Saturday, April 11, 2026
Homeರಾಜ್ಯ"ನಾಳೆ ಬೆಳಗ್ಗೆ 11 ಗಂಟೆಯೊಳಗೆ ಬೀದರ್‌ ಡಿಸಿನ ನನ್‌ ಕಚೇರಿಗೆ ಕರ್ಕೊಂಡ್‌ ಬರ್ಬೇಕ್‌"

“ನಾಳೆ ಬೆಳಗ್ಗೆ 11 ಗಂಟೆಯೊಳಗೆ ಬೀದರ್‌ ಡಿಸಿನ ನನ್‌ ಕಚೇರಿಗೆ ಕರ್ಕೊಂಡ್‌ ಬರ್ಬೇಕ್‌”

By 11 am tomorrow, bring the Bidar DC's office to my office

ಬೆಂಗಳೂರು,ಮಾ.25- ವಿಧಾನ ಪರಿಷತ್‌ ಸದಸ್ಯರಿಗೆ ಕಳೆದ ನಾಲ್ಕು ವರ್ಷಗಳಿಂದ ಕೊಠಡಿ ಮಂಜೂರು ಮಾಡದೆ ಉದ್ಧಟತನ ತೋರಿದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 11 ಗಂಟೆಯೊಳಗೆ ಬೀದರ್‌ ಜಿಲ್ಲಾಧಿಕಾರಿಯನ್ನು ನನ್ನ ಕಚೇರಿಗೆ ಕರೆತರಬೇಕೆಂದು ವಿಧಾನಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸದನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌‍ನ ಪುಟ್ಟಣ್ಣ ಅವರು ವಿಷಯ ಪ್ರಸ್ತಾಪಿಸಿ ಸದಸ್ಯರಾದ ಭೀಮರಾವ್‌ ಪಾಟೀಲ್‌ ಅವರಿಗೆ ಕಳೆದ ನಾಲ್ಕೂವರೆ ವರ್ಷದಿಂದ ಅಲ್ಲಿನ ಜಿಲ್ಲಾಧಿಕಾರಿ ಕೊಠಡಿಯನ್ನು ಕೊಟ್ಟಿಲ್ಲ. ಹಕ್ಕುಬಾಧ್ಯತ ಸಮಿತಿ ಮತ್ತು ಸ್ವತಃ ಸಭಾಧ್ಯಕ್ಷರೇ ಪತ್ರ ಬರೆದಿದ್ದರೂ ಅವರು ಕವಡೆ ಕಾಸಿನ ಕಿಮತ್ತು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳಿಗೆ ವಿಧಾನಪರಿಷತ್‌ ಸದಸ್ಯರು ಎಂದರೆ ಬೆಲೆಯೇ ಇಲ್ಲ. ಯಾರಿಗೂ ಗೌರವವನ್ನೂ ಕೊಡುವುದಿಲ್ಲ. ಹಕ್ಕು ಬಾಧ್ಯತಾ ಸಮಿತಿ ಬೀದರ್‌ಗೆ ಹೋಗಿ ಸದಸ್ಯರಿಗೆ ಕೊಠಡಿ ಮಂಜೂರು ಮಾಡುವಂತೆ ಸೂಚಿಸಿದ್ದರು. ಅಲ್ಲದೆ ಸಭಾಧ್ಯಕ್ಷರು 14.09.2025ರಂದು ಪತ್ರ ಬರೆದು ತಕ್ಷಣವೇ ಕೊಠಡಿ ಮಂಜೂರು ಮಾಡಬೇಕೆಂದು ನಿರ್ದೇಶನ ನೀಡಿದ್ದೀರಿ. ಹಾಗಾದರೆ ನಿಮಗೆ ಬೆಲೆ ಇಲ್ಲವೇ ಎಂದು ಪುಟ್ಟಣ್ಣ ಹೊರಟ್ಟಿಯವರನ್ನು ಪ್ರಶ್ನಿಸಿದರು.

ತಕ್ಷಣವೇ ಜಿಲ್ಲಾಧಿಕಾರಿಗಳನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಬೇಕು. ನಿಮಗೆ ಸಂಪೂರ್ಣವಾದ ಸ್ವಾತಂತ್ರ್ಯವಿದೆ. ಅವರೇನು ಈ ಸದನಕ್ಕಿಂತ ದೊಡ್ಡವರಲ್ಲ. ಅವರನ್ನು ಸದನಕ್ಕೆ ಕರೆಸಿ ಕಟಕಟೆಯಲ್ಲಿ ನಿಲ್ಲಿಸಿ ವಾಗ್ದಂಡನೆ ವಿಧಿಸಿ. ಇದು ಕೇವಲ ಒಬ್ಬ ಸದಸ್ಯರ ಪ್ರಶ್ನೆಯಲ್ಲ. ಬದಲಿಗೆ ಇಡೀ ಸದನದ ಗೌರವದ ಪ್ರಶ್ನೆ.ಇದು ನಮ ಹಕ್ಕಿನ ಪ್ರಶ್ನೆಯೂ ಹೌದು. ಇದನ್ನು ರಕ್ಷಣೆ ಮಾಡುವವರು ನೀವೇ. ನಮನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂದರೆ ನಾವು ಯಾರ ಬಳಿ ಕೇಳಬೇಕು ಎಂದು ಪುಟ್ಟಣ್ಣ ಪ್ರಶ್ನೆ ಮಾಡಿದರು.

ವಿಧಾನಪರಿಷತ್‌ನ ಪ್ರತಿಪಕ್ಷದ ಉಪನಾಯಕ ಸುನೀಲ್‌ ವಲ್ಯಾಪುರೆ ಮಾತನಾಡಿ, ಇದು ನಾಚಿಕೆಗೇಡಿನ ಸಂಗತಿ. ಒಬ್ಬ ಜಿಲ್ಲಾಧಿಕಾರಿ ಜನಪ್ರತಿನಿಧಿಗಳಿಗೆ ಕೊಠಡಿ
ಮಂಜೂರು ಮಾಡುವುದಿಲ್ಲ ಎಂದರೆ ಉದ್ಧಟತನದ ಪರಿಮಾವಧಿ. ಕೂಡಲೇ ಅವರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌‍ನ ಮುಖ್ಯ ಸಚೇತಕ ಸಲೀಂ ಅಹಮದ್‌ ಮಾತನಾಡಿ, ಇದು ಸದನಕ್ಕೆ ಮಾಡಿದ ಅಗೌರವ. ಜಿಲ್ಲಾಧಿಕಾರಿಗಳು ಇಷ್ಟು ಉದ್ದಟತನದಿಂದ ವರ್ತಿಸಬಾರದು. ಹಕ್ಕು ಭಾದ್ಯತ ಸಮಿತಿ ಮತ್ತು ಸಭಾಧ್ಯಕ್ಷರೇ ಪತ್ರ ಬರೆದ ಮೇಲೆ ಕೊಠಡಿ ಕೊಟ್ಟಿಲ್ಲ ಎಂದರೆ ಸಭಾಧ್ಯಕ್ಷರಿಗೆ ಮಾಡಿದ ಅವಮಾನ. ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲೇಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್‌‍ನ ಐವಾನ್‌ ಡಿಸೋಜ ಮಾತನಾಡಿ, ನಮ ಕಡೆ ಜಿಲ್ಲಾಧಿಕಾರಿಗಳು ಕೊಠಡಿಗಳನ್ನು ನೀಡಿದ್ದಾರೆ. ನಾಲ್ಕೂವರೆ ವರ್ಷದಿಂದ ಕೊಠಡಿ ನೀಡುವಂತೆ ಬೇಡಿಕೆ ಇಟ್ಟಿದ್ದರೂ ಮಂಜೂರು ಮಾಡಿಲ್ಲ ಎಂದರೆ ಜಿಲ್ಲಾಧಿಕಾರಿಗೆ ಶಿಕ್ಷೆ ಆಗಲೇಬೇಕು. ಸಭಾಪತಿಗಳು ತಡಮಾಡದೇ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.

ಜೆಡಿಎಸ್‌‍ನ ಭೋಜೇಗೌಡ ಮಾತನಾಡಿ, ವಿಧಾನಪರಿಷತ್‌ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸಲು ಯಾರಿಗೂ ಅವಕಾಶವಿಲ್ಲ. ಜಿಲ್ಲಾಧಿಕಾರಿಗಳ ನಡೆ ಒಪ್ಪುವಂತದ್ದಲ್ಲ. ಅವರ ವಿರುದ್ದ ಶಿಸ್ತು ಕ್ರಮ ಆಗಲೇಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಕಾಂಗ್ರೆಸ್‌‍ನ ನಾಗರಾಜ್‌ ಯಾದವ್‌, ಭೀಮರಾವ್‌ ಪಾಟೀಲ್‌, ರಮೇಶ್‌ ಬಾಬು ಮಾತನಾಡಿ, ಜಿಲ್ಲಾಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ತದನಂತರ ಸಭಾನಾಯಕ ಭೋಸರಾಜ್‌ ಮಾತನಾಡಿ, ಇದು ಗಂಭೀರವಾದ ಪ್ರಕರಣ. ಸದಸ್ಯರ ಗೌರವದ ಪ್ರಶ್ನೆ. ನಾನು ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತನಾಡುತ್ತೇನೆ. ಅವರ ವಿರುದ್ದ ಶಿಸ್ತುಕ್ರಮ ತೆಗೆದುಕೊಳ್ಳವುದಾಗಿ ಹೇಳಿದರು. ಅಂತಿಮವಾಗಿ ತಮ ಆದೇಶ ಪ್ರಕಟಿಸಿದ ಸಭಾಪತಿ ಹೊರಟ್ಟಿ ಅವರು, ಗುರುವಾರ ಬೆಳಗ್ಗೆ 11 ಗಂಟೆಯೊಳಗೆ ಯಾವುದೇ ಕಾರಣ ನೀಡದೇ ಬೀದರ್‌ ಜಿಲ್ಲಾಧಿಕಾರಿಯನ್ನು ನನ್ನ ಕಚೇರಿಗೆ ಕರೆಸಬೇಕೆಂದು ಸಭಾನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

RELATED ARTICLES

Latest News