Homeರಾಜ್ಯಬಿಎಸ್‌‍ವೈ ಅಭಿಮಾನೋತ್ಸವ : ಕೇಸರಿಮಯವಾದ ಕೋಟೆನಾಡು ಚಿತ್ರದುರ್ಗ

ಬಿಎಸ್‌‍ವೈ ಅಭಿಮಾನೋತ್ಸವ : ಕೇಸರಿಮಯವಾದ ಕೋಟೆನಾಡು ಚಿತ್ರದುರ್ಗ

BSY felicitation: Chitradurga turn saffron

ಚಿತ್ರದುರ್ಗ,ಮೇ 8- ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌‍. ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಜೀವನ ಮತ್ತು ಜನಸೇವೆಯನ್ನು ಗೌರವಿಸಲು ನಾಳೆ ಹಮ್ಮಿಕೊಂಡಿರುವ ಬಿಎಸ್‌‍ವೈ ಅಭಿಮಾನೋತ್ಸವ ಹಿನ್ನೆಲೆಯಲ್ಲಿ ಕೋಟೆನಾಡು ಕೇಸರಿಮಯವಾಗಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಬಿ.ಎಸ್‌‍.ಯಡಿಯೂರಪ್ಪ ಅವರಿಗೆ ಅವರ ಹಿತೈಷಿಗಳು, ಅಭಿಮಾನಿಗಳು ನಗರದ ಮಾದಾರ ಚನ್ನಯ್ಯ ಗುರುಪೀಠ ಪಕ್ಕದ ಮೈದಾನದಲ್ಲಿ ಬಿಎಸ್‌‍ವೈ ಅಭಿಮಾನೋತ್ಸವ ಹಮಿಕೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಯಡಿಯೂರಪ್ಪ ಅವರನ್ನು ಸನಾನಿಸಲಿದ್ದಾರೆ.

ಶೂನ್ಯದಲ್ಲಿದ್ದ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸಿದ ಬಿಎಸ್‌‍ವೈ ಅವರ ಸಾಧನೆಗಳನ್ನು ಸರಿಸುವುದು ಮತ್ತು ಜನನಾಯಕನಿಗೆ ಅಭಿಮಾನ ಅರ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಮಠಾಧೀಶರು, ಕೇಂದ್ರ ಸಚಿವರು, ಮಾಜಿ ಸಚಿವರು, ಮಾಜಿ ಶಾಸಕರು, ಹಾಲಿ ಸಂಸದರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಪಕ್ಷದ ಎಲ್ಲಾ ಹಂತದ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ.

ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನದಿನದ ಅಂಗವಾಗಿ ದಾವಣಗೆರೆಯಲ್ಲಿ ನಡೆದಿದ್ದ ಸಿದ್ದರಾಮೋತ್ಸವ ಮಾದರಿಯಲ್ಲೇ ಬಿಎಸ್‌‍ವೈ ಅಭಿಮಾನೋತ್ಸವ ನಡೆಯಲಿದ್ದು, ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಸೇರಿ ಅಂದಾಜು 10 ಲಕ್ಷಕ್ಕೂ ಹೆಚ್ಚು ಜನರು ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ಪ್ರವಾಸ ಮಾಡಿರುವ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಠಾಧೀಶರು, ಗಣ್ಯರು, ಜನಪ್ರತಿನಿಧಿ ಸೇರಿದಂತೆ ಮುಖಂಡರುಗಳು, ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಖುದ್ದು ಆಹ್ವಾನ ನೀಡಿದ್ದಾರೆ. ಚಿತ್ರದುರ್ಗದ ಇತಿಹಾಸದಲ್ಲಿಯೇ ಈ ಕಾರ್ಯಕ್ರಮವು ಮತ್ತೊಂದು ಸುವರ್ಣ ಅಧ್ಯಾಯ ಬರೆಯಲು ಸಜ್ಜಾಗಿದೆ.

ಬಿಎಸ್‌‍ವೈ ಅಭಿಮಾನೋತ್ಸವ ಕೇವಲ ಒಂದು ಸಮಾರಂಭವಲ್ಲ, ಅದೊಂದು ಕೇಸರಿ ಪಡೆಯ ಬೃಹತ್‌ ಶಕ್ತಿ ಪ್ರದರ್ಶನವಾಗಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ನಾಳೆ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಲಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಮೊದಲು ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಅಭಿಮಾನೋತ್ಸವವು, ಪಶ್ಚಿಮ ಬಂಗಾಳದ ಸಿಎಂ ಪ್ರಮಾಣ ವಚನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಮುಂದೂಡಲಾಗಿದೆ.
ಕಾರ್ಯಕ್ರಮಕ್ಕೆ ಜರ್ಮನ್‌ ಮಾದರಿಯ ಪೆಂಡಾಲ್‌ ನಿರ್ಮಾಣ ಮಾಡಲಾಗಿದ್ದು, ಬೃಹತ್‌ ವೇದಿಕೆ ಸಂಪೂರ್ಣ ಕೇಸರಿಮಯವಾಗಿ ಕಣನ ಸೆಳೆಯುತ್ತಿದೆ. ಇನ್ನು ಚಿತ್ರದುರ್ಗ ಸಂಸದ ಹಾಗೂ ಅಭಿಮಾನೋತ್ಸವದ ಗೌರವಾಧ್ಯಕ್ಷ ಹಾಗೂ ಸಂಸದರೂ ಆದ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ವೈಭವಕ್ಕೂ ತಯಾರಿ ಮಾಡಲಾಗಿದೆ.

ಬಿಎಸ್‌‍ವೈ ಪುರ ಪ್ರವೇಶದ ವೇಳೆ ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರು ಪೂರ್ಣ ಕುಂಭಮೇಳದೊಂದಿಗೆ ಅವರನ್ನು ಸ್ವಾಗತಿಸಲಿದ್ದಾರೆ. ವಿಶೇಷ ಎಂದರೆ ಯಡಿಯೂರಪ್ಪನವರು ಹಿಂದೆ ಬಳಸುತ್ತಿದ್ದ ಸಿಕೆಆರ್‌ 45 ಅಂಬಾಸಿಡರ್‌ ಕಾರು ಈ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿರಲಿದೆ. ಅಲ್ಲದೆ ಬಿಎಸ್‌‍ವೈ ಅವರ ಹೋರಾಟದ ಬದುಕಿನ ಕುರಿತ ಕಮಲದಲ್ಲಿ ಅರಳಿದ ಹೂವು ಕೆಂದಾವರೆ ಮತ್ತು ಸದನ ಶಿಕಾರಿ ಪುಸ್ತಕಗಳು ನಾಳೆ ಬಿಡುಗಡೆಯಾಗಲಿದ್ದು, ಇವರ ಅಧಿಕಾರಾವಧಿಯಲ್ಲಿ ಮಹಿಳೆಯರು ಹಾಗೂ ಜನಸಾಮಾನ್ಯರ ಹಿತಕ್ಕಾಗಿ ಜಾರಿಗೊಳಿಸಿದ ಯೋಜನೆಗಳ ಸ್ತಬ್ದ ಚಿತ್ರಗಳ ಮೂಲಕ ಜನಮನ ಸೆಳೆಯಲು ಆಯೋಜಕರು ಮುಂದಾಗಿದ್ದಾರೆ.

ಚುನಾವಣಾ ಫಲಿತಾಂಶದ ಏರಿಳಿತದ ನಡುವೆಯೂ ಬಿಎಸ್‌‍ವೈ ಅಭಿಮಾನೋತ್ಸವದ ಮೂಲಕ ಬಿಜೆಪಿ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಲು ಮುಂದಾಗಿದೆ. ಹರ ಗುರು ಚರಮೂರ್ತಿಗಳ ಸಮುಖದಲ್ಲಿ ನಡೆಯುವ ಈ ಕಾರ್ಯಕ್ರಮದಿಂದ ಇಡೀ ರಾಜ್ಯವೇ ಈಗ ಚಿತ್ರದುರ್ಗದತ್ತ ತಿರುಗಿ ನೋಡುವಂತಾಗಿದೆ.

RELATED ARTICLES

Latest News