ಬಾಗಲಕೋಟೆ, ಜೂ. 23- ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಹೆಸ್ಕಾಂ ಕಚೇರಿ ಬಳಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರು ಮತ್ತು ನೇಕಾರರು ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ನಡೆದುಕೊಂಡ ರೀತಿ ಅತ್ಯಂತ ಅಮಾನುಷ ಎಂದು ಮಾಜಿ ಸಚಿವೆ ಉಮಾಶ್ರೀ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನೇಕಾರ ಸಮುದಾಯದ ಹೋರಾಟಗಾರ ಶಿವಲಿಂಗ ಟಿರ್ಕಿ ಮೇಲೆ ನಡೆದ ಹಲ್ಲೆ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಪ್ರಸಾರಕ್ಕೆ ಈಗಾಗಲೇ ನಮಲ್ಲಿ ಬೆಸ್ಕಾಂ, ಜೆಸ್ಕಾಂ, ಹೆಸ್ಕಾಂನಂತಹ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ವಿತರಣೆ ಮಾಡಲು ಟಾಟಾ ಪವರ್ ಸೇರಿದಂತೆ ಯಾವುದೇ ಖಾಸಗಿ ಕಂಪನಿಗೆ ಅನುಮತಿ ನೀಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರವು ವಿದ್ಯುತ್ ತಿದ್ದುಪಡಿ ಮಸೂದೆಯನ್ವಯ, ಒಂದೇ ಪ್ರದೇಶದಲ್ಲಿ ಸರ್ಕಾರಿ ಮತ್ತು ಖಾಸಗಿ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ಕೊಡುವ ಪ್ರಸ್ತಾವ ಇದೆ. ಅದರ ಭಾಗವಾಗಿ ಟಾಟಾ ಪವರ್ ಕಂಪನಿಯು ಕೆಇಆರ್‌ಸಿಗೆ ಅರ್ಜಿ ಹಾಕಿ, ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಸೆಸ್ಕಾಂ ವ್ಯಾಪ್ತಿಯ 19 ಜಿಲ್ಲೆಗಳಲ್ಲಿ ಪ್ಯಾರಲಲ್ ವಿತರಣೆಗಾಗಿ ಲೈಸನ್‌್ಸ ಕೇಳಿದೆ. ಇದನ್ನು ಅನುಮೋದಿಸುವುದು ಕೆಇಆರ್‌ಸಿ ಆದರೂ, ಮೂಲಭೂತವಾಗಿ ಕಾನೂನು ಚೌಕಟ್ಟು ಬಲ ನೀಡಿರುವುದು ಕೇಂದ್ರ ಸರ್ಕಾರ ಎಂದು ದೂರಿದ್ದಾರೆ.
ನೇಕಾರರು, ಬಡವರು, ಜನಸಾಮಾನ್ಯರಿಗೆ ಮಾರಕವಾದ ವಿದ್ಯುತ್ ಖಾಸಗೀಕರಣ ಬೇಡ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಕೇಂದ್ರ ಸರ್ಕಾರ ದೂರವಾಣಿ ಸಂಪರ್ಕ ವ್ಯವಸ್ಥೆಯಲ್ಲಿ ಖಾಸಗೀಕರಣ ಅವಕಾಶ ನೀಡಿದ ಪರಿಣಾಮ ಬಿಎಸ್‌ಎನ್‌ಎಲ್‌ನಲ್ಲಿ ದುಡಿಯುವವರ ಸ್ಥಿತಿ ಏನಾಗಿದೆ ಎಂಬ ಉತ್ತಮ ಉದಾಹರಣೆ. ಸ್ಪರ್ಧಾತಕ ದರ ನಿಗದಿ, ಕೆಲವೊಂದು ಕೊಡುಗೆಗಳು, ಗ್ರಾಹಕರನ್ನು ಆಕರ್ಷಿಸುತ್ತ ಸಾಗಿದೆ. ಆದರೆ, ವಿದ್ಯುತ್ ವಲಯ ಹಾಗಲ್ಲ ಎಂದಿದ್ದಾರೆ.
ಕರ್ನಾಟಕದಲ್ಲಿ ರೈತರು, ನೇಕಾರರು, ಬಡ ಕುಟುಂಬಗಳು, ಜನಸಾಮಾನ್ಯರು, ಸಣ್ಣ ಕೈಗಾರಿಕೆಗಳು ಈ ಖಾಸಗೀಕರಣದಿಂದ ಬಡವರ ಉದ್ಯೋಗ, ಜೀವನ ನಿರ್ವಹಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.
ಜನ ವಿರೋಧಿ ಕೇಂದ್ರದ ಮಸೂದೆ ವಿದ್ಯುತ್ ಖಾಸಗೀಕರಣದ ಪರಿಣಾಮ ಮುಂದೊಂದು ದಿನ ನಮಲ್ಲಿನ ವಿದ್ಯುತ್ ನಿಗಮಗಳು ಶಕ್ತಿಹೀನವಾಗಿ ಮುಚ್ಚುವ ಸ್ಥಿತಿ ಬರಬಹುದು. ಇಲ್ಲಿನ ದುಡಿಯುವ ವರ್ಗದ ಬದುಕು ದುಸ್ಥರವಾಗಲಿದೆ. ಹೀಗಾಗಿ ಮುಂಜಾಗ್ರತೆಯಿಂದ ಇದನ್ನು ತಡೆಯಲು ಸಾರ್ವಜನಿಕರು ವಿರೋಧಿಸುವುದು ಅನಿವಾರ್ಯ ಎಂದಿದ್ದಾರೆ.
ಇಂತಹ ಪರಿಸ್ಥಿತಿಯನ್ನು ಅರ್ಥ ಮಾಡಿಸಿಕೊಳ್ಳದ ಬಿಜೆಪಿ ಜನಪ್ರತಿನಿಧಿಗಳು ಮತ್ತು ಅವರ ಹಿಂಬಾಲಕರು ಪ್ರತಿಭಟನಾನಿರತರ ಮೇಲೆ ದಬ್ಬಾಳಿಕೆ ಮಾಡಿ, ಹಲ್ಲೆ ನಡೆಸಿರುವುದು ವಿಷಾದನೀಯ. ಬಿಜೆಪಿಯವರ ನಡೆ ಜನವಿರೋಧಿಯಾಗಿದೆ. ಇದನ್ನು ತೀವ್ರವಾಗಿ ಖಂಡಿಸುವುದರೊಂದಿಗೆ, ಪಕ್ಷಾತೀತವಾಗಿ ವಿರೋಧಿಸಬೇಕಿದೆ ಎಂದು ಹೇಳಿದ್ದಾರೆ.
