Thursday, April 30, 2026
Homeರಾಜ್ಯಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿತ ದುರಂತ : ಯುಡಿಆರ್‌ ಪ್ರಕರಣ ದಾಖಲು

ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿತ ದುರಂತ : ಯುಡಿಆರ್‌ ಪ್ರಕರಣ ದಾಖಲು

Bowring Hospital Compound Collapse Tragedy: UDR Case Filed

ಬೆಂಗಳೂರು,ಏ.30- ನಗರದ ಬೌರಿಂಗ್‌ ಆಸ್ಪತ್ರೆಯ ಕಾಂಪೌಂಡ್‌ ಕುಸಿದು 7 ಮಂದಿ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌‍ ಠಾಣೆಯಲ್ಲಿ ಯುಡಿಆರ್‌ ಪ್ರಕರಣ ದಾಖಲಾಗಿದೆ.

ಫುಟ್‌ಪಾತ್‌ ವ್ಯಾಪಾರಿ ಮೊಹಮದ್‌ ಆರಿಫ್‌ ಎಂಬುವರು ಈ ಬಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಹೇಗಾಯಿತು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ನಗರದಲ್ಲಿ ನಿನ್ನೆ ಸಂಜೆ ಗಾಳಿ ಸಹಿತ ಮಳೆಯ ಅಬ್ಬರದಿಂದ ಬೌರಿಂಗ್‌ ಆಸ್ಪತ್ರೆಯ ತಡೆಗೋಡೆ ಏಕಾಏಕಿ ಕುಸಿದ ಪರಿಣಾಮ ಮಳೆಯಿಂದ ಆಸರೆಗಾಗಿ ನಿಂತಿದ್ದ ಬಾಲಕಿ ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವುದು ವಿಷಾದಕರ.

ಮೃತಪಟ್ಟ ಏಳು ಮಂದಿಯ ಮೃತದೇಹಗಳನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಅವರುಗಳನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.ನಿನ್ನೆ ಸಂಜೆ ಸುರಿದ ಮಳೆ ಅವಾಂತರದಲ್ಲಿ ಇದುವರೆಗೂ ನಗರದಲ್ಲಿ ಒಟ್ಟು ಹತ್ತು ಮಂದಿ ಮೃತಪಟ್ಟಿದ್ದಾರೆ.

ಬೌರಿಂಗ್‌ ಆಸ್ಪತ್ರೆಯ ತಡೆಗೋಡೆ ಏಳು ಮಂದಿಯ ಪ್ರಾಣ ತೆಗೆದರೆ, ಚಾಮರಾಜಪೇಟೆಯಲ್ಲಿ ಮನೆಯ ಮೇಲ್ಛಾವಣಿಯ ಸಿಮೆಂಟ್‌ ಇಟ್ಟಿಗೆ ಬಿದ್ದು ಮಂಜು ಎಂಬುವರು ಮೃತಪಟ್ಟರೆ, ಮಳೆಯಿಂದ ರಕ್ಷಿಸಿಕೊಳ್ಳಲು ಬೈಕ್‌ ನಿಲುಗಡೆಗಾಗಿ ವಿದ್ಯುತ್‌ ಕಂಬದ ಬಳಿ ಹೋದಾಗ ವಿದ್ಯುತ್‌ ಪ್ರವಹಿಸಿ ಸಯ್ಯದ್‌ ಸೂಫಿಯಾನ್‌ ಎಂಬ ವಿದ್ಯಾರ್ಥಿ ಸಾವನ್ನಪ್ಪಿದರೆ, ಬನ್ನೇರುಘಟ್ಟ ರಸ್ತೆಯ ಮೆಗಾಸಿಟಿ ಮಾಲ್‌ ಸಮೀಪ ತಾಯಿ ಜೊತೆ ಬಟ್ಟೆ ಖರೀದಿಗೆ ಬಂದಿದ್ದ ರಘು ಎಂಬುವರು ವಿದ್ಯುತ್‌ ತಗುಲಿ ಸಾವನ್ನಪ್ಪಿದ್ದಾರೆ.

ಒಟ್ಟಾರೆ ಬಿಸಿಲಿಗೆ ಕಾದು ಬೆಂದಿದ್ದ ಬೆಂಗಳೂರಿಗೆ ತಂಪೆರೆಯಲು ಬಂದ ಮಳೆ ಹತ್ತು ಮಂದಿಯ ಪ್ರಾಣ ತೆಗೆದು ಅವಾಂತರ ಸೃಷ್ಟಿಸಿರುವುದು ದುರ್ದೈವ.

RELATED ARTICLES

Latest News