ಬೆಂಗಳೂರು, ಮೇ31- ಮುಖ್ಯಮಂತ್ರಿ ಆಯ್ಕೆಯ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಸಚಿವ ಸಂಪುಟ ರಚನೆಯ ಪ್ರಕ್ರಿಯೆಗಳು ಶುರುವಾಗಿದ್ದು, ಅವಕಾಶಕ್ಕಾಗಿ ಶಾಸಕರ ದಂಡು ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನೆಗೆ ಎಡತಾಕಲಾರಂಭಿಸಿದೆ. ಮಾಜಿ ಸಚಿವರು, ಹಿರಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಡಿ.ಕೆ.ಶಿವಕುಮಾರ್ ಅವರ ಮನೆಗೆ ಬಂದು ಹೂಗುಚ್ಛ ನೀಡಿ ಶುಭ ಹಾರೈಸುತ್ತಿದ್ದು, ಜೊತೆಯಲ್ಲೇ ಸಂಪುಟದಲ್ಲಿ ತಮಗೆ ಅವಕಾಶ ನೀಡುವಂತೆ ಒತ್ತಡ ಹೇರುತ್ತಿದ್ದಾರೆ.
ಈ ಮೊದಲು ಸಂಪುಟದಲ್ಲಿ ಸಚಿವರಾಗಿದ್ದವರ ಪೈಕಿ ಬಹುತೇಕರಿಗೆ ಕೊಕ್ ಸಿಗಲಿದೆ ಎಂದು ಹೇಳಲಾಗುತ್ತಿದೆ. ಡಾ.ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಜಮೀರ್ ಅಹಮದ್ಖಾನ್, ಎಚ್.ಕೆ.ಪಾಟೀಲ್, ಎನ್.ಚೆಲುವರಾಯ ಸ್ವಾಮಿ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಮಾಂಕಾಳ ವೈದ್ಯ, ಸಂತೋಷ್ ಲಾಡ್, ಬೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ಈಶ್ವರ್ ಖಂಡ್ರೆ ಅವರು ಮರಳಿ ಸಂಪುಟ ಸೇರುವವರ ಪಟ್ಟಿಯಲ್ಲಿದ್ದಾರೆ.
ಸಂಪುಟ ಸೇರುವುದು ಅನುಮಾನಾಸ್ಪದವಾಗಿರುವ ಆರ್.ಬಿ.ತಿಮಾಪೂರ್, ದಿನೇಶ್ ಗುಂಡೂರಾವ್, ಎಂ.ಬಿ.ಪಾಟೀಲ್, ಶಿವರಾಜ್ ತಂಗಡಗಿ, ಮಧುಬಂಗಾರಪ್ಪ, ಕೆ.ಎಚ್.ಮುನಿಯಪ್ಪ ಸೇರಿದಂತೆ ಮತ್ತಿತರರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಈವರೆಗೂ ಸಚಿವ ಸ್ಥಾನ ಸಿಗದೇ ಇರುವ ಎಸ್.ಎನ್.ನಾರಾಯಣಸ್ವಾಮಿ. ಪಿ.ಎಂ.ಅಶೋಕ್, ರಾಘವೇಂದ್ರ ಹಿಟ್ನಾಳ್, ವಿಜಯಾನಂದ ಕಾಶಪ್ಪನವರ್, ಪುಟ್ಟರಂಗ ಶೆಟ್ಟಿ, ಬಿ.ಆರ್. ಪಾಟೀಲ್, ತನ್ವೀರ್ ಸೇಠ್, ರೂಪಕಲಾ, ಕೆ.ಎಂ.ಶಿವಲಿಂಗೇ ಗೌಡ ಅವರು ಇಂದು ಡಿ.ಕೆ.ಶಿವಕುಮಾರ್ ಮನೆಗೆ ಬಂದು, ತಾವು ಹಿರಿಯರು ಹಾಗೂ ಅನುಭವಿಗಳಾಗಿದ್ದು ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಯುವ ಶಾಸಕರಾದ ಧ್ರುವನಾರಾಯಣ್ ಕೂಡ ಸಚಿವ ಸ್ಥಾನಕ್ಕೆ ಒತ್ತಾಯಿಸಿದ್ದಾರೆ.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಬಳಿಕ ಸುದ್ದಿಗಾರರೊಂದಿಗೆ ತಮ ಮತ್ತು ಡಿ.ಕೆ.ಶಿವಕುಮಾರ್ ಅವರ ಸ್ನೇಹ 40 ವರ್ಷಗಳಷ್ಟು ಹಳೆಯದ್ದು, ಎಲ್ಲಾ ರೀತಿಯಲ್ಲೂ ಅವರ ಜೊತೆ ಸಹಕಾರ ನೀಡಿದ್ದೇನೆ. ನಾನು ಯಾವ ರೀತಿಯ ರಾಜಕಾರಣಿ ಎಂದು ಅವರಿಗೆ ಗೊತ್ತಿದೆ. ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲು ಬಂದಿದ್ದಾಗಿ ಹೇಳಿದ್ದಾರೆ.
ಮಾಜಿ ಸಚಿವ ಆರ್.ಬಿ.ತಿಮಾಪೂರ್ ಸಚಿವ ಸಂಪುಟ ಸೇರಲು ಎಲ್ಲರಿಗೂ ಆಸೆ ಇರುತ್ತದೆ. ನನಗೂ ಇದೆ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಅಂತಿಮ ಪಟ್ಟಿ ಪ್ರಕಟವಾದಾಗಲೇ ಯಾರು ಸಂಪುಟ ಸೇರುತ್ತಾರೆ ಎಂದು ಗೊತ್ತಾಗುತ್ತದೆ ಎಂದಿದ್ದಾರೆ.
ಪಿ.ಎಂ.ಅಶೋಕ್ ಮಾತನಾಡಿ, ಯುವ ನಾಯಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ. ಒಳ್ಳೆಯ ಆಡಳಿತ ನೀಡುವ ಭರವಸೆ ಇದೆ. ನಾವೆಲ್ಲಾ ಉತ್ತಮ ಸ್ನೇಹಿತರು. ಸಂಪುಟದಲ್ಲಿ ಅವಕಾಶ ಸಿಗುವ ಆಸೆ ಇದೆ. ಒಂದು ವೇಳೆ ಸಚಿವ ಸ್ಥಾನ ಸಿಗದೇ ಇದ್ದರೂ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಧ್ರುವನಾರಾಯಹಣ್ ಮಾತನಾಡಿ, ತಮ ತಂದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಸಚಿವ ಸ್ಥಾನಕ್ಕೆ ಅರ್ಹವಾದ ವ್ಯಕ್ತಿ. ಪಕ್ಷಕ್ಕಾಗಿ ಜೀವ ಅರ್ಪಣೆ ಮಾಡಿದ್ದಾರೆ. ಮೊದಲ ಬಾರಿ ಗೆದ್ದ ಐವರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕೆಂಬ ಬೇಡಿಕೆ ಇದೆ. ಇದರಿಂದ ಯುವಕರಿಗೆ ಆದ್ಯತೆ ನೀಡಿದ್ದಂತಾಗುತ್ತದೆ ಎಂದು ಹೇಳಿದ್ದಾರೆ.
ಬಂಗಾರ ಪೇಟೆಯ ಎಸ್.ಎನ್.ನಾರಾಯಣಸ್ವಾಮಿ, ಕೋಲಾರ ಜಿಲ್ಲೆಯಲ್ಲಿ ಒಕ್ಕಲಿಗ ಮತ್ತು ಬಲಗೈ ಸಮುದಾಯ ಪ್ರಬಲವಾಗಿದೆ. ಈ ಎರಡೂ ಸಮುದಾಯಗಳಿಗೆ ಸಚಿವ ಸ್ಥಾನ ಕೊಟ್ಟರೆ ಕೋಲಾರ ಜಿಲ್ಲೆಗೆ ಅನುಕೂಲವಾಗುತ್ತದೆ. ಇಲ್ಲವಾದರೆ ಮುಂದೆ ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗಬಹುದು ಎಂದಿದ್ದಾರೆ. ಮಾಲೂರು ಶಾಸಕ ಕೆ.ವೈ.ನಂಜೇಗೌಡ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ ಅಥವಾ ನಾಳೆ ದೆಹಲಿಗೆ ತೆರಳಲಿದ್ದು, ಸಂಭವನೀಯ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳ ಪಟ್ಟಿಯನ್ನು ಸಲ್ಲಿಸಿ ಅಂಗೀಕಾರ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
