Homeರಾಜ್ಯಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಮರ್ಥ ನಾಯಕನ ಆಯ್ಕೆ : ಮಲ್ಲಿಕಾರ್ಜುನ ಖರ್ಗೆ

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಮರ್ಥ ನಾಯಕನ ಆಯ್ಕೆ : ಮಲ್ಲಿಕಾರ್ಜುನ ಖರ್ಗೆ

capable leader will be chosen for the post of KPCC President: Mallikarjun Kharge

ಕಲಬುರಗಿ, ಮೇ 31- ಮುಂದಿನ ಎರಡು ವರ್ಷಗಳಲ್ಲಿ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷರನ್ನು ಆಯ್ಕೆಮಾಡುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾದ ಬಳಿಕ ಕೆಪಿಸಿಸಿ ಸ್ಥಾನವನ್ನು ಬಿಟ್ಟುಕೊಡುವುದು ಸಹಜ. ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಲೇ ಬೇಕಿದೆ ಎಂದರು.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹುಡುಕಾಟ ನಡೆಯುತ್ತಿದೆ. ನೂತನ ಅಧ್ಯಕ್ಷರು ಒಳ್ಳೆಯವರಾಗಿರಬೇಕು. ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ನಡುವೆ ಹೊಂದಾಣಿಕೆ ಇರಬೇಕು. ಪಕ್ಷದ ಹಿತದೃಷ್ಟಿ ಹಾಗೂ ಪಕ್ಷ ಸಂಘಟನೆ ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡುತ್ತೇವೆ. ಇನ್ನೂ 24 ತಿಂಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದೆ. ಮುಂದಿನ ದಿನಗಳಲ್ಲಿ ವೇಗವಾಗಿ ಕೆಲಸ ಮಾಡುವ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಗ್ರವಾಗಿ ಪಕ್ಷ ಕಟ್ಟುವ ನಾಯಕರನ್ನು ಹುಡುಕಬೇಕಾಗಿದೆ. ಮುಖ್ಯಮಂತ್ರಿಯವರ ಜೊತೆ ಸಹಕರಿಸಬೇಕು. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಅಧ್ಯಕ್ಷರನ್ನು ನೇಮಿಸಲಾಗುತ್ತಿದೆ ಎಂದಿದ್ದಾರೆ.

ಸಿದ್ದರಾಮಯ್ಯ ಬಣದ ಪ್ರಯತ್ನ:
ಈವರೆಗೂ ಪಕ್ಷದ ಆಧಿಪತ್ಯ ಡಿ.ಕೆ.ಶಿವಕುಮಾರ್‌ ಅವರ ಬಳಿಯಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಇಬ್ಬರೂ ಹಳೇ ಮೈಸೂರು ಭಾಗದವರಾಗಿದ್ದರು. ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂಬ ಅಸಮಾಧಾನ ಇತ್ತು.ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಸಹಜವಾಗಿಯೇ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಿಂದ ಈವರೆಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್‌ ಪಟ್ಟು ಹಿಡಿದು ಕೊನೆಗೂ ಮುಖ್ಯಮಂತ್ರಿ ಸ್ಥಾನ ಧಕ್ಕಿಸಿಕೊಂಡಿದ್ದಾರೆ.

ಮುಂದೆ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡುವವರು ಕೂಡ ಇದೇ ರೀತಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸುವ ಸಾಧ್ಯತೆ ಇದೆ. ಪ್ರಸ್ತುತ ಎರಡು ವರ್ಷಗಳ ಕಾಲ ಸಚಿವರಾಗಿದ್ದಕ್ಕಿಂತಲೂ ಪಕ್ಷದ ಅಧ್ಯಕ್ಷ ಸ್ಥಾನ ಪ್ರಭಾವಿ ಎಂದು ಭಾವಿಸಲಾಗಿದೆ.

ಆದರೆ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಿರುವುದರಿಂದ ಮುಂದಿನ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್‌‍ ಮರಳಿ ಅಧಿಕಾರ ಹಿಡಿದರೂ ಡಿ.ಕೆ.ಶಿವಕುಮಾರ್‌ ಮುಂದುವರೆಯುವ ಸಾಧ್ಯತೆ ಇದೆ. ಹೀಗಾಗಿ ಕೆಲವರು ಪಕ್ಷದ ಅಧ್ಯಕ್ಷರಾಗಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಸದ್ಯದ ಮಟ್ಟಿಗೆ ಸತೀಶ್‌ ಜಾರಕಿಹೊಳಿ ಸಚಿವ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡರ ಮೇಲೂ ಕಣ್ಣಿಟ್ಟಿದ್ದಾರೆ. ತಾವು ಹೈಕಮಾಂಡ್‌ ಬಳಿ ಪಕ್ಷದ ಅಧ್ಯಕ್ಷ ಸ್ಥಾನ ಕೇಳಿರುವುದು ನಿಜ ಎಂದು ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಆದರೆ ಪಕ್ಷ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧ ಎಂದು ಪುನರುಚ್ಚರಿಸಿದ್ದಾರೆ.

ಈ ಮೊದಲು 2010ರ ಅಕ್ಟೋಬರ್‌ 27 ರಿಂದ 2018ರ ಜುಲೈ 4ರ ವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಡಾ.ಜಿ.ಪರಮೇಶ್ವರ್‌ ಮುಖ್ಯಮಂತ್ರಿ ಹುದ್ದೆಗೆ ಆಸೆ ಪಟ್ಟಿದ್ದರು. ಆದರೆ ಅದು ಸಾಧ್ಯವಾಗಿಲ್ಲ. 2019ರಲ್ಲಿ ಕಾಂಗ್ರೆಸ್‌‍-ಜೆಡಿಎಸ್‌‍ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಯಾಗಿದ್ದರು. 2023ರಲ್ಲಿ ಕಾಂಗ್ರೆಸ್‌‍ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಲು ಸಾಕಷ್ಟು ಪ್ರಯತ್ನ ಮಾಡಿದ್ದರೂ ಅದು ಈಡೇರಲಿಲ್ಲ.

ಸಿದ್ದರಾಮಯ್ಯ ಅವರ ಸಂಪುಟದಲ್ಲಿ ತಾವೊಬ್ಬರೇ ಉಪ ಮುಖ್ಯಮಂತ್ರಿಯಾಗಿರಬೇಕೆಂದು ಡಿ.ಕೆ.ಶಿವಕುಮಾರ್‌ ಪಟ್ಟು ಹಿಡಿದಿದ್ದರಿಂದಾಗಿ ಇತರ ಆಕಾಂಕ್ಷಿಗಳಿಗೆ ಅವಕಾಶ ಸಿಗಲಿಲ್ಲ.
ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ಪರಮೇಶ್ವರ್‌ ಉಪ ಮುಖ್ಯಮಂತ್ರಿಯಾಗಲು ಬಯಸಿದ್ದರೂ ನಾಲ್ಕು ಜನರನ್ನು ಉಪ ಮುಖ್ಯಮಂತ್ರಿ ಮಾಡುವ ಸಾಧ್ಯತೆ ಇರುವುದರಿಂದಾಗಿ ಆ ಹುದ್ದೆಗೆ ಪ್ರಾಮುಖ್ಯ ಇಲ್ಲ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಪರಮೇಶ್ವರ್‌ ಹಿಂದೇಟು ಹಾಕುತ್ತಿದ್ದಾರೆ.

ತಮಗೆ ಮತ್ತೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ, ಮುಂದಿನ ಬಾರಿ ಕಾಂಗ್ರೆಸ್‌‍ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರುವುದಾಗಿ ಪರಮೇಶ್ವರ್‌ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಹೈಕಮಾಂಡ್‌ ಇದಕ್ಕೆ ಒಪ್ಪುವ ಸಾಧ್ಯತೆ ಕಡಿಮೆ ಇದೆ.ರಾಜ್ಯದ ಪ್ರಮುಖವಾದ ಎರಡು ಹುದ್ದೆಗಳು ಮತ್ತೆ ಹಳೇ ಮೈಸೂರು ಭಾಗಕ್ಕೆ ಸೀಮಿತಗೊಳ್ಳುತ್ತವೆ ಎಂಬ ಕಾರಣಕ್ಕಾಗಿ ಈ ಭಾರಿ ಉತ್ತರ ಕರ್ನಾಟಕ ಭಾಗಕ್ಕೆ ಅಧ್ಯಕ್ಷ ಸ್ಥಾನ ನೀಡುವ ಚರ್ಚೆಗಳಾಗಿವೆ.

ಬೀದರ್‌ ಜಿಲ್ಲೆಯ ಈಶ್ವರ್‌ ಖಂಡ್ರೆ ವೀರಶೈವ ಲಿಂಗಾಯತ ಸಮುದಾಯದವರಾಗಿರುವುದರಿಂದ ಅವರಿಗೆ ಮಣೆ ಹಾಕಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಉಳಿದಂತೆ ಎಂ.ಬಿ.ಪಾಟೀಲ್‌, ದಿನೇಶ್‌ ಗುಂಡೂರಾವ್‌, ಕೆ.ಎಚ್‌.ಮುನಿಯಪ್ಪ, ಎಚ್‌.ಕೆ.ಪಾಟೀಲ್‌ ಸೇರಿದಂತೆ ಕೆಲ ಹಿರಿಯ ನಾಯಕರುಗಳ ಹೆಸರುಗಳು ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಚರ್ಚೆಯಾಗುತ್ತಿವೆ.

RELATED ARTICLES

Latest News