Homeರಾಜ್ಯರಾಜ್ಯಸಭಾ ಚುನಾವಣೆಗೆ ನಾಳೆಯಿಂದ ನಾಮಪತ್ರ ಸಲ್ಲಿಕೆ

ರಾಜ್ಯಸಭಾ ಚುನಾವಣೆಗೆ ನಾಳೆಯಿಂದ ನಾಮಪತ್ರ ಸಲ್ಲಿಕೆ

Nomination filing for Rajya Sabha elections from tomorrow

ಬೆಂಗಳೂರು, ಮೇ 31- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ನಾಳೆ ಅಧಿಸೂಚನೆ ಪ್ರಕಟವಾಗಲಿದ್ದು, ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ನಾರಾಯಣ ಕೊರಗಪ್ಪ, ಈರಣ್ಣ ಕಡಾಡಿ ಅವರು ಜೂನ್‌ 25ರಂದು ರಾಜ್ಯ ಸಭಾ ಸದಸ್ಯ ಸ್ಥಾನದಿಂದ ನಿವೃತ್ತರಾಲಿಗದ್ದಾರೆ. ನಿವೃತ್ತಿಯಿಂದ ತೆರವಾಗುವ ಈ 4 ರಾಜ್ಯಸಭಾ ಸದಸ್ಯ ಸ್ಥಾನಗಳಿಗೆ ಭಾರತೀಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.

ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷವು ವಿಧಾನಸಭೆಯಲ್ಲಿ ಹೊಂದಿರುವ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಮೂರು ಸ್ಥಾನಗಳನ್ನು ಗೆಲ್ಲಬಹುದು. ಬಿಜೆಪಿ ಒಂದು ಸ್ಥಾನ ಪಡೆಯಲು ಅವಕಾಶವಿದೆ. ಆದರೆ, 18 ಶಾಸಕರನ್ನು ಹೊಂದಿರುವ ಜೆಡಿಎಸ್‌‍ ಒಂದು ಸ್ಥಾನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್‌‍ ಮೈತ್ರಿಯ ಎನ್‌ಡಿಎ ಅಭ್ಯರ್ಥಿಯನ್ನು ರಾಜ್ಯಸಭಾ ಚುನಾವಣಾ ಕಣಕ್ಕೆ ಇಳಿಸಲಾಗುತ್ತದೆ. ದೇವೇಗೌಡರನ್ನು ಮರು ಆಯ್ಕೆ ಮಾಡಬೇಕು ಎಂಬ ಒತ್ತಡ ಅವರ ಹಿತೈಷಿಗಳು ಹಾಗೂ ಅಭಿಮಾನಿಗಳಿಂದ ಇದೆ. ಆದರೆ, ದೇವೇಗೌಡರಾಗಲಿ, ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರಾಗಲಿ ಬಿಜೆಪಿ ಕೇಂದ್ರ ನಾಯಕರ ಮುಂದೆ ಈ ಪ್ರಸ್ತಾಪ ಮಾಡಿಲ್ಲ. ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಸಭೆ ನಡೆಸಿದೆ.

ಉಭಯ ಪಕ್ಷಗಳ ನಾಯಕರು ಸಮಾಲೋಚಿಸಿ ದೇವೇಗೌಡರಿಗೆ ರಾಜ್ಯಸಭೆಗೆ ಅವಕಾಶ ಮಾಡಿಕೊಡುತ್ತಾರೆ ಎಂಬ ನಿರೀಕ್ಷೆ ಇದೆ. ಏಕೆಂದರೆ ಬಿಜೆಪಿ ಕೂಡ ಇದುವರೆಗೂ ಅಧಿಕೃತ ಅಭ್ಯರ್ಥಿ ಪ್ರಕಟಿಸಿಲ್ಲ.

ನೂತನ ಮುಖ್ಯಮಂತ್ರಿ ಪ್ರಮಾಣ ವಚನ, ನೂತನ ಸಂಪುಟ ರಚನೆಯ ಒತ್ತಡದಲ್ಲಿ ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷದ ನಾಯಕರಿರುವುದರಿಂದ ಇನ್ನೂ ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ. ಮಲ್ಲಕಾರ್ಜುನ ಖರ್ಗೆ ಅವರು ಮರು ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಉಳಿದಿಬ್ಬರು ಅಭ್ಯರ್ಥಿಗಳು ಯಾರೆಂಬದು ಸ್ಪಷ್ಟವಾಗಿಲ್ಲ. ಹಲವು ಆಕಾಂಕ್ಷಿಗಳಿದ್ದು, ಕೆಲವರ ಹೆಸರುಗಳು ಮುಂಚೂಣಿಯಲ್ಲಿ ಪ್ರಸ್ತಾಪವಾಗುತ್ತಿವೆ.

ನಾಮಪತ್ರ ಸಲ್ಲಿಕೆಗೆ ಜೂನ್‌ 8 ಕಡೆಯ ದಿನವಾಗಿದ್ದು, ಜೂನ್‌ 9ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಸಿಂಧುವಾದ ನಾಮಪತ್ರಗಳನ್ನು ಸಂಜೆ ವೇಳೆಗೆ ಪ್ರಕಟಿಸಲಾಗುತ್ತದೆ.
ನಾಮಪತ್ರಗಳನ್ನು ವಾಪಸ್ಸು ಪಡೆಯಲು ಜೂನ್‌ 11ರವರೆಗೂ ಅವಕಾಶವಿದೆ. ಅಗತ್ಯವಿದ್ದರೆ ಜೂನ್‌ 8ರಂದು ಬೆಳಿಗ್ಗೆ 9ರಿಂದ ಸಂಜೆ ನಾಲ್ಕು ಗಂಟೆಯವರೆಗೆ ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ನಡೆದು ಚುನಾವಣಾಧಿಕಾರಿ ಫಲಿತಾಂಶ ಪ್ರಕಟಿಸಲಿದ್ದಾರೆ.

RELATED ARTICLES

Latest News