ಬೆಂಗಳೂರು, ಜೂ. 23- ಸಚಿವ ಸಂಪುಟ ವಿಸ್ತರಣೆಯಲ್ಲಿ ಬೆಂಗಳೂರಿನಿಂದ ಮತ್ತೊಬ್ಬರು ಸಂಪುಟ ಸೇರುವುದು ಬಹುತೇಕ ಖಚಿತವಾಗಿದ್ದು, ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಮುಂಚೂಣಿಯಲ್ಲಿದ್ದಾರೆ. 4ನೇ ಅವಧಿಗೆ ಶಾಂತಿನಗರ ಕ್ಷೇತ್ರದಿಂದ ಶಾಸಕರಾಗಿರುವ ಎನ್.ಎ.ಹ್ಯಾರಿಸ್ ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದಾರೆ.
2013 ರಿಂದ 2018ರ ನಡುವಿನ ಸಿದ್ದರಾಮಯ್ಯಅವರ ಸರ್ಕಾರದಲ್ಲೇ ಎನ್.ಎ.ಹ್ಯಾರಿಸ್ ಅವರ ಹೆಸರು ಸಚಿವ ಸಂಪುಟ ಸೇರ್ಪಡೆಗೆ ಮುಂಚೂಣಿಯಲ್ಲಿತ್ತು. ಸೋಲಿಲ್ಲದೆ ನಿರಂತರವಾಗಿ ಜನ ಬೆಂಬಲದೊಂದಿಗೆ ಎನ್.ಎ.ಹ್ಯಾರಿಸ್ ರಾಜಕೀಯದ ಜೊತೆಗೆ ಕ್ರೀಡಾ ಚಟುವಟಿಕೆಗಳು ಮತ್ತು ಉದ್ಯಮದಲ್ಲೂ ಯಶಸ್ವಿಯಾಗಿ ತೊಡಗಿಸಿಕೊಂಡಿದ್ದಾರೆ.
ಸುಮಾರು 26 ವರ್ಷಗಳಿಂದಲೂ ನಿರಂತರವಾಗಿ ಕಾಂಗ್ರೆಸ್ ನಲ್ಲೇ ಸೇವೆ ಸಲ್ಲಿಸುತ್ತಿದ್ದು, ಬೆಂಗಳೂರಿನಲ್ಲಿ ಪಕ್ಷ ಸಂಘಟನೆಯಲ್ಲಿ ತಮದೇ ಆದ ಕೊಡುಗೆ ನೀಡಿದ್ದಾರೆ. ಉದ್ಯೋಗ ಮೇಳಗಳ ಆಯೋಜನೆ ಮೂಲಕ ಯುವ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ನಗರಾಭಿವೃದ್ಧಿ, ಅಲ್ಪಸಂಖ್ಯಾತರ ಕಲ್ಯಾಣ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವಾರು ವಿಚಾರಗಳಲ್ಲಿ ಹೆಚ್ಚು ಜ್ಞಾನ ಹೊಂದಿದ್ದಾರೆ. ಅಖಿಲ ಭಾರತ ಫುಟ್‌ಬಾಲ್ ಒಕ್ಕೂಟದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಧರ್ಮದತ್ತಿಗಳ ಮೂಲಗಳ ಸಾವಿರಾರು ಜನರಿಗೆ ವ್ಯಕ್ತಿಗತವಾಗಿ ನೆರವಾಗಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನಗರದಲ್ಲಿ ಭದ್ರ ಬುನಾದಿಗಳಲ್ಲಿ ಒಬ್ಬರಾಗಿರುವ ಎನ್.ಎ.ಹ್ಯಾರಿಸ್, ಸಜ್ಜನ ಹಾಗೂ ಸಭ್ಯ ರಾಜಕಾರಣಿ ಎಂಬ ಹೆಸರು ಪಡೆದಿದ್ದಾರೆ. ಯಾವುದೇ ಕಳಂಕವಿಲ್ಲದೆ ಶುದ್ಧ ರಾಜಕೀಯಕ್ಕೆ ಹೆಸರಾಗಿದ್ದಾರೆ. ಸಂಘಟನಾತಕವಾಗಿ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರ ಜೊತೆ ನಿಕಟ ಭಾಂದವ್ಯ ಹೊಂದಿದ್ದಾರೆ. ಬೆಂಗಳೂರಿನ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಮತ್ತಷ್ಟು ಜನಸ್ನೇಹಿ ಹಾಗೂ ಬಲ ಗೊಳಿಸುವಲ್ಲಿ ಎನ್.ಎ.ಹ್ಯಾರಿಸ್ ಅವರ ಪಾತ್ರ ಪ್ರಮುಖವಾಗಿದೆ.
ಸಾಮಾಜಿಕ ನ್ಯಾಯದ ಅಲ್ಪಸಂಖ್ಯಾತ ಹಾಗೂ ಬೆಂಗಳೂರಿನ ಭೌಗೋಳಿಕತೆ ಆಧರಿಸಿ ಎನ್.ಎ.ಹ್ಯಾರಿಸ್ ಅವರಿಗೆ ಸಚಿವ ಸ್ಥಾನ ದೊರೆಯುವ ಲೆಕ್ಕಚಾರಗಳಿವೆ. ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಮುಸ್ಲಿಂ ಸಮುದಾಯಕ್ಕೆ ಈಗ ಒಂದು ಸಚಿವ ಸ್ಥಾನ ಮಾತ್ರ ನೀಡಲಾಗಿದೆ. ಮತ್ತೊಬ್ಬರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕೆಂಬ ಒತ್ತಡಗಳಿವೆ. ರಿಜ್ವಾನ್ ಅರ್ಷದ್, ಸಲೀಂ ಅಹಮದ್, ತನ್ವೀರ್ ಸೇಠ್ ಅವರ ನಡುವೆ ಎನ್.ಎ.ಹ್ಯಾರಿಸ್‌ಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ.
