ಆರೋಪವಾಗಿದೆ.

ಜೆಡಿಎಸ್‌‍ ನಾಯಕ, ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಈ ವಿಚಾರದಲ್ಲಿ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಚರ್ಚಿಸಿದ್ದು, ಜಂಟಿ ಹೋರಾಟದ ರೂಪರೇಷೆಗಳ ಬಗ್ಗೆ ಬಿಜೆಪಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳಲಿದ್ದಾರೆ. ಈ ಹೋರಾಟದ ಮೂಲಕ ರಾಜ್ಯಾದ್ಯಂತ ಸಂಚಲನ ಮೂಡಿಸಿ, ಎಸ್‌‍ಐಆರ್‌ ಪ್ರಕ್ರಿಯೆಯಲ್ಲಿ ಲೋಪಗಳಿವೆ ಎಂಬ ಸಂದೇಶವನ್ನು ಜನರಿಗೆ ತಲುಪಿಸುವುದು ವಿಪಕ್ಷಗಳ ಮುಖ್ಯ ಉದ್ದೇಶವಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಕೋಲಾರದಲ್ಲಿ ಮತದಾರರನ್ನು ಗುಂಪು ಸೇರಿಸಿ ಎಸ್‌‍ ಐಆರ್‌ ನಡೆಸಿದ ಆರೋಪದ ಮೇಲೆ ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ ಸೇರಿದಂತೆ ಐವರು ಬಿಎಲ್‌ಓಗಳಿಗೆ ನೋಟಿಸ್‌‍ ಜಾರಿ ಮಾಡಲಾಗಿದೆ. ಕೋಲಾರ ಜಿಲ್ಲಾಧಿಕಾರಿ ರವಿ ಅವರು ಚುನಾವಣಾ ಆಯೋಗದ ನಿಯಮಾನುಸಾರ ಎಸ್‌‍ಐಆರ್‌ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಪ್ರಕಾರ, ಕೆಲವು ಬೂತ್‌ ಮಟ್ಟದ ಏಜೆಂಟರು ಅಧಿಕಾರಿಗಳೊಂದಿಗೆ ಮನೆಗಳಿಗೆ ತೆರಳಿ ರಾಜಕೀಯ ಕರಪತ್ರಗಳನ್ನು ಹಂಚುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ರಾಜ್ಯ ಸರ್ಕಾರವು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿವೆ. ಮೃತಪಟ್ಟವರು ಮತ್ತು ಅಕ್ರಮ ವಲಸಿಗರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸರ್ಕಾರಕ್ಕೆ ಆಸಕ್ತಿಯಿಲ್ಲ ಎಂದು ವಿರೋಧ ಪಕ್ಷಗಳು ಆಕ್ಷೇಪಿಸಿವೆ.

ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ವಿ.ಅನ್ಬುಕುಮಾರ್‌ ಅವರು ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬೂತ್‌ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡುವ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಕೆಲವು ಕಡೆಗಳಲ್ಲಿ ನಿಯಮ ಉಲ್ಲಂಘನೆಯಾಗಿರುವುದು ಕಂಡುಬಂದಿದ್ದರಿಂದ, ಕೋಲಾರದಂತಹ ಜಿಲ್ಲೆಗಳಲ್ಲಿ ತಹಸೀಲ್ದಾರ್‌ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಶೋಕಾಸ್‌‍ ನೋಟಿಸ್‌‍ ಜಾರಿ ಮಾಡಲಾಗಿದೆ.

ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ, ಜೂನ್‌ 30, 2026 ರಿಂದ ಕರ್ನಾಟಕದಲ್ಲಿ ಈ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದೆ. ಇದು ಜುಲೈ 29ರವರೆಗೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್‌ 2026 ರಲ್ಲಿ ಪ್ರಕಟಿಸಲಾಗುವುದು. ರಾಜ್ಯ ಸರ್ಕಾರದ ಆಕ್ಷೇಪಣೆ: ರಾಜ್ಯ ಸರ್ಕಾರವು ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿರೋಧಿಸುತ್ತಿಲ್ಲ, ಆದರೆ ಈ ಪ್ರಕ್ರಿಯೆಯಲ್ಲಿನ ಪಾರದರ್ಶಕತೆಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನಿರ್ದಿಷ್ಟವಾಗಿ, ಯಾವುದೇ ಸಾಕ್ಷ್ಯಗಳಿಲ್ಲದೆ ಅಥವಾ ಸ್ಪಷ್ಟ ಮಾನದಂಡಗಳಿಲ್ಲದೆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಬಹುದು ಎಂಬ ಆತಂಕವನ್ನು ಸಚಿವರು ವ್ಯಕ್ತಪಡಿಸಿದ್ದಾರೆ.

ಸರ್ಕಾರದ ನಿಲುವು:
ಮತದಾರರ ಹೆಸರುಗಳನ್ನು ಅನಿಯಂತ್ರಿತವಾಗಿ ತೆಗೆದುಹಾಕುವುದನ್ನು ತಡೆಯಬೇಕು ಮತ್ತು ಈ ಪ್ರಕ್ರಿಯೆ ಕಾನೂನುಬದ್ಧವಾಗಿ ಹಾಗೂ ಪಾರದರ್ಶಕವಾಗಿ ನಡೆಯಬೇಕು ಎಂಬುದು ಸರ್ಕಾರದ ಒತ್ತಾಯವಾಗಿದೆ.

RELATED ARTICLES
spot_img

Latest News